ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೂ ರಾಣಿ ಚೆನ್ನಮ್ಮ’ ರಾಷ್ಟ್ರೀಯ ಆಂದೋಲನ; 21ರಂದು ಚಾಲನೆ

Published 13 ಫೆಬ್ರುವರಿ 2024, 15:52 IST
Last Updated 13 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ಧಾರವಾಡ: ‘ಬೆಳಗಾವಿಯ ಕಿತ್ತೂರಿನಲ್ಲಿ ಫೆ.21ರಂದು ‘ನಾನೂ ರಾಣಿ ಚೆನ್ನಮ್ಮ’ ರಾಷ್ಟ್ರೀಯ ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಈ ಆಂದೋಲನ ವಿವಿಧೆಡೆ ಎರಡು ತಿಂಗಳು ನಡೆಯಲಿದೆ’ ಎಂದು ನವದೆಹಲಿಯ ಆ್ಯಕ್ಟ್‌ ನೌ ಫಾರ್‌ ಹಾರ್ಮೊನಿ ಆ್ಯಂಡ್‌ ಡೆಮಾಕ್ರೆಸಿ (ಅನ್‌ಹದ್‌) ಟ್ರಸ್ಟ್‌ನ ಶಬನಂ ಹಶ್ಮಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಆಂದೋಲನ ನಡೆಯಲಿದೆ. ಕಿತ್ತೂರಿನಲ್ಲಿ 21ರಂದು ಭಾಷಣ, ಸಂಗೀತ, ಗಾಯನ ಕಾರ್ಯಕ್ರಮಗಳು ನಡೆಯಲಿವೆ. ‘ಕಿತ್ತೂರು ಘೋಷಣೆ’ಯನ್ನು ವಿವಿಧ ಭಾಷೆಗಳಲ್ಲಿ ಮುದ್ರಿಸಿ ಇತರ ರಾಜ್ಯಗಳಲ್ಲೂ ಬಿಡುಗಡೆ ಮಾಡಲಾಗುವುದು’ ಎಂದರು.

ದೀಕ್ಷಾ ಸಂಘಟನೆಯ ಲಿನೆಟ್‌ ಮಾತನಾಡಿ, ‘ಆಂದೋಲನ ನಿಮಿತ್ತ ಬೆಳಗಾವಿ, ಧಾರವಾಡ ಸಹಿತ ವಿವಿಧ ಜಿಲ್ಲೆಗಳ ಗ್ರಾಮಗಳಲ್ಲಿ ಜಾಥಾ ಆಯೋಜಿಸಲಾಗುವುದು. ಆಂದೋಲನ ಕುರಿತು ಅರಿವು ಮೂಡಿಸಲಾಗುವುದು’ ಎಂದು ತಿಳಿಸಿದರು.

ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಚನ್ನಮ್ಮ ಎಂದರೆ ನಾಡಿನ ಅಭಿಮಾನ, ಗೌರವದ ಸಂಕೇತ. ಚನ್ನಮ್ಮ ಸ್ವಾತಂತ್ರ್ಯದ ಕಹಳೆ ಮೊಳಗಿಸಿ 200 ವರ್ಷ ಸಂದ ನೆನಪಿನಲ್ಲಿ ಆಂದೋಲನ ಮಾಡುತ್ತಿರುವುದು ಒಳ್ಳೆಯದು. ಸ್ವಾಭಿಮಾನ ಮತ್ತು ಹಕ್ಕಿಗೆ ಧಕ್ಕೆಯಾದಾಗ ಪ್ರತಿಭಟಿಸುವಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಶಂಕರ ಹಲಗತ್ತಿ ಮಾತನಾಡಿ, ‘ಕಿತ್ತೂರಿನಲ್ಲಿ 21ರಂದು ಬೆಳಿಗ್ಗೆ 9 ಗಂಟೆಗೆ ಚನ್ನಮ್ಮ ಪ್ರತಿಮೆ ಸ್ಥಳದಿಂದ ಮೆರವಣಿಗೆ ಹೊರಡಲಿದೆ. 11 ಗಂಟೆಗೆ ಕೋಟೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ಲೀನಾ, ಎಸ್‌.ಆರ್‌.ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT