ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಹುಬ್ಬಳ್ಳಿ ಠಾಣೆಗೆ ಗೃಹ ಸಚಿವ ದಿಢೀರ್‌ ಭೇಟಿ

Published 8 ಸೆಪ್ಟೆಂಬರ್ 2023, 17:08 IST
Last Updated 8 ಸೆಪ್ಟೆಂಬರ್ 2023, 17:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಶುಕ್ರವಾರ ಸಂಜೆ ದಿಢೀರ್‌ ಭೇಟಿ ನೀಡಿ ಅಧಿಕಾರಿಗಳ ಮತ್ತು ಸಿಬ್ಬಂದಿಯ ಕಾರ್ಯಪಾಲನೆ, ವಿವಿಧ ದಾಖಲಾತಿಗಳನ್ನು ಪರಿಶೀಲಿಸಿದರು.

ವಿವಿಧ ಕಾರಣಕ್ಕಾಗಿ ಪೊಲೀಸ್‌ ಠಾಣೆಗೆ ಬಂದಿದ್ದ ಜನರೊಂದಿಗೆ ಚರ್ಚಿಸಿದರು. ಅಲ್ಲದೆ, ದಾಖಲಾದ ಕೆಲವು ಪ್ರಕರಣಗಳಿಗೆ ಸಂಬಂಧಿಸಿದವರಿಗೆ ಕರೆಗಳನ್ನು ಮಾಡಿ, ಪೊಲೀಸರು ಸ್ಪಂದಿಸಿದ ರೀತಿಯ ಕುರಿತು ಮಾಹಿತಿ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಸಾಮಾನ್ಯ ಭೇಟಿಯಾಗಿದೆ. ಜನಸ್ನೇಹಿ ಪೊಲೀಸ್‌ ಠಾಣೆ ಯೋಜನೆ ನಿಜವಾಗಿಯೂ ಅನುಷ್ಠಾನ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿದ್ದೇನೆ. ದೂರು ನೀಡಲು ಬಂದಿದ್ದ ಜನರನ್ನು ಮಾತನಾಡಿಸಿ, ಪೊಲೀಸರು ಹೇಗೆ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಚರ್ಚಿಸಿದೆ. ಪೊಲೀಸರು ಕೆಲಸ ಮಾಡಿಕೊಟ್ಟಿದ್ದಾರೆ ಎಂಬುದನ್ನು ಜನರು ಹೇಳಿದ್ದಾರೆ’ ಎಂದರು. 

‘ಅಂತಿಮವಾಗಿ ಪೊಲೀಸ್‌ ಠಾಣೆಗಳಿರುವುದು ಜನರಿಗೆ ಒಳ್ಳೆಯದಾಗಲಿ ಎನ್ನುವ ಉದ್ದೇಶಕ್ಕೆ. ಇದನ್ನೇ ಪರಿಶೀಲಿಸಲು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ಭೇಟಿ ನೀಡಿದೆ’ ಎಂದು ಹೇಳಿದರು.

‘ಈ ಹಿಂದೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಕೋಮುಗಲಭೆ ಪ್ರಕರಣ ಕುರಿತು ವಿಚಾರಿಸುವುದಕ್ಕೆ ನಾನು ಬಂದಿಲ್ಲ. ಆ ಪ್ರಕರಣದಲ್ಲಿ ಕಾನೂನು ಪ್ರಕಾರ ಏನು ನಡೆಯಬೇಕೋ ಅದು ನಡೆಯುತ್ತದೆ. ಘಟನೆಯಲ್ಲಿ ಬಂಧಿಸಿರುವ ಅಮಾಯಕರನ್ನು ಬಿಡುಗಡೆ ಮಾಡುವಂತೆ ಸ್ಥಳೀಯ ಶಾಸಕರು ಮತ್ತು ಕೆಲವು ಸಂಬಂಧಿಗಳು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವುದಕ್ಕಾಗಿ ಸಂಪುಟ ಉಪಸಮಿತಿ ರಚನೆಯಾಗಿದ್ದು, ಘಟನೆಯ ಗಂಭೀರತೆಯನ್ನು ಅದು ನಿರ್ಧರಿಸುತ್ತದೆ. ಉಪಸಮಿತಿಯು ರಾಜ್ಯ ಸಚಿವ ಸಂಪುಟಕ್ಕೆ ವರದಿ ಸಲ್ಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’  ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹುಬ್ಬಳ್ಳಿ– ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಹಾಗೂ ಪೊಲೀಸ್‌ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT