ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಬಿಲ್ ನೀಡಿ ಸುಲಿಗೆ; ಕ್ರಮಕ್ಕೆ ಆಗ್ರಹ

ಸಮತಾ ಸೇನಾ, ಭುವನೇಶ್ವರಿ ಸೇವಾ ಸಂಘದಿಂದ ಪ್ರತಿಭಟನೆ
Published 1 ಮಾರ್ಚ್ 2024, 4:14 IST
Last Updated 1 ಮಾರ್ಚ್ 2024, 4:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭುವನೇಶ್ವರಿ ನಗರದ ಹೆಗ್ಗೇರಿಯ ಜನತಾ ಮನೆಗಳ ನಿವಾಸಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಉಚಿತ ನಳ ಸಂಪರ್ಕ ಕಲ್ಪಿಸಿ, ಮೀಟರ್‌ ಅಳವಡಿಸಬೇಕು ಎಂದು ಭುವನೇಶ್ವರಿ ಸೇವಾ ಸಂಘ ಮತ್ತು ಸಮತಾ ಸೇನಾ ಸಂಘಟನೆಯ ಸದಸ್ಯರು ಮಹಾನಗರ ಪಾಲಿಕೆ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸಮತಾ ಸೇನಾ ಸಂಘಟನೆಯ ಮುಖಂಡ ಗುರುನಾಥ ಉಳ್ಳಿಕಾಶಿ ಮಾತನಾಡಿ, ಭುವನೇಶ್ವರಿ ನಗರದ ನಿವಾಸಿಗಳು 2012ರಲ್ಲಿ ಕರ್ನಾಟಕ ಜಲಮಂಡಳಿಯ ಕೋರಿಕೆಯಂತೆ ಬಡ್ಡಿ ಮನ್ನಾ ಯೋಜನೆಯಲ್ಲಿ ನೀರಿನ ಬಿಲ್‌ ಭರಿಸಿದ್ದರು. ಈಗ ಎಲ್‌ ಆ್ಯಂಡ್ ಟಿ ಕಂಪನಿಯವರು ಪ್ರತಿ ಮನೆಗೆ ₹70 ಸಾವಿರದಿಂದ ₹1 ಲಕ್ಷದವರೆಗೆ ಬಿಲ್ ನೀಡುವ ಮೂಲಕ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು.

ಹೊಸ ಮೀಟರ್‌ ಅಳವಡಿಸಿ ಪ್ರತಿ ತಿಂಗಳು ಬಿಲ್ ನೀಡಬೇಕು. ಇಲ್ಲವೇ, ಕನಿಷ್ಠ ಮಾಸಿಕ ಬಿಲ್ ನೀಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಎಲ್‌ ಆ್ಯಂಡ್ ಟಿ ಕಂಪನಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದರು.

ಬಡ್ಡಿ ಮನ್ನಾ ಯೋಜನೆ 2020ರಲ್ಲೇ ರದ್ದಾಗಿದ್ದು, ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಕಂಪನಿಯವರು ಹೇಳುತ್ತಾರೆ. ಮಹಾನಗರ ಪಾಲಿಕೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ರಾತ್ರಿ ವೇಳೆ ನೀರು ಬಿಡುತ್ತಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ಹಗಲು ವೇಳೆ ನೀರು ಬಿಡಲು ಕ್ರಮ ಕೈಗೊಳ್ಳಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಪ್ರತಿಕ್ರಿಯಿಸಿ, ‘ಬಿಲ್ ಮನ್ನಾ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಒಟಿಎಸ್ ತುಂಬಿದ ಹಣದ ಕುರಿತು ಒಂದು ತಿಂಗಳ ಒಳಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ತೀರ್ಮಾನವಾಗುವವರೆಗೆ ಹಳೆಯ ಬಿಲ್ ಕಾಯ್ದಿರಿಸಿ, ಮಾಸಿಕ ಬಿಲ್ ನೀಡಲಾಗುವುದು’ ಎಂದು ಭರವಸೆ ನೀಡಿದರು.

 ಮಂಜುನಾಥ ಸಣ್ಣಕ್ಕಿ, ಹನುಮಂತ ಮೂಲಿಮನಿ, ವಿರುಪಾಕ್ಷಿ ಕಾಳೆ, ಉಮೇಶ ಹಲಗಿ, ಇಂದುಮತಿ ಶಿರಗಾಂವಿ, ಮಂಜುಳಾ ಬೆಣಗಿ, ಮಂಜಣ್ಣ ಉಳ್ಳಿಕಾಶಿ, ಲೋಹಿತ ಗಾಮನಗಟ್ಟಿ, ಶಂಕರ ಕಾಲವಾಡ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT