ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಬಲೆಯಲ್ಲಿ ಸೊರಗುತ್ತಿರುವ ಕನ್ನಡ: ಧರಣೇಂದ್ರ ಕುರಕುರಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ. ಧರಣೇಂದ್ರ ಕುರಕುರಿ ಆತಂಕ
Last Updated 24 ಮಾರ್ಚ್ 2023, 13:34 IST
ಅಕ್ಷರ ಗಾತ್ರ

ಹುಬ್ಬಳ್ಳಿ (ಡಾ. ಡಿ.ಎಸ್. ‌ಕರ್ಕಿ ವೇದಿಕೆ): ‘ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡವೀಗ ಸಮಸ್ಯೆಗಳ ಸಿಕ್ಕುಗಳಲ್ಲಿ ಸೊರುಗುತ್ತಿದೆ...’ – ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ. ಧರಣೇಂದ್ರ ಕುರಕುರಿ ಅವರ ಆತಂಕದ ನುಡಿಗಳಿವು.

ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶುಕ್ರವಾರದಿಂದ ಹಮ್ಮಿಕೊಂಡಿರುವ ಎರಡು ದಿನಗಳ 15ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

‘ಭಾಷೆ, ಬದುಕು ಹಾಗೂ ಸಂಸ್ಕೃತಿಗೂ ನಿಕಟ ಸಂಬಂಧವಿದೆ. ಈ ಕೊಂಡಿ ಸಡಿಲವಾದರೆ ಗಂಡಾಂತರ ಕಾದಿದೆ. ಮೂರು ದಶಕಗಳಿಂದೀಚೆಗೆ ಕನ್ನಡವು ವಲಸಿಗರ ಭಾಷೆ, ಇಂಗ್ಲಿಷ್ ವ್ಯಾಮೋಹ, ಇಂಗ್ಲಿಷ್ ಮಾಧ್ಯಮದ ಶಿಕ್ಷಣದಿಂದಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಾದಕ್ಕೆ ಇತಿಶ್ರೀ ಹಾಡಲಿ: ‘ಧಾರವಾಡ ಸೇರಿದಂತೆ ಕೆಲ ಜಿಲ್ಲೆಗಳಿಗೆ ನೀರು ಕೊಡುವ ಮಹದಾಯಿ ಕಳಸಾ–ಬಂಡೂರಿ ಯೋಜನೆಗೆ ಗೋವಾ ಇನ್ನಿಲ್ಲದ ಕ್ಯಾತೆ ತೆಗೆಯುತ್ತಲೇ ಇದೆ. ಇದಕ್ಕೆ ಮಂಗಳ ಹಾಡುವಂತಹ ಹೆಜ್ಜೆಯನ್ನು ಸರ್ಕಾರ ಇಡಬೇಕು’ ಎಂದು ಒತ್ತಾಯಿಸಿದರು.

‘ಗಡಿಯಲ್ಲಿ ಮಹಾರಾಷ್ಟ್ರದ ಕುತಂತ್ರ ಮತ್ತೆ ಶುರುವಾಗಿದೆ. ಗಡಿಯ ಜನರನ್ನು ಎತ್ತಿ ಕಟ್ಟುವ ಹುನ್ನಾರ ನಡೆಸುತ್ತಿದೆ. ಇದಕ್ಕೆ ಕರ್ನಾಟಕ ಅವಕಾಶ ಕೊಡದೆ, ಪರಸ್ಪರ ಸೌಹಾರ್ದದಿಂದ ಬದುಕಬೇಕಾದ ಅನಿವಾರ್ಯತೆಯನ್ನು ಮನದಟ್ಟು ಮಾಡಕೊಡಬೇಕು’ ಎಂದು ಸಲಹೆ ನೀಡಿದರು.

ಕೈ ಕಲ್ಪವೃಕ್ಷವಾಗಲಿ: ‘ಮಾತೃಭಾಷೆ ಕಾಯುವ ಕನ್ನಡ ಸಾಹಿತ್ಯ ಪರಿಷತ್, ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳೊಂದಿಗೆ ಸರ್ಕಾರ ಕೈ ಜೋಡಿಸಿದರೆ, ಆ ಕೈ ಕಲ್ಪವೃಕ್ಷವಾಗಿ ಕನ್ನಡವನ್ನು ಕಾಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸರ್ಕಾರ ಇತ್ತೀಚೆಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಿದ್ದು, ಅದಕ್ಕೆ ರಾಜ್ಯಪಾಲರ ಅಂಕಿತ ಬಿದ್ದು ಕಾಯ್ದೆಯಾಗಬೇಕಿದೆ. ಕನ್ನಡ ಬಳಕೆ ಕುರಿತು ರಾಜಭಾಷಾ ಆಯೋಗ ರಚಿಸುವುದಾಗಿ ಹೇಳಿದೆ. ಕಾಯ್ದೆ, ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾದಾಗ ಕನ್ನಡದ ಸಮಗ್ರ ಬೆಳವಣಿಗೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

16 ಪುಟಗಳ ಭಾಷಣದಲ್ಲಿ ತಮ್ಮ ಸಾಹಿತ್ಯದ ಹಾದಿಯನ್ನು ಕುರಕುರಿ ಮೆಲುಕು ಹಾಕಿದರು. ಧಾರವಾಡದ ಸಾಹಿತ್ಯಿಕ ವಾತಾವರಣ, ಸಾಹಿತಿಗಳೊಂದಿಗಿನ ಒಡನಾಟ, ಹೋರಾಟ, ಜಾನಪದ, ಅನುವಾದ, ಸಂಗೀತ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಧಾರವಾಡ ಹಿರಿಮೆಯನ್ನು ನೆನೆದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ರಮಾಕಾಂತ ಜೋಶಿ ಪರಿಷತ್ತಿನ ಧ್ವಜ ಹಸ್ತಾಂತರಿಸಿದರು. ಮಾಜಿ ಸಂಸದ ಐ.ಜಿ. ಸನದಿ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ‌ ಸ್ವಾಗತಿಸಿದರು. ಬಿ.ಎ.‌ ಪಾಟೀಲ, ವಿಮಲ್ ತಾಳಿಕೋಟಿ, ಆರ್.ಟಿ. ತವನಪ್ಪ, ಚನ್ನಬಸಪ್ಪ ಧಾರವಾಡಶೆಟ್ರು‌, ಕಸಾಪದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು ವೇದಿಕೆ ಮೇಲಿದ್ದರು.

3 ಪುಸ್ತಕ ಬಿಡುಗಡೆ: ಡಾ. ಆರ್‌.ಎ. ಹಳಗುಂಡಿಗಿ ಅವರ ‘ಭಾವಬಿಂದು’ ಕೃತಿಯನ್ನು ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ಪದ್ಮಜಾ ಉಮರ್ಜಿ ಅವರ ‘ಭಾವತಂತು‘ ಪುಸ್ತಕವನ್ನು ಉತ್ತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಹಾಗೂ ಮಹಮ್ಮದ್ ರಫೀಕ್ ನದಾಫ ಅವರ ಬಡಗಣದ ಕುಂದಗೋಳವಾಲ’ ಕೃತಿಯನ್ನು ಸಿದ್ಧಾರೂಢ ಮಠ ಟ್ರಸ್ಟ್ ಅಧ್ಯಕ್ಷ ಡಿ.ಬಿ. ಜವಳಿ ಬಿಡುಗಡೆ ಮಾಡಿದರು.

‘ನಡೆ–ನುಡಿಯಲ್ಲಿ ಕ್ರಾಂತಿಯಾಗಲಿ’

‘ಕನ್ನಡದ ವಿಕಾಸಕ್ಕೆ ನಮ್ಮ ನಡೆ–ನುಡಿಯಲ್ಲಿ ಕ್ರಾಂತಿಯಾಗಬೇಕಿದೆ. ಕನ್ನಡದ ಅಭಿಮಾನ ಇದ್ದರೆ ಸಾಲದು. ಪ್ರೀತಿ–ಕಾಳಜಿ– ಗೌರವ ಇದ್ದಾಗ ಕನ್ನಡತನದ ರಕ್ಷಣೆಗೆ ಕಾಯ್ದೆಯ ಅಗತ್ಯವಿರುವುದಿಲ್ಲ’ ಎಂದು ಆಶಯ ನುಡಿಗಳನ್ನಾಡಿದ ಸಾಹಿತಿ ಶ್ಯಾಮಸುಂದರ ಬಿದರಕುಂದಿ ಅಭಿಪ್ರಾಯಪಟ್ಟರು.

‘ಇಂಗ್ಲಿಷ್ ಮೋಹದಿಂದ ಕನ್ನಡ ಕಳೆಗುಂದುತ್ತಿದೆ. ನಾವು ನಾವಾಗಿರಬೇಕಾದರೆ ಕನ್ನಡತನ ಅಳವಡಿಸಿಕೊಳ್ಳುವ ಧೈರ್ಯ ತೋರಬೇಕು. ಸಮ್ಮೇಳನ‌ದಲ್ಲಿ ಪ್ರಜ್ಞಾಪೂರ್ವಕವಾದ ನಿರ್ಣಯಗಳನ್ನು ಕೈಗೊಂಡು, ಅವುಗಳನ್ನು ಜಾರಿಗೆ ತರುವ ಕೆಲಸವಾಗಬೇಕು’ ಎಂದು ಹೇಳಿದರು.

ಅದ್ಧೂರಿ ಮೆರವಣಿಗೆ

ಸಮ್ಮೇಳನದ ಮೆರವಣಿಗೆ ಹಾಗೂ ಜಾಗೃತಿ ನಡಿಗೆಗೆ ಶಾಸಕ ಜಗದೀಶ ಶೆಟ್ಟರ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಪ್ರವಾಸಿ ಮಂದಿರದಲ್ಲಿ ಚಾಲನೆ ನೀಡಿದರು. ಡೊಳ್ಳು, ಜಗ್ಗಲಗಿ, ವಾದ್ಯ ಮೇಳ, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಕನ್ನಡಾಭಿಮಾನಿಗಳು ಕನ್ನಡ ಬಾವುಟ ಹಿಡಿದು ಹೆಜ್ಜೆ ಹಾಕಿದರು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು. ಮಹಾನಗರ ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಮೀನಾಕ್ಷಿ ವಂಟಮುರಿ ಹಾಗೂ ಪರಿಷತ್ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT