ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಐಟಿ ಪಾರ್ಕ್‌: ಸೌಕರ್ಯ ಕೊರತೆ, ಪಾಳು ಬಿದ್ದ ಮಳಿಗೆ

ಎಲ್.ಮಂಜುನಾಥ
Published 20 ಮೇ 2024, 6:33 IST
Last Updated 20 ಮೇ 2024, 6:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಸಾಫ್ಟ್‌ವೇರ್‌ ಕಂಪನಿಗಳನ್ನು ಉತ್ತೇಜಿಸಲು ಮತ್ತು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಆರಂಭವಾದ ನಗರದ ಮಾಹಿತಿ ತಂತ್ರಜ್ಞಾನ ಪಾರ್ಕ್‌ (ಐಟಿ ಪಾರ್ಕ್‌) ಮೂಲಸೌಲಭ್ಯ ಕೊರತೆ ಮತ್ತು ನಿರ್ವಹಣೆಯ ಸಮಸ್ಯೆ ಎದುರಿಸುತ್ತಿದೆ. 

ಹುಬ್ಬಳ್ಳಿ ನಗರದಲ್ಲಿ ಐಟಿ ಪಾರ್ಕ್‌ ಆರಂಭಿಸುವ ಮೂಲಕ ಸಾಫ್ಟ್‌ವೇರ್‌ ಕಂಪನಿಗಳು, ಬಿಪಿಒ, ಕಾಲ್‌ ಸೆಂಟರ್‌ಗಳಿಗೆ ಅವಕಾಶ ನೀಡಿದರೆ, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಐಟಿ ಕಂಪನಿಗಳ ಉದ್ಯೋಗದಾತರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಸದುದ್ದೇಶದಿಂದ ಐಟಿ ಪಾರ್ಕ್ ಇಲ್ಲಿ ಆರಂಭವಾಗಿದೆ. ಇದೀಗ ತನ್ನ ಮೂಲ ಉದ್ದೇಶವನ್ನೇ ಕಳೆದುಕೊಂಡು ಕಟ್ಟಡ ಪಾಳು ಬಿದ್ದಂತೆ ಕಾಣುತ್ತದೆ.

ಪಾಳು ಬಿದ್ದ ಮಳಿಗೆ, ಶಿಥಿಲ ಕಟ್ಟಡ:

ರಾಜ್ಯ ಸರ್ಕಾರವು ಅಂದಾಜು ₹36 ಕೋಟಿ ವೆಚ್ಚದಲ್ಲಿ ವಿಶಾಲವಾಗಿ ಐಟಿ ಪಾರ್ಕ್‌ ಕಟ್ಟಡವನ್ನು ನಿರ್ಮಿಸಿದೆ. ಇಲ್ಲಿನ ಸಂಕೀರ್ಣದಲ್ಲಿ 200ಕ್ಕೂ ಅಧಿಕ ಮಳಿಗೆಗಳಿವೆ. ಬಹುತೇಕ ಮಳಿಗೆಗಳು ಪಾಳು ಬಿದ್ದಿದ್ದು, ದೂಳು, ತ್ಯಾಜ್ಯಗಳಿಂದ ತುಂಬಿವೆ. ಮಳಿಗೆಗಳ ಸಂಪರ್ಕ ಕಲ್ಪಿಸುವ ನೀರಿನ ಪೈಪುಗಳು ಹಾಳಾಗಿವೆ. ಮಳಿಗೆಯೊಳಗೆ ನೀರು ಸೋರಿಕೆ ಆಗುತ್ತಿದೆ. ಕಟ್ಟಡಗಳು ಶಿಥಿಲವಾಗಿ, ದುರ್ವಾಸನೆ ಬೀರುತ್ತಿವೆ. ಶೌಚಾಲಯಗಳ ಸ್ಥಿತಿ ಹೇಳತೀರದಾಗಿದೆ. 

ಇಲ್ಲಿನ ಕೆಲ ಐಟಿ ಕಂಪನಿಗಳು, ಬಿಪಿಒ ಕಾಲ್‌ಸೆಂಟರ್‌ಗಳು ಕಾರ್ಯ ನಿರ್ವಹಿಸುವಾಗ ವಿದ್ಯುತ್‌ ಸಮಸ್ಯೆ ಉಂಟಾದಲ್ಲಿ ತಕ್ಷಣ ಪರ್ಯಾಯವಾಗಿ ವಿದ್ಯುತ್‌ ವ್ಯವಸ್ಥೆ ಸೌಲಭ್ಯ ಕೂಡ ಕಲ್ಪಿಸಿಲ್ಲ.

ಐಟಿಯೇತರ ಕಂಪನಿಗಳ ಹಬ್‌:

ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾದ ಕಂಪನಿಗಳನ್ನು ಪೋಷಿಸುವ ಉದ್ದೇಶದಿಂದ ಆರಂಭವಾದ ಐಟಿ ಪಾರ್ಕ್‌ ಕಟ್ಟಡದ ಸಂಕೀರ್ಣವು ಐಟಿಯೇತರ ವಾಣಿಜ್ಯ ಮಳಿಗೆಗಳಿಂದ ತುಂಬಿದೆ. ಮೂಲಸೌಕರ್ಯ ಸಮಸ್ಯೆ, ನಿರ್ವಹಣೆ ಕೊರತೆಯಿಂದಾಗಿ ಹೆಚ್ಚಿನ ಮಳಿಗೆಯವರು ಖಾಲಿ ಮಾಡಿದ್ದಾರೆ. ಕೆಲವರು ಕಚೇರಿಯ ಪರಿಕರಗಳನ್ನು ಮಳಿಗೆಯಲ್ಲಿಯೇ ಬಿಟ್ಟು, ಬಾಡಿಗೆಯನ್ನೂ ಪಾವತಿಸದೇ ಮಳಿಗೆಗಳಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಕಟ್ಟಡದ ಬಹುತೇಕ ಮಳಿಗೆಗಳು ಬಿಕೋ ಎನ್ನುತ್ತಿವೆ. 

’ಐಟಿ ಪಾರ್ಕ್‌ನ ಆರಂಭದ ದಿನಗಳಲ್ಲಿ ಕೆಲ ಐಟಿ ಕಂಪನಿಗಳು, ಕಾಲ್‌ಸೆಂಟರ್‌, ಬಿಪಿಒ ಕೇಂದ್ರಗಳು ಕಚೇರಿಯನ್ನು ಆರಂಭಿಸಿ, ಕೆಲ ವರ್ಷ ಕಾರ್ಯ ನಿರ್ವಹಿಸಿದವು. ಸೌಲಭ್ಯ ಸಮಸ್ಯೆ, ನಿರ್ವಹಣೆಯ ಕೊರತೆ ಕಾರಣ ಹೇಳಿ ಬಹುತೇಕ ಕಂಪನಿಗಳ ಮಳಿಗೆಗಳು ಬಾಗಿಲು ಮುಚ್ಚಿದವು. ಕ್ರಮೇಣ ಐಟಿಯೇತರ ವಾಣಿಜ್ಯ ಮಳಿಗೆಗಳು ಇಲ್ಲಿ ತಲೆಯೆತ್ತಿದವು. ಕೆಲ ಮಳಿಗೆಯವರು ಹಲವು ವರ್ಷಗಳಿಂದ ಬಾಡಿಗೆ ಪಾವತಿಸಿದೇ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ. ಹೀಗಾಗಿ ಬಹುತೇಕ ಮಳಿಗೆಗಳು ದೂಳಿನಿಂದ ಕೂಡಿವೆ’ ಎಂದು ಇಲ್ಲಿನ ಎಸ್‌.ಎಸ್‌.ಸಾಫ್ಟ್‌ವೇರ್ ಸಲೂಷನ್ಸ್‌ ಕಂಪನಿಯ ಮಾಲೀಕ ಸಿದ್ದಲಿಂಗೇಶ್ವರ ಮಠದ ದೂರುತ್ತಾರೆ.

ಸ್ಪಂದಿಸದ ಅಧಿಕಾರಿಗಳು:

‘ಐಟಿ ಪಾರ್ಕ್‌ ಸಂಕೀರ್ಣದಲ್ಲಿ ಸ್ವಚ್ಛತೆ ನಿರ್ವಹಣೆ ಮಾಡಿ, ಪರ್ಯಾಯ ವಿದ್ಯುತ್‌ ಸೌಲಭ್ಯ ಕಲ್ಪಿಸಿಕೊಡಬೇಕು. ಶಿಥಿಲವಾಗಿರುವ ಕಟ್ಟಡಗಳನ್ನು ದುರಸ್ತಿ ಮಾಡಿಕೊಡಿ ಎಂದು ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಹಿಂದಿನ ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಎಸ್‌.ಎನ್‌.ಸಿದ್ದರಾಮಪ್ಪ ಅವರಲ್ಲಿ ಮನವಿ ಮಾಡಿದ್ದೇವು. ಆದರೆ, ಇಂದಿಗೂ ಸಮಸ್ಯೆ ಬಗೆಹರಿದಿಲ್ಲ‘ ಎಂದು ಇಲ್ಲಿನ ಮಳಿಗೆಯ ಬಾಡಿಗೆದಾರರೊಬ್ಬರು ಅಸಮಧಾನ ವ್ಯಕ್ತಪಡಿಸಿದರು. 

‘ಕೆಲವೇ ಕೆಲವು ಸಾಫ್ಟ್‌ವೇರ್‌ ಕಂಪನಿಗಳು, ಬಿಪಿಒ, ಕಾಲ್‌ ಸೆಂಟರ್‌ ಹಾಗೂ ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಮತ್ತು ಸಾಫ್‌ವೇರ್‌ ಪರಿಕರಗಳನ್ನು ಮಾರಾಟ ಮಾಡುವ ಕಂಪನಿಗಳ ಮಳಿಗೆಗಳು ಇಲ್ಲಿದ್ದು, ಅವರಿಗೂ ಅಗತ್ಯ ಸೌಲಭ್ಯ ನೀಡಿಲ್ಲ. ಹಲವು ವರ್ಷಗಳಿಂದ ಬಾಡಿಗೆ ಪಾವತಿಸದೇ ಇರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅವರನ್ನು ತೆರವುಗೊಳಿಸಿ ಬೇರೆಯವರಿಗೆ ಅಥವಾ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿಗೆ ಬಾಡಿಗೆ ನೀಡಿದರೆ, ಸರ್ಕಾರಕ್ಕೆ ಸಕಾಲಿಕವಾಗಿ ಬಾಡಿಗೆಯಾದರೂ ಬರುತ್ತದೆ. ಇದನ್ನೂ ಸಂಬಂಧಿಸಿದ ಅಧಿಕಾರಿಗಳು ಮಾಡುತ್ತಿಲ್ಲ‘ ಎಂದು ಸಿದ್ದಲಿಂಗೇಶ್ವರ ಮಠದ ಆರೋಪಿಸುತ್ತಾರೆ. 

‘ಇಲ್ಲಿನ ಐಟಿಯೇತರ ಕಂಪನಿಗಳನ್ನು ತೆರವುಗೊಳಿಸಿ, ಕಟ್ಟಡವನ್ನು ಮತ್ತೊಮ್ಮೆ ನವೀಕರಿಸಿ ಐಟಿ ಉದ್ಯಮ ಸ್ಥಾಪಿಸುವವರಿಗೆ ಹಂಚಿಕೆ ಮಾಡಲಾಗುವುದು ಎಂದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದ ಸಿ.ಎನ್‌. ಅಶ್ವಥ್‌ ನಾರಾಯಣ ಹೇಳಿದ್ದರು. ಇಂದಿಗೂ ಅನುಷ್ಠಾನವಾಗಿಲ್ಲ‘ ಎಂದು ಇಲ್ಲಿನ ಮಳಿಗೆಯ ಬಾಡಿಗೆದಾರರೊಬ್ಬರು ದೂರುತ್ತಾರೆ. 

ಹುಬ್ಬಳ್ಳಿ ನಗರದ ಐಟಿ ಪಾರ್ಕ್‌ನಲ್ಲಿ ಪಾಳು ಬಿದ್ದಿರುವ ಬೃಹತ್‌ ಮಳಿಗೆ
–ಚಿತ್ರ: ಗುರು ಹಬೀಬ 
ಹುಬ್ಬಳ್ಳಿ ನಗರದ ಐಟಿ ಪಾರ್ಕ್‌ನಲ್ಲಿ ಪಾಳು ಬಿದ್ದಿರುವ ಬೃಹತ್‌ ಮಳಿಗೆ –ಚಿತ್ರ: ಗುರು ಹಬೀಬ 
ಹುಬ್ಬಳ್ಳಿ ನಗರದ ಐಟಿ ಪಾರ್ಕ್‌ನ ಮಳಿಗೆಯೊಂದರಲ್ಲಿ ತ್ಯಾಜ್ಯ ಸುರಿದಿರುವುದು
–ಚಿತ್ರ: ಗುರು ಹಬೀಬ 
ಹುಬ್ಬಳ್ಳಿ ನಗರದ ಐಟಿ ಪಾರ್ಕ್‌ನ ಮಳಿಗೆಯೊಂದರಲ್ಲಿ ತ್ಯಾಜ್ಯ ಸುರಿದಿರುವುದು –ಚಿತ್ರ: ಗುರು ಹಬೀಬ 
ಐಟಿ ಪಾರ್ಕ್‌ನಲ್ಲಿ ಬಾಡಿಗೆ ಪಾವತಿ ಮಾಡದವರಿಗೆ ಸಂಬಂಧಿಸಿದ ಮಳಿಗೆಯ ಶಟರ್‌ಗೆ ನೋಟಿಸ್‌ ಜಾರಿ ಅಂಟಿಸಿರುವುದು
–ಚಿತ್ರ: ಗುರು ಹಬೀಬ 
ಐಟಿ ಪಾರ್ಕ್‌ನಲ್ಲಿ ಬಾಡಿಗೆ ಪಾವತಿ ಮಾಡದವರಿಗೆ ಸಂಬಂಧಿಸಿದ ಮಳಿಗೆಯ ಶಟರ್‌ಗೆ ನೋಟಿಸ್‌ ಜಾರಿ ಅಂಟಿಸಿರುವುದು –ಚಿತ್ರ: ಗುರು ಹಬೀಬ 
ಹುಬ್ಬಳ್ಳಿಯ ಐಟಿ ಪಾರ್ಕ್‌ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು ಅದನ್ನು ನವೀಕರಿಸಿ ಉದ್ಯೋಗ ಸೃಷ್ಟಿಸುವಂತಹ ನವೋದ್ಯಮ (ಸ್ಟಾರ್ಟ್‌ಅಪ್) ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಪೂರಕವಾದ ವಾತಾವರಣ ನಿರ್ಮಿಸಲಾಗುವುದು.
-ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ 
ಐಟಿ ಪಾರ್ಕ್‌ನಲ್ಲಿ ಐಟಿಯೇತರ ಕಂಪನಿ ವಾಣಿಜ್ಯ ಮಳಿಗೆಗಳಿರುವುದು ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಬಾಕಿ ಬಾಡಿಗೆ ಪಾವತಿಗೂ ಸಂಬಂಧಿಸಿದ ಬಾಡಿಗೆದಾರರಿಗೆ ಸೂಚಿಸಲಾಗುವುದು.
–ಮಹೇಶ ಟೆಂಗಿನಕಾಯಿ ಶಾಸಕ.
ಐಟಿ ಪಾರ್ಕ್‌ನ ಲಾಬಿ–2 ವಿಭಾಗದಲ್ಲಿ ಅಳವಡಿಸಿರುವ ಮಳಿಗೆಗಳ ಪಟ್ಟಿಯಲ್ಲಿನ ಕಂಪನಿ ಕಚೇರಿಗಳು ಇಲ್ಲಿಲ್ಲ. ಆದರೆ ಬೋರ್ಡ್‌ನಲ್ಲಿ ಹೆಸರುಗಳಿವೆ. ಇಂತಹ ಫಲಕಗಳನ್ನು ತೆರವುಗೊಳಿಸಬೇಕು 
–ಸಿದ್ದಲಿಂಗೇಶ್ವರ ಮಠದ ಎಸ್‌.ಎಸ್‌.ಸಾಫ್ಟ್‌ವೇರ್ ಸಲೂಷನ್ಸ್‌ ಕಂಪನಿಯ ಮಾಲೀಕ.
ಐಟಿ ಪಾರ್ಕ್‌ನಲ್ಲಿ ಒಳಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು ಮಳೆ ಬಂದರೆ ಕೊಳಚೆ ನೀರು ಕಟ್ಟಡದೊಳಗೆ ನುಗ್ಗುತ್ತದೆ. ನೆಲಮಹಡಿಯ ಶೌಚಾಲಯದೊಳಗೂ ಹರಿಯುತ್ತದೆ. ನಿರ್ವಹಣೆ ಸರಿಯಿಲ್ಲ.
–ಅನಿಲ್‌ ಜಿ.ಪಾಟೀಲ ಇ–ಕಾಮರ್ಸ್‌ ಕಂಪನಿಯ ಉದ್ಯೋಗಿ ಐಟಿ ಪಾರ್ಕ್‌
₹4.27ಕೋಟಿಗೂ ಅಧಿಕ ಬಾಡಿಗೆ ಬಾಕಿ!
‘ಐಟಿ ಪಾರ್ಕ್‌ನಲ್ಲಿನ ಸಮಸ್ಯೆ ಹಾಗೂ ಸೌಲಭ್ಯ ಕೊರತೆ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕೆಲ ಮಳಿಗೆಯವರು ಕಾರಣಾಂತರಗಳಿಂದ ಮಳಿಗೆಗಳ ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ. ಮಳಿಗೆ ಕಚೇರಿಯಲ್ಲಿನ ಪರಿಕರಗಳನ್ನೂ ತೆರವು ಮಾಡಿಲ್ಲ. ಇಂತಹ ಹಲವು ಮಳಿಗೆಗಳಿದ್ದು ಅವರು ಇಂದಿಗೂ ಬಾಡಿಗೆ ಪಾವತಿಸಿಲ್ಲ. ಇದುವರಿಗೆ ಸುಮಾರು ₹4.27ಕೋಟಿ ಬಾಕಿ ಬಾಡಿಗೆ ಹಣ ಬರಬೇಕಿದೆ. ಸಂಬಂಧಿಸಿದವರಿಗೆ ನೋಟಿಸ್‌ ನೀಡಲಾಗಿದೆ. ಮಳಿಗೆಗಳ ಶಟರ್‌ಗಳಿಗೂ ಅಂಟಿಸಲಾಗಿದೆ’ ಎನ್ನುತ್ತಾರೆ ಐಟಿ ಪಾರ್ಕ್‌ನ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿರುವ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ವ್ಯವಸ್ಥಾಪಕ ವಿಜಯದೇವ.  ‘ಪಾರ್ಕ್‌ನ ಎಲ್ಲಾ ಮಳಿಗೆಗಳನ್ನು ಬಾಡಿಗೆ ನೀಡಿದರೆ ತಿಂಗಳಿಗೆ ಕನಿಷ್ಠ ₹1 ಕೋಟಿ ಬಾಡಿಗೆ ಬರುತ್ತದೆ. ಪ್ರಸ್ತುತ ₹35ಲಕ್ಷ ಮಾತ್ರ ಬರುತ್ತಿದೆ‘ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT