ಬುಧವಾರ, ನವೆಂಬರ್ 20, 2019
25 °C

ಹೆಬ್ಬಳ್ಳಿ: ಬ್ರಹ್ಮಾನಂದ ಮಹಾರಾಜರ ಆರಾಧನಾ ಶತಮಾನೋತ್ಸವ ಆರಂಭ

Published:
Updated:
Prajavani

ಹುಬ್ಬಳ್ಳಿ: ಬ್ರಹ್ಮಾನಂದ ಮಹಾರಾಜರ ಪುಣ್ಯತಿಥಿ ಆರಾಧನಾ ಶತಮಾನೋತ್ಸವದ ಅಂಗವಾಗಿ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿಯ ಚೈತನ್ಯಾಶ್ರಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಶನಿವಾರ ಚಾಲನೆ ಲಭಿಸಿತು.

ಸೆ. 28ರ ವರೆಗೆ ನಡೆಯಲಿರುವ ಕಾರ್ಯಕ್ರಮಗಳಿಗೆ ಊರ ಹೊರಭಾಗದಲ್ಲಿ ಭವ್ಯ ಸಭಾಮಂಟಪ, ಅತಿಥಿ ಗೃಹ ಮತ್ತು ಯಜ್ಞ ಕುಂಡಗಳನ್ನು ನಿರ್ಮಿಸಲಾಗಿದೆ. ಸಮಾರಂಭದ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಈಶ್ವರನ ಕಲಾಕೃತಿ ಆಕರ್ಷಣೀಯವಾಗಿದೆ. ಬೆಳಿಗ್ಗೆ ಬ್ರಹ್ಮಾನಂದ ಮಹಾರಾಜರ ಶತಮಾನೋತ್ಸವ ಮಂಟಪದಲ್ಲಿ ಧ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಯಿತು.

ಬ್ರಹ್ಮಚೈತನ್ಯ ಮಹಾರಾಜ ಹಾಗೂ ಬ್ರಹ್ಮರಾಜರ ಮಹಾರಾಜರ ಪಾದುಕೆಗಳನ್ನು ಶತಮಾನೋತ್ಸವ ಮಂಟಪದ ತನಕ ಶೋಭಾಯಾತ್ರೆಯ ಮೂಲಕ ತೆಗೆದುಕೊಂಡು ಹೋಗಲಾಯಿತು. ಪಲ್ಲಕ್ಕಿ ಮೆರವಣಿಗೆ, ಕೋಠಿಪೂಜೆ, ಭಾವೂಸಾಹೇಬ ಉಪಾಸನಾ ಮಂಟಪದಲ್ಲಿ ಕಾಕಡಾರತಿ, ಪಂಚಪದೀ ಭಜನೆ, ಅಭಿಷೇಕ, ಪೂಜೆ, ಮಹಾಮಂಗಳಾರತಿ ನಡೆದವು. 13 ಗಂಟೆಗಳ ನಿರಂತರ ಭಜನೆ ಮತ್ತು ಅಖಂಡ ನಾಮಸ್ಮರಣೆ ಕೂಡ ಆರಂಭವಾಯಿತು. ರಾಮನಾಮ ಜಪದ ಸಂಕಲ್ಪವನ್ನು ಬ್ರಹ್ಮಾನಂದ ಮಹಾರಾಜರಿಗೆ ಅರ್ಪಿಸುವ ಕಾರ್ಯಕ್ರಮ ಕೂಡ ಜರುಗಲಿದೆ.

ಆನಂದಯಜ್ಞ ಮಂಟಪದಲ್ಲಿ ಬೆಳಿಗ್ಗೆ ಉದಕಶಾಂತಿ ಮತ್ತು ರಾಕ್ಷೋಘ್ನ ಹೋಮ ನಡೆದವು. ಬ್ರಹ್ಮಚೇತನ ಪ್ರಸಾದ ಮಂಟಪದಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಂದಗೋಳ ನಾರಾಣಪ್ಪ ಗೋಪೂಜಾ ಮಂಟಪದಲ್ಲಿ ಆಕಳುಗಳಿಗೆ ಪೂಜೆ ಮಾಡಲಾಯಿತು. ಆರಾಧನಾ ಶತಮಾನೋತ್ಸವದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಮತ್ತು ಮಹಾರಾಷ್ಟ್ರದಿಂದಲೂ ಭಕ್ತರು ಬಂದಿದ್ದಾರೆ. ಆದ್ದರಿಂದ ಹೆಬ್ಬಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಂದವರಿಗೆ ಉಳಿದುಕೊಳ್ಳಲು ಗ್ರಾಮದ ಕಲ್ಯಾಣಮಂಟಪಗಳು ಮತ್ತು ಕೆಲ ಮನೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಎಂಟೂ ದಿನ ಹೋಮ, ಕೀರ್ತನ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಠಾಧೀಶರಿಂದ ಸತ್ಸಂಗ, ಆಶೀರ್ವಚನ ಕಾರ್ಯಕ್ರಮ ನಡೆಯಲಿವೆ. ಭಾನುವಾರ ಆನಂದ ಸಾಗರ ಯಜ್ಞಮಂಟಪದಲ್ಲಿ ಗಣಹೋಮ, ಪವಮಾನ ಹೋಮ ಮತ್ಮತು ರಾಮತಾರಕ ಹೋಮ ಆಯೋಜನೆಯಾಗಿವೆ.

ಪ್ರತಿಕ್ರಿಯಿಸಿ (+)