ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರೂಜಿ ಅಂತ್ಯಕ್ರಿಯೆ; ಸಂಬಂಧಿಕರ ಆಕ್ರಂದನ

ಸುಳ್ಳ ರಸ್ತೆಯಲ್ಲಿರುವ ಜಮೀನಿನಲ್ಲಿ ಅಂತ್ಯಕ್ರಿಯೆ; ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು
Last Updated 7 ಜುಲೈ 2022, 4:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ನಗರದ ಸುಳ್ಳ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಬುಧವಾರ ನೆರವೇರಿತು. ಕುಟುಂಬದವರು, ಸಂಬಂಧಿಕರು ಹಾಗೂ ವಿವಿಧ ಊರುಗಳಿಂದ ಬಂದಿದ್ದ ನೂರಾರು ಅಭಿಮಾನಿಗಳು ಗುರೂಜಿಯ ಅಂತಿಮ ದರ್ಶನ ಪಡೆದರು.

ಕೊಲೆ ಆಘಾತದಿಂದಾಗಿ ನಿಲ್ಲಲೂ ಆಗದಷ್ಟು ನಿತ್ರಾಣರಾಗಿದ್ದ ಗುರೂಜಿ ಅವರ ಪತ್ನಿ ಅಂಕಿತಾ ಅವರನ್ನು ಸಂಬಂಧಿಕರು ಸಂತೈಸುತ್ತಿದ್ದರು. ಪುತ್ರಿ ಸ್ವಾತಿತಂದೆಯ ಶವವನ್ನು ತಬ್ಬಿಕೊಂಡು ‘ಅಪ್ಪಾ...’ ಎಂದು ಜೋರಾಗಿ ಅಳುತ್ತಿದ್ದ ದೃಶ್ಯವು ಸ್ಥಳದಲ್ಲಿದ್ದವರ ಕಣ್ಣುಗಳನ್ನು ಒದ್ದೆ ಮಾಡಿತು.

ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ಭಾಗಗಳಿಂದ ಗುರೂಜಿ ಸಂಬಂಧಿಕರು ಹಾಗೂ ಅವರ ಸರಳ ವಾಸ್ತು ಸಂಸ್ಥೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್, ರಾಜಕಿಯ ಮುಖಂಡರಾದ ಶರಣಪ್ಪ ಮತ್ತಿಕಟ್ಟಿ, ಮೋಹನ ಲಿಂಬಿಕಾಯಿ ಸೇರಿದಂತೆ ಹಲವು ಗಣ್ಯರು ಗುರೂಜಿಯ ಅಂತಿಮ ದರ್ಶನ ಪಡೆದರು.

ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ತಡವಾಗಿ ನಡೆದಿದ್ದರಿಂದ, ಮಧ್ಯಾಹ್ನ 1ಕ್ಕೆ ನಿಗದಿಯಾಗಿದ್ದ ಅಂತ್ಯಕ್ರಿಯೆ ಸಂಜೆ 4.15ಕ್ಕೆ ನಡೆಯಿತು. ಅಣ್ಣನ ಮಗ ಸಂಜಯ ಅಂಗಡಿ ಮರಣೋತ್ತರ ಪರೀಕ್ಷೆಯ ನಂತರದ ಪ್ರಕ್ರಿಯೆಗಳನ್ನು ಮುಗಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಮತ್ತು ಅಂತ್ಯಕ್ರಿಯೆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

‘ಅತೀವ ಪ್ರೀತಿ‘

‘ಕುಟುಂಬದವರ ಬಗ್ಗೆ ಅಣ್ಣನಿಗೆ ಅತೀವ ಪ್ರೀತಿ ಇತ್ತು. ಮುಂಬೈನಲ್ಲಿ ಅವರು 1993ರಲ್ಲಿ ಕಟ್ಟಡ ನಿರ್ಮಾಣ ಕಾಂಟ್ರಾಕ್ಟ್ ಮಾಡಲಾರಂಭಿಸಿದಾಗ ನಾನೂ ಅವರ ಜೊತೆಗಿದ್ದೆ. ಆರು ವರ್ಷಗಳ ವ್ಯವಹಾರದಲ್ಲಿ ಸ್ವಲ್ಪ ನಷ್ಟವಾಗಿತ್ತು. 1999ರಲ್ಲಿ ವ್ಯವಹಾರ ನಿಲ್ಲಿಸಿದಾಗ, ನಾನು ಊರಿಗೆ ಬಂದೆ’ ಎಂದು ಅವರ ಸೋದರ ಸಂಬಂಧಿ ಕಲಬುರಗಿ ಜಿಲ್ಲೆಯ ಯಡ್ರಾಮಿಯ ಕಾಶಿನಾಥ ತಾಳಿಕೋಟಿ ಹೇಳಿದರು.

2000 ಇಸ್ವಿಯಲ್ಲಿ ಹುಬ್ಬಳ್ಳಿಯಲ್ಲಿ ಮೊದಲ ಸರಳ ವಾಸ್ತು ಕಚೇರಿ ತೆರೆದರು. ನಂತರ ಹಂತಹಂತವಾಗಿ ಬೆಳೆದಂತೆ ಜನಪ್ರಿಯತೆ ಹೆಚ್ಚತೊಡಗಿತು‌. ಸರಳ ಜೀವನ ಚಾನೆಲ್ ಆರಂಭಿಸಿ, ವಾಸ್ತು ಸೇರಿದಂತೆ ವಿವಿಧ ವಿಷಯಗಳನ್ನು ಬಿತ್ತರಿಸುತ್ತಿದ್ದರು.ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಬಂಧು-ಬಳಗದ ಒಡನಾಟವನ್ನು ಅವರು ಬಿಟ್ಟಿರಲಿಲ್ಲ ಎಂದು ಕಣ್ಣೀರು ಹಾಕಿದರು.

‘ಹೋಟೆಲ್‌ ವಿರುದ್ಧವೂ ಕೇಸ್‌ ದಾಖಲಿಸಿ’

ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುವ ಹೋಟೆಲ್‌ನವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೆ ಅಥವಾ ಸ್ಥಳದಲ್ಲಿದ್ದವರು ಧೈರ್ಯ ಮಾಡಿದ್ದರೆ ಗುರೂಜಿ ಹತ್ಯೆ ತಡೆಯ
ಬಹುದಿಲ್ಲ. ಏನೇ ಆದರೂ ಇಲ್ಲಿ ಹೋಟೆಲ್‌ನವರ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಹಾಗಾಗಿ, ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು’ ಎಂದು ಗುರೂಜಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಅಂತಿಮ ದರ್ಶನ ಪಡೆದ ನೆಚ್ಚಿನ ನಾಯಿ ‘ಪ್ರಿನ್ಸ್‌’

ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ನೆಚ್ಚಿನ ನಾಯಿ ‘ಪ್ರಿನ್ಸ್‌’ ಕೂಡ ತನ್ನ ಮಾಲೀಕನ ಅಂತಿಮ ದರ್ಶನ ಪಡೆಯಿತು.ಶವದ ಇಟ್ಟಿದ್ದ ಸ್ಥಳಕ್ಕೆ ಬಂದ ಪ್ರಿನ್ಸ್‌, ಗಾಜಿನ ಪೆಟ್ಟಿಗೆಯ ಮೇಲೇರಿ ಒಳಗಿದ್ದ ಗುರೂಜಿ ಶವವನ್ನೇ ಕೆಲ ಹೊತ್ತು ದಿಟ್ಟಿಸಿತು.ನಂತರ ಅಕ್ಕಪಕ್ಕದವರತ್ತ ತಿರುಗುತ್ತಾ ಬೊಗಳತೊಡಗಿತು.

ನಂತರ ಕೆಲ ಕ್ಷಣ ಮೌನಕ್ಕೆ ಜಾರಿ ಗಾಜಿನ ಮೇಲೆಯೇ ಮಲಗಿದ ಪ್ರಿನ್ಸ್‌ನನ್ನು ಗುರೂಜಿ ಅಣ್ಣನ ಮಗ ಸಂಜಯ ಅಂಗಡಿ ತಬ್ಬಿಕೊಂಡು ಸಮಾಧಾನಪಡಿಸಿದರು. ನಂತರ ಶವ ಇಟ್ಟಿದ್ದ ಸ್ಥಳದಿಂದಗುಂಡಿಯ ಕಡೆಗೆ ಬಂದ ಪ್ರಿನ್ಸ್‌, ಅದರ ಆಸುಪಾಸಿನಲ್ಲಿ ಕೆಲ ಕ್ಷಣ ಓಡಾಡಿತು. ನಂತರ, ಗುರೂಜಿ ಅವರ ಕಡೆಗೆ ನೋಡುತ್ತಾ ಕುಳಿತುಕೊಂಡಿತು.ಈ ದೃಶ್ಯ ಅಲ್ಲಿದ್ದವರ ದುಃಖವನ್ನು ಇಮ್ಮಡಿಗೊಳಿಸಿತು. ನಂತರ ಪ್ರಿನ್ಸ್‌ನನ್ನು ಕುಟುಂಬದವರು ಕರೆದೊಯ್ದರು.

ಗುರೂಜಿ ಅವರಿಗೆ ಪ್ರಿನ್ಸ್‌ ಎಂದರೆ ಅಚ್ಚುಮೆಚ್ಚು. ಅದು ಕೂಡ ತುಂಬಾ ಹಚ್ಚಿಕೊಂಡಿತ್ತು. ತಮ್ಮ ಸ್ವಂತ ಊರು ಹಾಗೂ ಸಂಬಂಧಿಕರ ಊರುಗಳಿಗೆ ಗುರೂಜಿ ಭೇಟಿ ನೀಡುವಾಗ ಪ್ರಿನ್ಸ್‌ನನ್ನು ಸಹ ತಮ್ಮ ಜೊತೆ ಕರೆದುಕೊಂಡು ಹೋಗುತ್ತಿದ್ದರು ಎಂದು ಕುಟುಂಬದವರು ತಿಳಿಸಿದರು.

ಕಷ್ಟಕ್ಕೆ ಮಿಡಿಯುತ್ತಿದ್ದ ಗುರೂಜಿ

ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರು ತಮ್ಮ ಕುಟುಂಬದವರ ಕಷ್ಟ–ಸುಖಗಳಿಗೆತಕ್ಷಣ ಸ್ಪಂದಿಸುತ್ತಿದ್ದರು‌. ತಮ್ಮ ಸ್ವಂತ ಊರು ಬಾಗಲಕೋಟೆ ಮತ್ತು ಅಜ್ಜಿ ಊರು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಹಳ್ಳದಗೆಣ್ಣೂರಿಗೂ ಭೇಟಿ ನೀಡುತ್ತಿದ್ದರು.

‘ವಾಸ್ತು ತಜ್ಞರಾಗಿ ಎತ್ತರಕ್ಕೆ ಬೆಳೆದಿದ್ದರೂ, ತಮ್ಮ ಬಂಧು-ಬಳಗದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇತ್ತೀಚೆಗೆ ನಮ್ಮ ಕುಟುಂಬದ ಹುಡುಗನೊಬ್ಬನಿಗೆ ಕಣ್ಣಿನ ಸಮಸ್ಯೆ ತಲೆದೋರಿತ್ತು. ಆಗ ಅವರೇ ಚಿಕಿತ್ಸೆಗೆ ನೆರವಾಗಿದ್ದರು. ಏನೇ ತೊಂದರೆ ಇದ್ದರೂ ತಿಳಿಸಿ ಎಂದು ಧೈರ್ಯ ಹೇಳಿದ್ದರು’ ಎಂದು ಗುರೂಜಿ ಅವರ ಅತ್ತಿಗೆ ಪ್ರೇಮಲತಾ ಶೀಲವಂತರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT