ಹುಬ್ಬಳ್ಳಿ: ಸೂರ್ಯ ಮುಳುಗುತ್ತಿದ್ದಂತೆ ಮೇಣದ ಬತ್ತಿ, ಚಿಮಣಿ ಬೆಳಕೆ ನಮಗೆ ಆಸರೆ. ಮಕ್ಕಳು ರಾತ್ರಿ ಬೀದಿ ದೀಪದಲ್ಲಿಯೇ ಓದುತ್ತಾರೆ. ವಿದ್ಯುತ್ ಸಂಪರ್ಕ ಪಡೆದುಕೊಂಡರೆ ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ. ಇದ್ದುದ್ದರಲ್ಲಿಯೇ ನಿತ್ಯ ಜೀವನದ ಬಂಡಿ ಸಾಗಿಸುತ್ತಿದ್ದೇವೆ...
ಹೀಗೆ ತಮ್ಮ ಅಳಲು ತೋಡಿಕೊಂಡವರು ಸ್ಮಾರ್ಟ್ ಸಿಟಿ ಹುಬ್ಬಳ್ಳಿಯ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯ ಜೋಪಡಿ ಮನೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು.
ಸ್ಮಾರ್ಟ್ ಸಿಟಿ ಹುಬ್ಬಳ್ಳಿಯ ಯಾವುದೇ ಬಡಾವಣೆಗಳಲ್ಲಿ ಕಣ್ಣು ಹಾಯಿಸಿದಲ್ಲಿ ಸಿಮೆಂಟ್ ಮನೆಗಳೇ ಕಂಡುಬರುತ್ತವೆ. ಆದರೆ, ಇದರ ಮಧ್ಯದಲ್ಲಿರುವ ಈ ಬಡಾವಣೆಯಲ್ಲಿ ಯಾವುದೇ ಇಟ್ಟಂಗಿ, ಸಿಮೆಂಟ್ ಬಳಸದೆ ನಿರ್ಮಾಣಗೊಂಡ ಮನೆಗಳಿಗೆ ಹಳೇ ಸೀರೆ, ಶರ್ಟ್, ಕೌದಿಗಳೇ ನೆರಳಾಗಿವೆ.
ಈ ಬಡಾವಣೆಯಲ್ಲಿ ಕೂಲಿ ಕೆಲಸಗಾರರು, ಕ್ಷೌರಿಕರು, ಆಟೊಚಾಲಕರು, ಅಲೆಮಾರಿ ಕುಟುಂಬದವರು, ಗೊಂಬೆ ಕುಣಿತ ಕಲಾವಿದರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ. ಊರು ಊರಿಗೆ ಅಲೆದಾಡಿ ಸ್ಟೇಷನರಿ ಸಾಮಗ್ರಿ ಮಾರಾಟ ಮಾಡಿ ಜೀವನ ನಡೆಸುತ್ತಿರುವವರು ಈ ಜೋಪಡಿ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಕೆಲವೊಂದಿಷ್ಟು ಜನ ಮನೆ ನಿರ್ಮಿಸಿಕೊಂಡು ನಳ ಸಂಪರ್ಕ ಪಡೆದುಕೊಂಡಿದ್ದರೆ, ಇನ್ನುಳಿದವರು ಮನೆಗೆ ನೀರಿನ ವ್ಯವಸ್ಥೆ ಇಲ್ಲದಿದ್ದರೂ, ಬಡಾವಣೆಯ ಅಲ್ಲಲ್ಲಿ ಇರುವ ನಳದ ನೀರೇ ಇವರಿಗೆ ಆಸರೆ. ಅಷ್ಟೇ ಅಲ್ಲದೆ ಇಲ್ಲಿ ವಾಸಿಸುವವರು ಬೇರೆ ಬೇರೆ ಜಿಲ್ಲೆಗಳಿಂದ ಕೆಲಸ ಅರಸಿಕೊಂಡು ಬಂದು ನೆಲೆ ಕಟ್ಟಿಕೊಂಡವರು. ಕೊಪ್ಪಳ, ರಾಯಚೂರು, ಬೀದರ್ ಹೀಗೆ ಬೇರೆ ಬೇರೆ ಜಿಲ್ಲೆಗಳ ಜನರಿಗೆ ಆಶ್ರಯ ನೀಡಿರುವ ಮಹಾಲಕ್ಷ್ಮಿ ಬಡಾವಣೆಯೇ ಆಶ್ರಯ ತಾಣವಾಗಿದೆ.
‘ನಾವು ಸುಮಾರು 15 ವರ್ಷಗಳಿಂದ ಇಲ್ಲಿದ್ದೇವೆ. ಮೊದಲೆಲ್ಲ ರಸ್ತೆ ಹಾಳಾಗಿತ್ತು. ಮಳೆ ಬಂದರೆ ಸಾಕು ರಸ್ತೆಯಲ್ಲಾ ಕೆಸರಿನಿಂದ ಕೂಡಿರುತ್ತಿತ್ತು. ನಿತ್ಯ ಜೀವನ ನಡೆಸುವುದೇ ಕಷ್ಟವಾಗುತ್ತಿತ್ತು. ಯಾಕೆಂದರೆ ಜೋಪಡಿ ಮನೆಗಳಾಗಿದ್ದರಿಂದ ಮನೆಗಳಿಗೆಲ್ಲ ನೀರು ನುಗ್ಗಿ ಸಮಸ್ಯೆ ಆಗುತ್ತಿತ್ತು. ಇವಾಗ ರಸ್ತೆ ಸರಿಪಡಿಸಿದ್ದರಿಂದ ಮಳೆಗಾಲದಲ್ಲಿ ನೆಮ್ಮದಿಯಿಂದ ನಿದ್ದಿ ಮಾಡುವಂತಾಗಿದೆ’ ಎಂದು ಹೇಳುತ್ತಾರೆ ಕೊಪ್ಪಳದ ರತ್ನಾ ಪರ್ವತಮಲ್ಲಯ್ಯ.
‘ದಿನ ಬಳಕೆ ಮತ್ತು ಕುಡಿಯಲು 24 ಗಂಟೆಯೂ ನೀರು ಬರುತ್ತದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದ್ದರಿಂದ ಕತ್ತಲಲ್ಲಿ ದಿನದೂಡಬೇಕು. ವಿದ್ಯುತ್ ಸಂಪರ್ಕ ಪಡೆದುಕೊಂಡರೆ ಅದಕ್ಕೆ ಮತ್ತೇ ಹೆಚ್ಚುವರಿ ಶುಲ್ಕ ಭರಿಸಬೇಕು. ಊರು ಊರು ಅಲೆದಾಡಿದರೂ ಉಪಜೀವನ ನಡೆಸಲು ಕಷ್ಟ ಆಗುತ್ತದೆ. ಅಂತಹದರಲ್ಲಿ ಹೆಚ್ಚುವರಿ ದುಡ್ಡು ಭರಿಸಲು ಕಷ್ಟವಾಗುವುದರಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿಲ್ಲ. ಇಲ್ಲಿ ವಾಸಿಸುವವರೆಲ್ಲರೂ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದಾರೆ’ ಎಂದು ಅವರು ಹೇಳಿದರು.
ಮತ ಚಲಾಯಿಸಲು ಊರಿಗೆ ಹೋಗಲ್ವಾ ಎಂದು ರಾಯಚೂರಿನ ಸಾವಿತ್ರಿಯವರನ್ನು ವಿಚಾರಿಸಿದರೆ, ಚುನಾವಣೆ ಇದ್ದಾಗ ಊರಿಗೆ ಹೋಗಿ ಬರ್ತೆವಿ ರೀ. ಊರಾಗ ದುಡಕೊಂಡ ತಿನ್ನಬೇಕಂದರ ಹೊಲ ಇಲ್ಲರೀ, ಮಂದಿ ಹೊಲಕ್ಕಾದರ ಹೋಗಿ ದುಡಕೊಂಡು ಬರೋಣಂದರ ನಮ್ಮ ಕಡೆ ಮಳಿನೇ ಕಡಿಮೆ ಆಗುತ್ತದೆ. ಅದಕ್ಕಾಗಿ ಉಪಜೀವನ ನಡೆಸಿ ಹೊಟ್ಟಿ ತುಂಬಿಸಿಕೊಳ್ಳಲು ಹುಬ್ಬಳ್ಳಿಗೆ ಬಂದೇವಿ ರೀ, ಅಷ್ಟೋ ಇಷ್ಟೋ ದುಡ್ಡಲ್ಲಿ ಜೀವನಾ ನಡಸಾಕತ್ತೇವಿ. ಸರ್ಕಾರದವರು ನಮಗ ಮನೆ ಸೌಲಭ್ಯ ಕಲ್ಪಿಸಿಕೊಟ್ಟರೆ ಬಾಳ ಅನುಕೂಲ ಆಗತೈತ್ರಿ ಎನ್ನುತ್ತಾರೆ.
ಈ ಬಡಾವಣೆಯಲ್ಲಿ 50 ಮನೆಗಳಿದ್ದು ಮೂರು ತಲೆಮಾರುಗಳಿಂದಲೂ ಇಲ್ಲಿಯೇ ವಾಸಿಸುತ್ತಿದ್ದೇವೆ. ಮೊದಲು ಭಿಕ್ಷಾಟನೆ ಮಾಡುತ್ತಿದ್ದೇವು ನಂತರ ದಿನಗಳಲ್ಲಿ ಸ್ಟೇಷನರಿ ವ್ಯಾಪಾರ ಕಲಾವಿದರ ತಂಡ ಕಟ್ಟಿಕೊಂಡು ಊರು ಊರಿಗೆ ತೆರಳಿ ಕಾರ್ಯಕ್ರಮ ಕೊಡುತ್ತಿದ್ದೇವು. ಮಕ್ಕಳು ಪದವಿ ಡಿಪ್ಲೊಮಾ ಎಂಜಿನಿಯರ್ ನರ್ಸ್ ಶಿಕ್ಷಣ ಪಡೆದುಕೊಂಡಿದ್ದಾರೆ. ಕೆಲವರು ಉದ್ಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಅಲೆಮಾರಿ ಕಲಾವಿದರ ಸಂಘದ ಅಧ್ಯಕ್ಷ ಹಿರೇಹನುಮಂತಪ್ಪ ಹುಳ್ಳಿ ತಿಳಿಸಿದರು.
ಇದು ಅಕ್ರಮ ಸಕ್ರಮ ಜಾಗವಾಗಿದ್ದು ₹100 ಬಾಂಡ್ ಮೇಲೆ ಜೋಪಡಿ ಕಟ್ಟಿಕೊಂಡಿದ್ದೇವೆ. ಆಧಾರ್ ಕಾರ್ಡ್ ವೋಟಿಂಗ್ ಕಾರ್ಡ್ ಸೇರಿದಂತೆ ಎಲ್ಲವೂ ಇವೆ. ಮನೆ ಕಟ್ಟಿಸಿಕೊಂಡವರು ನಳ ಮತ್ತು ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಉಳಿದವರು ಅಲ್ಲಲ್ಲಿ ಇರುವ ನಳದ ನೀರನ್ನು ಬಳಸುತ್ತಿದ್ದಾರೆ. ಬಹುತೇಕರು ಜೋಪಡಿ ಕಟ್ಟಿಕೊಂಡೇ ಬದುಕುತ್ತಿದ್ದಾರೆ. ಬೆಳಕಿಗೆ ಬೀದಿ ದೀಪವೇ ಆಸರೆ. ಆರ್ಥಿಕವಾಗಿ ಸ್ವಲ್ಪ ಸಬಲರಾದವರು ಸೋಲಾರ್ ಬಳಸುತ್ತಿದ್ದಾರೆ. ಮಕ್ಕಳು ಅಕ್ಕಪಕ್ಕದ ಮನೆಗೆ ಅಥವಾ ಬೀದಿದೀಪದ ಕೆಳಗೆ ಓದುತ್ತಾರೆ ಎಂದು ಅವರು ತಿಳಿಸಿದರು.
ಮನೆ ನಿರ್ಮಾಣವಾಗುತ್ತಿದ್ದು ಜೋಪಡಿಯಲ್ಲಿ ವಾಸಿಸುವ 35 ಮನೆಗಳ ಪಟ್ಟಿ ನೀಡಿದ್ದೇವೆ. ಪ್ರಲ್ಹಾದ ಜೋಶಿ ಜಗದೀಶ ಶೆಟ್ಟರ್ ಅವರು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಅಲ್ಲಿ ಮನೆ ನಿರ್ಮಾಣವಾದರೆ ನಮಗೆ ನೆಮ್ಮದಿಯ ಸೂರು ಸಿಗಲಿದೆ.-ಹಿರೇಹನುಮಂತಪ್ಪ ಹುಳ್ಳಿ ,ಅಧ್ಯಕ್ಷ ಅಲೆಮಾರಿ ಕಲಾವಿದರ ಸಂಘ
ಗೋಪನಕೊಪ್ಪದಲ್ಲಿರುವ ಮಹಾಲಕ್ಷ್ಮಿ ಬಡಾವಣೆ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ-ಮಹೇಶ ಟೆಂಗಿನಕಾಯಿ, ಹು–ಧಾ ಸೆಂಟ್ರಲ್ ಕ್ಷೇತ್ರದ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.