ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಹುಬ್ಬಳ್ಳಿ ಹೈದ

ಆನ್‌ಲೈನ್ ಟೀ ಶರ್ಟ್ ಮಾರಾಟ ಜಾಹೀರಾತು ರೂಪದರ್ಶಿಯಾಗಿ ನವೀನ್
Last Updated 26 ಜೂನ್ 2019, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಓದಿನ ಜತೆಗೆ ಮೊಳೆಕೆಯೊಡೆದ ಮಾಡೆಲಿಂಗ್ ಕನಸಿನ ಬೆನ್ನತ್ತಿದ ಹುಬ್ಬಳ್ಳಿಯ 19 ವರ್ಷದ ಹುಡುಗನೊಬ್ಬ, ವಿಶ್ವದ ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣಗಳ ಟ್ರೆಂಡಿ ಟೀ ಶರ್ಟ್‌ಗಳ ರೂಪದರ್ಶಿಯಾಗಿ ಆಯ್ಕೆಯಾಗಿದ್ದಾನೆ.

ಕೆಎಲ್‌ಇ ಸಂಸ್ಥೆಯ ಎಸ್‌.ಐ. ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ 4ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿರುವ ವಿದ್ಯಾನಗರದ ಶಿರೂರು ಪಾರ್ಕ್‌ನ ನವೀನ್ ಜಿ. ದ್ಯಾವನಗೌಡ್ರ, ಪ್ರತಿಷ್ಠಿತ ಆಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಶಾಪಿಂಗ್‌ ತಾಣಗಳಲ್ಲಿ ಟೀ ಶರ್ಟ್ ಮಾಡೆಲ್ ಆಗಿ ಮಿಂಚುತ್ತಿದ್ದಾರೆ. ನವೀನ್ ಮಾಡೆಲ್‌ ಆಗಿರುವ ಟೀ ಶರ್ಟ್‌ಗಳು ಜಾಹೀರಾತು ಪ್ರಕಟವಾದ ಕೆಲ ತಾಸುಗಳಲ್ಲೇ ಬಿಕರಿಗೊಂಡಿವೆ!

ತಿರುವು ಕೊಟ್ಟ ‘ಫನ್‌ ವೀಕ್‌’:

ಕಾಲೇಜು ಮೆಟ್ಟಿಲು ಹತ್ತುತ್ತಲೇ ರೂಪದರ್ಶಿಯಾಗಬೇಕು ಅಂದುಕೊಂಡಿದ್ದ ನವೀನ್ ಕನಸಿಗೆ ಏಣಿಯಾಗಿದ್ದು ಕಾಲೇಜಿನಲ್ಲಿ ನಡೆಯುತ್ತಿದ್ದ ‘ಫನ್‌ ವೀಕ್‌’ ಕಾರ್ಯಕ್ರಮ. ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸುವ ಈ ಕಾರ್ಯಕ್ರಮದಲ್ಲಿ ಮಾಡೆಲಿಂಗ್‌ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜಿನ ವೇದಿಕೆಯಲ್ಲಿ ಮೊದಲ ಸಲ ರ‍್ಯಾಂಪ್‌ ವಾಕ್ ಮಾಡಿದ್ದ ನವೀನ್, 32 ಸ್ಪರ್ಧಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದ್ದರು.

‘ಕಾಲೇಜಿನ ಮಾಡೆಲಿಂಗ್‌ ಸ್ಪರ್ಧೆಯಲ್ಲಿ ವಿಜೇತನಾದ ಬಳಿಕ, ಆತ್ಮವಿಶ್ವಾಸ ಹೆಚ್ಚಾಯಿತು. ಅದರ ಬೆನ್ನಲ್ಲೇ, ‘ಕರ್ನಾಟಕಸ್ ನೆಕ್ಸ್ಟ್ ಟಾಪ್ ಮಾಡೆಲ್ಸ್‌’ ಆಡಿಷನ್‌ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ಗೊತ್ತಾಯಿತು. ರಾಜ್ಯದಾದ್ಯಂತ 125 ಮಂದಿ ಭಾಗವಹಿಸಿದ್ದರು. ಬ್ಲೇಜರ್ ಧಿರಿಸಿನಲ್ಲಿ ರ‍್ಯಾಂಪ್ ವಾಂಕ್ ಮಾಡಿದ ನನ್ನ ಹೆಸರು, ಟಾಪ್ 12 ಪಟ್ಟಿಗೆ ಆಯ್ಕೆಯಾಯಿತು’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೈ ಹಿಡಿದ ಅದೃಷ್ಟ:

‘ಜುಲೈನಲ್ಲಿ ಹುಬ್ಬಳ್ಳಿಯಲ್ಲಿ ನಡೆಯುವ ‘ಕರ್ನಾಟಕಸ್ ನೆಕ್ಸ್ಟ್ ಟಾಪ್ ಮಾಡೆಲ್ಸ್‌’ ಅಂತಿಮ ಸ್ಪರ್ಧೆಯ ತಯಾರಿಯಲ್ಲಿದ್ದಾಗ, ಅದರ ಆಯೋಜಕರಾದ ಮಹೇಶ ಕಾಮಶೆಟ್ಟಿ ಫ್ಲಿಪ್‌ಕಾರ್ಟ್‌ ಮತ್ತು ಆಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಪುರುಷ ರೂಪದರ್ಶಿಗಳ ಹುಡುಕಾಟ ನಡೆದಿರುವ ವಿಷಯವನ್ನು ಗಮನಕ್ಕೆ ತಂದರು’ ಎಂದು ಹೇಳಿದರು.

‘ಬಳಿಕ ಬಿಗ್‌ ಬಜಾರ್‌ನಲ್ಲಿ ಎರಡು ಟೀ ಶರ್ಟ್ ಖರೀದಿಸಿ, ಫೋಟೊ ಶೂಟ್ ಮಾಡಿಸಿ ಎರಡೂ ತಾಣಗಳಿಗೆ ಚಿತ್ರಗಳನ್ನು ಕಳಿಸಿಕೊಟ್ಟೆ. ಇದಾದ ಮೂರು ದಿನಗಳ ಬಳಿಕ, ನಾನು ಬಳಸಿದ್ದ ಮಾದರಿಯ ಟೀ ಶರ್ಟ್‌ಗಳಿಗೇ ನಾನು ಮಾಡೆಲ್ ಆಗಿರುವ ಜಾಹೀರಾತು ಎರಡೂ ತಾಣಗಳಲ್ಲಿ ಪ್ರಕಟವಾಗಿರುವ ಬಗ್ಗೆ ತಿಳಿಸಿದರು’ ಎಂದು ಸಂತಸ ಹಂಚಿಕೊಂಡರು.

‘ಹೊಸದಾಗಿ ಆಯ್ಕೆಯಾಗುವ ಮಾಡೆಲ್‌ಗಳು ಪ್ರದರ್ಶಿಸುವ ಜಾಹೀರಾತಿನ ಐದು ಟೀ ಶರ್ಟ್‌ಗಳು ಜಾಹೀರಾತು ಪ್ರಕಟವಾದ, ಮೂರು ದಿನದೊಳಗೆ ಮಾರಾಟವಾಗಬೇಕೆಂಬ ನಿಯಮವಿದೆ. ಆದರೆ, ನಾನು ಮಾಡೆಲ್‌ ಆಗಿದ್ದ ಆಮೆಜಾನ್ ಟೀ ಶರ್ಟ್‌ 10 ತಾಸಿನೊಳಗೆ ಹಾಗೂ ಫ್ಲಿಪ್‌ ಕಾರ್ಟ್ ಟೀ ಶರ್ಟ್‌ 24 ಗಂಟೆಯೊಳಗೆ ಮಾರಾಟವಾಗಿದ್ದವು. ಆಗ ನಾನು ಅಧಿಕೃತವಾಗಿ ಎರಡೂ ಶಾಪಿಂಗ್ ತಾಣಗಳ ರೂಪದರ್ಶಿಯಾಗಿ ಆಯ್ಕೆಯಾಗಿರುವುದಾಗಿ ಅಲ್ಲಿನ ಪ್ರತಿನಿಧಿಗಳು ತಿಳಿಸಿದರು’ ಎಂದು ಹೇಳಿದರು.

ಸದ್ಯ ಜಾಹೀರಾತು ಶೂಟಿಂಗ್‌ ಜತೆಗೆ ಹುಬ್ಬಳ್ಳಿಯಲ್ಲಿ ಜುಲೈ 8ರಿಂದ 12ರವರೆಗೆ ನಡೆಯಲಿರುವ ‘ಕರ್ನಾಟಕಸ್ ನೆಕ್ಸ್ಟ್ ಟಾಪ್ ಮಾಡೆಲ್‌’ ಅಂತಿಮ ಸ್ಪರ್ಧೆಗೆ ನವೀನ್ ತಯಾರಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT