ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಪ್ಪರಿ, ಬೆಣ್ಣಿ ಹಳ್ಳ ಹರಿವು; ನಿಗಾ ವಹಿಸಿ: ಧಾರವಾಡ ಡಿಸಿ ದಿವ್ಯಪ್ರಭು ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ: ಡಿಸಿ ದಿವ್ಯಪ್ರಭು ಸೂಚನೆ
Published 7 ಜೂನ್ 2024, 15:47 IST
Last Updated 7 ಜೂನ್ 2024, 15:47 IST
ಅಕ್ಷರ ಗಾತ್ರ

ಧಾರವಾಡ: ಮುಂಗಾರು ಮಳೆ ಆರಂಭವಾಗಿದೆ. ತುಪ್ಪರಿ ಮತ್ತು ಬೆಣ್ಣಿ ಹಳ್ಳಗಳ ನೀರಿನ ಹರಿವಿನ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರ‌ವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಳ್ಳಗಳಲ್ಲಿ ನೀರಿನ ಹರಿವು ಏರಿಕೆಯಾದರೆ, ಪ್ರವಾಹ ಉಂಟಾಗುವ ಸಾಧ್ಯತೆ ಇದ್ದರೆ ತಕ್ಷಣ ಮಾಹಿತಿ ನೀಡಬೇಕು. ಮುಂಜಾಗ್ರತೆ ವಹಿಸಬೇಕು. ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದು ಸೂಚನೆ ನೀಡಿದರು.

ಪ್ರವಾಹ ಉಂಟಾದರೆ ಆ ಭಾಗದ ಗ್ರಾಮಗಳ ಜನರನ್ನು ಸ್ಥಳಾಂತರಿಸಲು ಸ್ಥಳ ಗುರುತಿಸಬೇಕು. ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸರಾಸರಿ ಶೇ 22 ರಷ್ಟು ಭೂಮಿಯಲ್ಲಿ ಬಿತ್ತನೆ ಆಗಿದೆ. ಉತ್ತಮ ಮಳೆ ಆಗುತ್ತಿರುವುದರಿಂದ ಬಿತ್ತನೆ ಕಾರ್ಯ ಮುಂದಿನ ದಿನಗಳಲ್ಲಿ ಚುರುಕಾಗಲಿದೆ. ಬೀಜ, ಗೊಬ್ಬರದ ಕೊರತೆಯಾಗದಂತೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಮಳೆಯಿಂದಾಗಿ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಕೆರೆಯ ಒಡ್ಡು ಒಡೆಯದಂತೆ ಮತ್ತು ಗೇಟ್‍ಗಳು ಸುಸ್ಥಿತಿಯ ಇರುವಂತೆ ಕೆರೆ ನಿರ್ವಹಿಸುವ ಇಲಾಖೆಗಳು ಕ್ರಮವಹಿಸಬೇಕು. ಸಾರ್ವಜನಿಕರು ಕೆರೆಗೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಹಾಕಬೇಕು ಎಂದು ತಿಳಿಸಿದರು.

ಕಾಡಿನ ಅಂಚಿನಲ್ಲಿರುವ ಕುಂಬಾರಗಣವಿ ಸಮೀಪ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ದಿವ್ಯಪ್ರಭು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು. ಆದ್ಯತೆ ಮೇರೆಗೆ ಕಾಮಗಾರಿ ಮುಗಿಸಿ ಬಳಕೆಗೆ ಮುಕ್ತಗೊಳಿಸಬೇಕು ಎಂದು ತಿಳಿಸಿದರು.

ಕಂಬಾರಗಣವಿ ಸೇತುವೆ ಸಹಿತ ಯಾವುದೇ ಸೇತುವೆ, ಕೆರೆಗಳಿಂದ ಸಾರ್ವಜನಿಕ ಹಾನಿ ಉಂಟಾದರೆ ಪರಿಹಾರವನ್ನು ಸಂಬಂಧಿಸಿದ ಇಲಾಖೆಗಳಿಂದ ಭರಿಸಲು ಆದೇಶಿಸಲಾಗುವುದು ಎಂದು ಎಚ್ಚರಿಸಿದರು.

ಮಳೆಯಿಂದ ಹಾನಿಯಾದ ಮನೆಗಳ ‌ಬಗ್ಗೆ ನಿಖರವಾದ ವರದಿ ಸಲ್ಲಿಸಬೇಕು. ಒತ್ತಡ, ಪ್ರಭಾವಕ್ಕೆ ಒಳಗಾಗಿ ತಪ್ಪು, ಅಪೂರ್ಣ ಅಥವಾ ಸುಳ್ಳು ವರದಿ ನೀಡಿದರೆ ಶಿಸ್ತು ಕ್ರಮಕ್ಕೆ ಆದೇಶಿಸಲಾಗುವುದು. ಶಾಲೆ, ಅಂಗನವಾಡಿ ದುರಸ್ತಿ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ರಸ್ತೆ ಬದಿಯಲ್ಲಿನ ಒಣಗಿದ, ಬಾಗಿದ ಮರಗಳು, ಟೊಂಗೆಗಳನ್ನು ಗುರುತಿಸಿ ಕತ್ತರಿಸಲು ಕ್ರಮವಹಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಮಹಾನಗರ ಪಾಲಿಕೆ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ತಿಮ್ಮಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕಿರಣಕುಮಾರ ಎಂ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ. ಭದ್ರಣ್ಣವರ, ಪಂಚಾಯತ್‌ರಾಜ್ ಎಂಜಿನಿಯರಿಂಗ್‌ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್.ಎಂ.ಸೊಪ್ಪಿಮಠ ಪಾಲ್ಗೊಂಡಿದ್ದರು.

ಸಭೆಗೆ ಗೈರು ಹಾಜರಿ; ಶಿಸ್ತುಕ್ರಮದ ಎಚ್ಚರಿಕೆ: ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗೆ ಲೋಕೋಪಯೋಗಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಹಾಜರಾಗಿಲ್ಲ. ಅವರು ಅನುಮತಿ ಪಡೆಯದೆ ಗೈರು ಹಾಜರಾಗಿದ್ದಾರೆ. ಮುಂದಿನ ಸಭೆಗೆ ಹಾಜರಾಗದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ದಿವ್ಯಪ್ರಭು ಹೇಳಿದರು. . ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಿಯಮಿತವಾಗಿ ನಡೆಯುತ್ತಿದೆ. ಕೆಲವು ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗುವುದು ಕಂಡುಬಂದಿದೆ. ಎಲ್ಲ ಇಲಾಖೆ ಅಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT