ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಠಾಣೆಗಳಲ್ಲಿ ಗಣಪನ ಆರಾಧನೆ

ಸಿಬ್ಬಂದಿ– ಜನರನ್ನು ಬೆಸೆಯುತ್ತಿರುವ ಏಕದಂತನ ಪ್ರತಿಷ್ಠಾಪನೆ: ಕರ್ತವ್ಯದ ಏಕತಾನತೆ ಕಳೆಯುವ ವಿನಾಯಕ
Last Updated 15 ಸೆಪ್ಟೆಂಬರ್ 2018, 14:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯ ನಗರದ ಪೊಲೀಸರು ಗಣೇಶೋತ್ಸವಕ್ಕೆ ಭದ್ರತೆ ನೀಡುವುದು ಮಾತ್ರವಲ್ಲ, ವಿನಾಯಕನನ್ನು ಖುದ್ದು ಆರಾಧಿಸುವ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.

ಕಾನೂನು– ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಯಾವುದೇ ಅಡೆತಡೆಗಳು ಎದುರಾಗದಿರಲೆಂದು ಹುಬ್ಬಳ್ಳಿ– ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಬಹುತೇಕ ಎಲ್ಲ ಪೊಲೀಸ್ ಠಾಣೆಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಏಕದಂತನ ಆರಾಧನೆಯಲ್ಲಿ ಸಿಬ್ಬಂದಿ ತೊಡಗಿದ್ದಾರೆ.

ಪೊಲೀಸ್ ಠಾಣೆಗಳಲ್ಲಿ ಗಣಪತಿ ಕೂರಿಸುವುದು ಅವಳಿ ನಗರದ ವಿಶೇಷತೆಯೂ ಹೌದು. ಐದು ದಿನಗಳ ಕಾಲ ಪೂಜಿಸಿ, ಆ ನಂತರ ವಿಸರ್ಜನೆ ಮಾಡಲಾಗುತ್ತದೆ. ಅಲ್ಲದೆ ಬಹುತೇಕ ಎಲ್ಲ ಠಾಣೆಗಳಲ್ಲಿ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಒಳಿತಿಗಾಗಿ ಪ್ರಾರ್ಥಿಸಲಾಗುತ್ತದೆ. ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗುತ್ತದೆ.

ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಘಟಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ಅವರು ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು. ಅದೇ ಆಚರಣೆಯ ಮೂಲಕ ಠಾಣೆಯ ವ್ಯಾಪ್ತಿಯ ಜನರನ್ನು ಒಗ್ಗೂಡಿಸುವ, ಪರಸ್ಪರ ವಿಶ್ವಾಸ ಹೆಚ್ಚಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಠಾಣೆಯ ಸಿಬ್ಬಂದಿಯ ಕುಟುಂಬದವರೂ ಒಂದೆಡೆ ಸೇರುವ ಸದವಕಾಶವನ್ನು ಸಹ ಈ ಹಬ್ಬ ಕಲ್ಪಿಸಿಕೊಡುತ್ತಿದೆ.

‘ಅಶೋಕನಗರ ಠಾಣೆ 2010ರಲ್ಲಿ ಆರಂಭವಾಯಿತು. ಆಗಿನಿಂದಲೂ ಇಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ. ನಾನು ಬಂದ ನಂತರ ಮೂರನೇ ಬಾರಿ ಗಣಪತಿ ಕೂರಿಸಲಾಗಿದೆ. ಠಾಣೆಯ ಎಲ್ಲ ಸಿಬ್ಬಂದಿಯನ್ನು ಬೆಸೆಯುವ ಅವಕಾಶವನ್ನು ಸಹ ಈ ಹಬ್ಬ ಕಲ್ಪಿಸಿಕೊಡುತ್ತಿದೆ. ಎಲ್ಲ ಸಿಬ್ಬಂದಿ ಪೂಜೆಯಲ್ಲಿ ಭಾಗವಹಿಸುತ್ತಾರೆ. ವಿಸರ್ಜನೆ ಸಂದರ್ಭದಲ್ಲಿಯೂ ಒಂದಾಗಿ ಇರುತ್ತಾರೆ. ಎಲ್ಲರ ಮಧ್ಯೆ ಒಳ್ಳೆಯ ಭಾವನೆ ಮೂಡಲು ಇದು ಕಾರಣವಾಗುತ್ತಿದೆ. ಠಾಣೆಯ ವ್ಯಾಪ್ತಿಯ ಜನರು ಸಹ ಈ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸುತ್ತಾರೆ’ ಎನ್ನುತ್ತಾರೆ ಇನ್‌ಸ್ಪೆಕ್ಟರ್ ಜಗದೀಶ ಹಂಚನಾಳ.

‘ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಪರಾಧಗಳು ನಡೆಯದಿರಲಿ, ಶಾಂತಿಗೆ ಧಕ್ಕೆಯಾಗದಿರಲಿ ಎಂಬುದೊಂದೇ ನಮ್ಮ ಪ್ರಾರ್ಥನೆ. ಹೀಗಾದರೆ ನಾವು ಸಹ ನೆಮ್ಮದಿಯಿಂದ ಇರಬಹುದು, ಜನರು ಸಹ ಸಂತೋಷದಿಂದ ಬಾಳಬಹುದು’ ಎಂದು ಅವರು ಹೇಳುತ್ತಾರೆ.

‘ಬಾಲಗಂಗಾಧರ ತಿಲಕ್ ಅವರು ಹುಬ್ಬಳ್ಳಿಗೆ ಬಂದಿದ್ದರು. ಆ ನಂತರ ಇಲ್ಲಿ ಸಾರ್ವಜನಿಕ ಗಣೇಶೋತ್ಸವ ಆರಂಭವಾಯಿತು. ಠಾಣೆಗಳಲ್ಲಿ ವಿಘ್ನೇಶ್ವರನನ್ನು ಆರಾಧಿಸುವ ಸಂಪ್ರದಾಯವೂ ಆಗಿನಿಂದಲೇ ಆರಂಭವಾಗಿದೆ’ ಎನ್ನುತ್ತಾರೆ ಹಲವು ದಶಕಗಳಿಂದ ಹುಬ್ಬಳ್ಳಿಯಲ್ಲಿಯೇ ವಾಸವಿರುವ ಎಎಸ್‌ಐ ದೇಸಾಯಿ.

ಕಾನೂನು ಸುವ್ಯವಸ್ಥೆ ಕಾಪಾಡುವುಡು, ಅಪರಾಧಿಗಳ ಬೆನ್ನಟ್ಟುವುದು, ಭದ್ರತೆ, ಸಂಚಾರ ನಿಯಂತ್ರಣದಂತಹ ಕೆಲಸದಲ್ಲೇ ಮುಳಗುವ ಸಿಬ್ಬಂದಿಗೆ ಈ ಹಬ್ಬ ಹೊಸ ಅನುಭವ ನೀಡುತ್ತದೆ. ಗಣೇಶನನ್ನು ಪ್ರತಿಷ್ಠಾಪಿಸಲು ಮಂಟಪ ನಿರ್ಮಾಣ ಮಾಡುವುದು, ಅದನ್ನು ಸಿಂಗರಿಸುವುದು, ಪೂಜೆ– ಪುನಸ್ಕಾರ ಮಾಡುವ ಮೂಲಕ ಕರ್ತವ್ಯದ ಏಕತಾನತೆಯಿಂದ ಹೊರಬರಲು ಸಹ ಇದು ಅವಕಾಶ ಕಲ್ಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT