ಶುಕ್ರವಾರ, ಸೆಪ್ಟೆಂಬರ್ 17, 2021
26 °C

ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಆಗ್ರಹಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ನರೇಗಾ ಯೋಜನೆಯಡಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕಲಘಟಗಿ ತಾಲ್ಲೂಕಿನ ವಿವಿಧ ಗ್ರಾಮದ ರೈತರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

ಭೀಕರ ಬರದಿಂದ ಕೃಷಿ ಕೂಲಿಕಾರರಿಗೆ ಉದ್ಯೋಗವೇ ಇಲ್ಲ. ಮಳೆಯಾಗದ ಕಾರಣ ರೈತರಿಗೆ ಹಿಂಗಾರಿನಲ್ಲಿ ಬಿತ್ತಿದ ಬೀಜ ಹಾಗೂ ಗೊಬ್ಬರಕ್ಕೆ ಹಾಕಿದ ಹಣ ನಷ್ಟವಾಗಿದೆ. ಜೀವನ ನಿರ್ವಹಣೆಗೆ ಕನಿಷ್ಠ ಆದಾಯ ಇಲ್ಲವಾಗಿದೆ. ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ಸದಸ್ಯರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ ಹಾಗೂ ರೈತರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

‘ಅಲ್ಲದೇ ಕಲಘಟಗಿ ತಾಲ್ಲೂಕಿನ ಮಿಶ್ರೀಕೋಟಿ ಹಾಗೂ ಸೂಳಿಕಟ್ಟೆ ಗ್ರಾಮದ ಕೆಲ ಕೂಲಿ ಕಾರ್ಮಿಕರಿಗೆ ಕಳೆದ ವರ್ಷ ನರೇಗಾ ಯೋಜನೆ ಅಡಿಯಲ್ಲಿ ಮಾಡಿದ ಕೆಲಸಕ್ಕೆ ಈವರೆಗೂ ಕೂಲಿಯ ವೇತನ ನೀಡಿಲ್ಲ. ಬರದಿಂದಾಗಿ ಕೂಲಿ ಕಾರ್ಮಿಕರು ಹಾಗೂ ರೈತರ ಸ್ಥಿತಿ ಚಿಂತಾಜನಕವಾಗಿದೆ. ಇಂಥ ಸಂದರ್ಭದಲ್ಲಿ ಜನರಿಗೆ ಉದ್ಯೋಗ ನೀಡಲು, ಕುಡಿಯುವ ನೀರು, ಜಾನುವಾರುಗಳಿಗೆ ನೀರು ಹಾಗೂ ಮೇವು ಒದಗಿಸಲು ಕ್ರಮಕೈಗೊಳ್ಳದೆ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯವಹಿಸಿದೆ’ ಎಂದು ಧರಣಿ ನಿರತರು ದೂರಿದರು.

ತುಮರಿಕೊಪ್ಪ ಹಾಗೂ ಬೇಗೂರ ಗ್ರಾಮದಲ್ಲಿ ನಾಲ್ಕು ಕೂಲಿ ಕಾರ್ಮಿಕರಿಗೆ ಒಂದು ವರ್ಷದ ವೇತನ ನೀಡಿಲ್ಲ ಅಲ್ಲದೇ ಆರು ತಿಂಗಳ ಹಿಂದೆ ಜಾಬ್‌ ಕಾರ್ಡ್‌ ಅನ್ನು ಜಿಲ್ಲಾ ಪಂಚಾಯ್ತಿ ವತಿಯಿಂದ ನೀಡಿದ್ದರೂ, ಯಾವುದೇ ರೀತಿ ಕೆಲಸವನ್ನು ರೈತರಿಗೆ ನೀಡುತ್ತಿಲ್ಲ. ಈ ಕೂಡಲೇ ಜಿಲ್ಲಾ ಪಂಚಾಯ್ತಿ ಸಿಇಒ ಅವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಿದರು. ನಿಂಗಮ್ಮಾ ಸವಣೂರ, ವಂದನಾ, ಶೀಲಾ ಚಿಕ್ಕಲಗೇರಿ, ಫಾತಿಮಾ ನಾನಾಪುರಿ, ಚಂದ್ರಪ್ಪ ಪಾಳೇಗಾರ, ಸಾವಕ್ಕ ವೆಂಕೋಜಿ, ರೇಣುಕಾ, ಹನಮಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು