ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

271 ಮಂದಿಗಷ್ಟೇ 100 ದಿನ ಕೆಲಸ: ಬರ ನಿರ್ವಹಣೆ ಸಭೆಯಲ್ಲಿ ಸಚಿವ ಸಂತೋಷ ಲಾಡ್‌ ಬೇಸರ

Published 24 ನವೆಂಬರ್ 2023, 15:51 IST
Last Updated 24 ನವೆಂಬರ್ 2023, 15:51 IST
ಅಕ್ಷರ ಗಾತ್ರ

ಧಾರವಾಡ: ‘ಜಿಲ್ಲೆಯಲ್ಲಿ 1.68 ಲಕ್ಷ ಮಂದಿ ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ ಕಾರ್ಡ್‌ ಹೊಂದಿದ್ದರೂ, ಈ ವರ್ಷ 271 ಮಂದಿಗೆ ಮಾತ್ರ 100 ದಿನ ಕೆಲಸ ನೀಡಲಾಗಿದೆ. ಗುರಿ ಸಾಧನೆ ತೃಪ್ತಿಕರವಾಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಬೇಸರ ವ್ಯಕ್ತಪಡಿಸಿದರು.

ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳೊಂದಿಗೆ ಬರಗಾಲ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘86 ಲಕ್ಷ ಜಾಬ್‌ ಕಾರ್ಡ್‌ ಸಕ್ರಿಯವಾಗಿವೆ. ಬಾಕಿ ಇರುವ ಎಲ್ಲ ಕಾರ್ಡ್‌ ಸಕ್ರಿಯಗೊಳಿಸಿ, ದುಡಿಯುವ ಕೈಗಳಿಗೆ ಕೆಲಸ ಒದಗಿಸಬೇಕು. ಇದರಿಂದ ಈ ಬಾಬ್ತಿನಲ್ಲಿ ₹ 541 ಕೋಟಿ ಅನುದಾನ ಬಳಸಿಕೊಳ್ಳಲು ಅವಕಾಶ ಇದೆ’ ಎಂದರು.

‘ನರೇಗಾ ಕೆಲಸದ ಹಣ ನೀಡುವುದು ವಿಳಂಬ ಎಂಬ ಕಾರಣಕ್ಕೆ ಹಲವು ಮಹಿಳೆಯರು ಆಸಕ್ತಿ ತೋರಿಸುತ್ತಿಲ್ಲ. ಕೂಲಿ ಹಣ ನೇರವಾಗಿ ಖಾತೆ ಜಮೆಯಾಗುತ್ತದೆ ಎಂದು ಪಿಡಿಒ, ಕಾರ್ಯದರ್ಶಿಗಳು ಇತರ ಅಧಿಕಾರಿಗಳು ತಿಳಿಸಿ, ಪ್ರೇರೇಪಿಸಬೇಕು’ ಎಂದು ಸೂಚನೆ ನೀಡಿದರು.

‘ನರೇಗಾ ಗುರಿ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಸಾಧನೆ ಶೂನ್ಯವಾಗಿದೆ. ಸರಿಯಾಗಿ ಕೆಲಸ ಆಗಿಲ್ವಾ? ಕೆಲಸ ಮಾಡದೆ ಹೊಟ್ಟೆ ಬೆಳೆಸುತ್ತಿದ್ದೀರಾ?’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.

‘ಸಸಿ ನೆಡುವಿಕೆ, ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕಾಂಕ್ರೀಟ್‌ ರಸ್ತೆ, ಗಟಾರ ಮೊದಲಾದವನ್ನು ಆದ್ಯತೆಯಾಗಿ ತೆಗೆದುಕೊಳ್ಳಬಾರದು. ಇದರಿಂದಲೇ ಯೋಜನೆ ಹಣ ಬಿಡುಗಡೆ ವಿಳಂಬವಾಗುತ್ತಿದೆ. ಕೃಷಿ, ಅರಣ್ಯ, ರೇಷ್ಮೆ, ತೋಟಗಾರಿಕೆ ಸಹಿತ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನಾಲ್ಕು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳ ಸಭೆ ನಡೆಸಲಾಗುವುದು’ ಎಂದು ತಿಳಿಸಿದರು.

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ‘ಜಿಲ್ಲೆಯಲ್ಲಿ ಮುಂಗಾರು ವಿಫಲವಾಗಿದೆ. ಹಿಂಗಾರು ಬಿತ್ತನೆ, ಬೆಳೆಗಳು ಅಷ್ಟು ಹಿತಕರವಾಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪಾ ಟಿ.ಕೆ.ಮಾತನಾಡಿ, ‘ಜಿಲ್ಲೆಯಲ್ಲಿ 128 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಟ್ಯಾಂಕರ್‌, ಖಾಸಗಿ ಕೊಳವೆ ಬಾವಿ ಮೂಲಕ ನೀರು ಒದಗಿಸಲು ತಯಾರಿ ಮಾಡಿಕೊಂಡಿದ್ದೇವೆ’ ಎಂದರು.

‘ನರೇಗಾದಡಿ 26 ಲಕ್ಷ ಮಾನವ ದಿನ ಸೃಜನೆ ಗುರಿಯಲ್ಲಿ 18.18 ಲಕ್ಷ ದಿನಗಳ ಗುರಿ (ಶೇ 69.92ರಷ್ಟು) ಸಾಧಿಸಲಾಗಿದೆ. ಹೆಚ್ಚುವರಿ 11.73 ಲಕ್ಷ ಮಾನವ ದಿನಗಳಿಗೆ ಅನುಮೋದನೆ ದೊರೆತಿದೆ’ ಎಂದರು.

ಧಾರವಾಡದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒಗಳು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು
ಧಾರವಾಡದಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒಗಳು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು
ಜೆಜೆಎಂ ಅಡಿ ನೀರು ಸಂಪರ್ಕದ ನಿರ್ವಹಣೆ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಬೇಕು. ದುರಸ್ತಿ ಸಮಸ್ಯೆ ಇದ್ದರೆ ಪರಿಹರಿಸಬೇಕು
- ಸಂತೋಷ ಲಾಡ್‌, ಜಿಲ್ಲಾ ಉಸ್ತುವಾರಿ ಸಚಿವ
ನೀರು ಮೇವು ನಿರ್ವಹಣೆಗೆ ಕ್ರಮ
‘ಕುಡಿಯುವ ನೀರು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಸದ್ಯಕ್ಕೆ ಮೇವಿನ ಕೊರತೆ ಇಲ್ಲ. ರೈತರಿಗೆ ಬಿತ್ತನೆ ಬೀಜ ನೀಡಿ ಮೇವು ಬೆಳೆಸಿ ವಿತರಿಸಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ಸಚಿವರು ಹೇಳಿದರು. ವಿವರ ನೀಡಿ: ‘ಎಲ್ಲ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಅಳವಡಿಸಿರುವ ಮೋಟಾರ್‌ ಇತ್ಯಾದಿ ಉಪಕರಣಗಳ ವಿವರ ನೀಡಬೇಕು. ನೀರು ಬರಿದಾದ ಕೊಳವೆ ಬಾವಿಗಳು ಹಳೆಯ ಮೋಟಾರ್‌ಗಳ ವಿವರವನ್ನು ಒಂದು ವಾರದೊಳಗೆ ನೀಡಬೇಕು’ ಎಂದು  ಸೂಚನೆ ನೀಡಿದರು. ‘ಬೆಟ್ಟದೂರಿನಲ್ಲಿ ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕ ಏಕೆ ಕಲ್ಪಿಸಿಲ್ಲ? ಗ್ರಾಮೀಣ ಕುಡಿಯುವ ನೀರು ವಿಭಾಗದವರು ಹೆಸ್ಕಾಂನೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಸಂಪರ್ಕ ಕಲ್ಪಿಸಿ’ ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷರ ಮನವಿಗಳು:

  • ಬರ ನಿರ್ವಹಣೆಗೆ ಅನುದಾನ ನೀಡಬೇಕು.

  • ನರೇಗಾ ಕಾಮಗಾರಿ ಹಣ ತಕ್ಷಣ ಬಿಡುಗಡೆಗೊಳಿಸಬೇಕು.

  • ಹಾಳಾಗಿರುವ ವಿದ್ಯುತ್‌ ಪರಿವರ್ತಕ ಬದಲಾಯಿಸಬೇಕು.

  • ವಿಠ್ಠಲ ಭಟ್ಟಂಗಿ ಮುಮ್ಮಿಗಟ್ಟಿ ಬೆಳೆಹಾನಿ ಪರಿಹಾರ ನೀಡಬೇಕು.

  • ಅರವಟ್ಟಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು.

  • ಅಶೋಲ ಜೋಡಟ್ಟಿ ಅರವಟ್ಟಗಿ ಹಲವು ಕಡೆ ನೀರಿನ ಸಮಸ್ಯೆ ಇದೆ. ಟ್ಯಾಂಕರ್‌ನಲ್ಲಿ ನೀರು ಪೂರೈಸಲು ಕ್ರಮ ವಹಿಸಬೇಕು.

  • ಮಂಜುನಾಥ ಮಲ್ಲಿಗೆವಾಡ  ನರೇಗಾ ಕ್ರಿಯಾ ಯೋಜನೆಗಳಿಗೆ ತಕ್ಷಣ ಅನುಮೋದನೆ ನೀಡಬೇಕು.

  • ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಸಮಸ್ಯೆ ಇದ್ದಾಗ ಆಫ್‌ಲೈನ್‌ನಲ್ಲಿ ನೀಡಲು ಅವಕಾಶ ಕಲ್ಪಿಸಬೇಕು.

  • ದಾವುಲ್‌ ಸಾಬ್‌ ದೇವಿಕೊಪ್ಪದ ಜೆಜೆಎಂ ಪೈಪ್‌ಲೈನ್‌ನಲ್ಲಿ ಕೆಲವು ಕಡೆ ನೀರು ಸೋರಿಕೆಯಾಗುತ್ತಿದೆ. ಕೆಲವು ನಳದಲ್ಲಿ ನೀರು ಬರುತ್ತಿಲ್ಲ. ಕೆಲವು ಮನೆಗಳಿಗೆ ಸಂಪರ್ಕ ಕಲ್ಪಿಸಿಲ್ಲ. ದುರಸ್ತಿಗೆ ಸಂಬಂಧಪಟ್ಟವರು ಕ್ರಮ ವಹಿಸುತ್ತಿಲ್ಲ.

  • ರವಿ ಹಳಿಯಾಳ ಗುಡಿಸಾಗರ ಪ್ರತಿ ಆರು ತಿಂಗಳಿಗೊಮ್ಮೆ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರ ಜತೆ ಸಭೆ ನಡೆಸಬೇಕು.

  • ನರೇಗಾ ಬಾಕಿ ಹಣ ಬಿಡುಗಡೆಗೊಳಿಸಬೇಕು. ಕೆಲಸದ ದಿನಗಳನ್ನು 150ಕ್ಕೆ ಹೆಚ್ಚಿಸಬೇಕು.

‘ಶೇ18ರಷ್ಟು ಅನುದಾನ ಕಡಿತ’:

‘ಉದ್ಯೋಗ ಖಾತ್ರಿ ಜಾಬ್‌ ಕಾರ್ಡ್‌ದಾರರ ಸಂಖ್ಯೆ ಹೆಚ್ಚಳವಾಗಿದ್ದರೂ ಈ ವರ್ಷ ನರೇಗಾ ಅನುದಾನವನ್ನು ಶೇ 18ರಷ್ಟು ಕಡಿತ ಮಾಡಲಾಗಿದೆ. ಕೇಂದ್ರ ಸರ್ಕಾರವನ್ನು ಕೇಳುವವರು ಇಲ್ಲ’ ಎಂದು ಸಚಿವ ಸಂತೋಷ್‌ ಲಾಡ್‌ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದೇಶದಲ್ಲಿ 20 ಕೋಟಿ ಜನರು ನರೇಗಾ ಅವಲಂಬಿಸಿದ್ದಾರೆ. ಪ್ರತಿ ವರ್ಷ ನರೇಗಾ ಅನುದಾನ ಹೆಚ್ಚಳ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕಡಿಮೆ ಮಾಡಲಾಗಿದೆ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ನರೇಗಾ ವಿರುದ್ಧ ಮಾತನಾಡಿದ್ದರು. ಅವರಿಗೆ ಈ ಯೋಜನೆ ಬಗ್ಗೆ ಆಸಕ್ತಿ ಇಲ್ಲ’ ಎಂದು ಕುಟುಕಿದರು.

ಕ್ಷಮೆಯಾಚಿಸಿದ ಗ್ರಾ.ಪಂ ಅಧ್ಯಕ್ಷ
‘ಸಭೆಯಲ್ಲಿ ಬರಗಾಲ ಬಿಟ್ಟು ಬೇರೆ ವಿಚಾರ ಮಾತನಾಡಲಾಗುತ್ತಿದೆ. ಸಚಿವರು ಮುಖ ತೋರಿಸಿ ಹೋಗಲು ಬಂದಿದ್ದೀರಾ’ ಎಂದು ಗ್ರಾಮ ಪಂಚಾಯಿತಿಯೊಂದರ ಅಧ್ಯಕ್ಷ ಸುರೇಶ್  ಏರುಧ್ವನಿಯಲ್ಲಿ ಕೇಳಿದರು. ಕುಪಿತರಾದ ಸಂತೋಷ್‌ ಲಾಡ್‌ ಅವರು ‘ಮುಖ ತೋರಿಸಿ ಹೋಗುತ್ತೇನೆ ಎಂದರೆ ಏನರ್ಥ? ಬರ ನಿರ್ವಹಣೆ ನಿಟ್ಟಿನಲ್ಲಿ ಸಭೆ ಆಯೋಜಿಸುಲಾಗಿದೆ ಸರಿಯಾಗಿ ಮಾತನಾಡಿ’ ಎಂದು ಗುಡುಗಿದರು. ತಕ್ಷಣವೇ ಸುರೇಶ್‌ ಅವರು ತಪ್ಪಾಯ್ತು ಎಂದು ಕ್ಷಮೆಯಾಚಿಸಿದರು.

ಐವರು ಶಾಸಕರು ಗೈರು ನವಲಗುಂದ ಶಾಸಕ ಕೋನರೆಡ್ಡಿ ಅವರು ಸಭೆಯಲ್ಲಿ ಮೊದಲ ಅರ್ಧ ಗಂಟೆ ಇದ್ದು ಸಭೆಯಿಂದ ತೆರಳಿದರು. ಬಾಕಿ ಐದು ಕ್ಷೇತ್ರಗಳ ಶಾಸಕರು ಹಾಜರಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT