ಭಾನುವಾರ, ನವೆಂಬರ್ 29, 2020
25 °C
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆ, ನಳೀನ್ ಕುಮಾರ ಕಟೀಲ್‌ ಭಾಗಿ

ಅಂಗಡಿ ಪತ್ನಿ ಬದಲು ಮಕ್ಕಳಿಗೆ ಟಿಕೆಟ್ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ದಿವಂಗತ ಸುರೇಶ ಅಂಗಡಿ ಪತ್ನಿ ಬದಲು ಪುತ್ರಿಯರಿಗೆ ಟಿಕೆಟ್‌ ನೀಡಬೇಕು ಎಂದು ಬೆಳಗಾವಿಯ ಕೆಲ ಬಿಜೆಪಿ ನಾಯಕರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮುಂದೆ ಬೇಡಿಕೆ ಇಟ್ಟಿದ್ದಾರೆ.

ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಈ‌ ಬೇಡಿಕೆ ವ್ಯಕ್ತವಾಯಿತು. ಅಂಗಡಿ ಅವರ ಪತ್ನಿ ಮಂಗಳಾ ಅವರಿಗೆ ಒಂದು ಅವಧಿಗೆ ಟಿಕೆಟ್‌ ನೀಡುವುದು, ಮುಂದಿನ ಅವಧಿಗೆ ಮತ್ತೊಬ್ಬರನ್ನು ಆಯ್ಕೆ ಮಾಡುವುದು ಬೇಡ. ವಯಸ್ಸಿನ ಕಾರಣವೂ ಸಮಸ್ಯೆಯಾಗಬಹುದು. ಆದ್ದರಿಂದ ಪುತ್ರಿಯರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ಪ್ರಮುಖರು ಕೇಳಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ತಿಳಿಸಿದರು.

ಬುಧವಾರ ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ್‌ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದನ್ನು ತಳ್ಳಿ ಹಾಕಿದರು.

ಶೆಟ್ಟರ್‌ ‘ಬೆಳಗಾವಿ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ಮಸ್ಕಿ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭಾ ಚುನಾವಣೆ ಇನ್ನು ಘೋಷಣೆಯಾಗಿಲ್ಲ. ಇದರ ಬಗ್ಗೆ ಚರ್ಚೆಯೂ ನಡೆದಿಲ್ಲ. ಬೆಳಗಾವಿಯಲ್ಲಿ ಪ್ರಮುಖ ನಾಯಕರಲ್ಲಿ ಕೆಲ ಗೊಂದಲಗಳಿದ್ದವು. ಅವುಗಳ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷರು ಮಾತನಾಡಿದ್ದಾರೆ’ ಎಂದರು.

‘ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ ಬಗ್ಗೆ ಯಾವುದೇ ಗೊಂದಲವಿಲ್ಲ. ನಾವೆಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತೇವೆ’ ಎಂದರು.

ಅಂಗಡಿ ಕುಟುಂಬದವರಿಗೆ ಟಿಕೆಟ್‌ ಕೊಟ್ಟರೆ ಅವರ ಪರ ಪ್ರಚಾರ ಮಾಡುವುದಾಗಿ ಕಾಂಗ್ರೆಸ್‌ ಮುಖಂಡ ಪ್ರಕಾಶ ಹುಕ್ಕೇರಿ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ‘ಬೆಂಬಲ ಕೊಡುವುದಾದರೆ ಕೊಡಲಿ. ಯಾರೂ ಬೇಡ ಎನ್ನುವುದಿಲ್ಲ’ ಎಂದರು.

ಪ್ರಲ್ಹಾದ ಜೋಶಿ ಮಾತನಾಡಿ ‘ಸಭೆಯಲ್ಲಿ ಮಸ್ಕಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆಗೆ ಬಿಜೆಪಿ ಪ್ರಮುಖರಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದರು. ನಮ್ಮ ನಡುವೆಯೇ ಸ್ಪರ್ಧೆ ಇರುವುದು ಬೇಡ ಎನ್ನುವ ಕಾರಣಕ್ಕೆ ಕಟೀಲ್‌ ಬಂದು ಪ್ರಮುಖರ ಜೊತೆ ಚರ್ಚಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಚರ್ಚೆಯಾಗಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು