ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ, ಬೆಳಗಾವಿ: ನೂತನ ಟರ್ಮಿನಲ್‌ಗಳಿಗೆ ಶಂಕುಸ್ಥಾಪನೆ

Published 10 ಮಾರ್ಚ್ 2024, 14:50 IST
Last Updated 10 ಮಾರ್ಚ್ 2024, 14:50 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಬೆಳಗಾವಿ: ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ ತಲಾ ₹320  ಹಾಗೂ ₹357 ಕೋಟಿಗಳ ವೆಚ್ಚದಲ್ಲಿ ನೂತನ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರಪ್ರದೇಶದ ಆಜಂಗಢದಿಂದ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಎಂಜಿನಿಯರಿಂಗ್‌ ವಿಭಾಗದ ನಿರ್ದೇಶಕ ಸಂಜೀವ್ ಜಿಂದಾಲ್, ‘₹ 320 ಕೋಟಿ ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣ ಆಗಲಿದ್ದು, ಎರಡು ವರ್ಷಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಉದ್ದೇಶ ಹೊಂದಲಾಗಿದೆ’ ಎಂದರು.

‘19,600 ಚದರ ಮೀಟರ್ ಪ್ರದೇಶದಲ್ಲಿ ಈ ಟರ್ಮಿನಲ್, 32 ಚೆಕ್–ಇನ್ ಕೌಂಟರ್‌ಗಳನ್ನು ಒಳಗೊಂಡಿರಲಿದೆ. ಏಕಕಾಲಕ್ಕೆ 2,400 ಪ್ರಯಾಣಿಕರ ನಿರ್ವಹಣೆಯ ಸಾಮರ್ಥ್ಯ ಹೊಂದಿರಲಿದ್ದು, 600 ಕಾರುಗಳ ನಿಲುಗಡೆಗೆ ಅವಕಾಶವೂ ಇರಲಿದೆ’ ಎಂದರು.

ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಈ ಟರ್ಮಿನಲ್‌ನಲ್ಲಿ ನಾಲ್ಕು ಏರೋಬ್ರಿಡ್ಜ್‌, ತಲಾ ಎಂಟು ಎಸ್ಕ್‌ಲೇಟರ್ ಮತ್ತು ಲಿಫ್ಟ್‌ ಸೌಕರ್ಯವಿರಲಿದ್ದು  ಏಕಕಾಲಕ್ಕೆ ಹೊರಹೋಗುವ ಮತ್ತು ಒಳಬರುವ 2,400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ಟರ್ಮಿನಲ್‌ನಲ್ಲಿ ಏಕಕಾಲಕ್ಕೆ 9 ವಿಮಾನಗಳು, ಟರ್ಮಿನಲ್‌ ಎದುರು 500 ಕಾರು ಮತ್ತು 200 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ನೆರೆಯ ಮಹಾರಾಷ್ಟ್ರ ಮತ್ತು ಗೋವಾದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಮೂರು ರಾಜ್ಯಗಳಿಗೆ ಕೇಂದ್ರ ಸ್ಥಾನವಾಗಿದೆ. ಹೊಸ ಟರ್ಮಿನಲ್ ನಿರ್ಮಾಣದಿಂದ ಸಂಪರ್ಕ ವ್ಯವಸ್ಥೆ ಸುಧಾರಿಸಲಿದ್ದು, ಎಲ್ಲ ದೃಷ್ಟಿಯಿಂದಲೂ ಬೆಳಗಾವಿಗೆ ಶಕ್ತಿ ಬರಲಿದೆ’ ಎಂದರು.

‘ಸಾಂಬ್ರಾ ವಿಮಾ‌ನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರು ನಾಮಕಾರಣ ಮಾಡಬೇಕು. ನಿಲ್ದಾಣದ ಆವರಣದಲ್ಲಿ ಚನ್ನಮ್ಮನ ಪ್ರತಿಮೆ ಪ್ರತಿಷ್ಠಾಪಿಸಬೇಕು’ ಎಂದು ಆಗ್ರಹಿಸಿದರು.

ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವರ್ಚುವಲ್ ಮೂಲಕ ಹೊಸ ಟರ್ಮಿನಲ್‌ ಶಂಕುಸ್ಥಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಮಾತನಾಡಿದರು
ಬೆಳಗಾವಿ ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವರ್ಚುವಲ್ ಮೂಲಕ ಹೊಸ ಟರ್ಮಿನಲ್‌ ಶಂಕುಸ್ಥಾಪನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT