ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಚಿಕಿತ್ಸೆ ನಿರೀಕ್ಷೆಯಲ್ಲಿ ಕ್ಯಾನ್ಸರ್‌ ಪೀಡಿತರು

ಜಿಲ್ಲೆಯಲ್ಲಿ ಏರುಗತಿಯಲ್ಲಿ ಕ್ಯಾನ್ಸರ್‌ ಪ್ರಕರಣ; ತ್ವರಿತ ಸೇವೆ ಸಿಗಲೆಂಬ ಒತ್ತಾಯ
Published 25 ಡಿಸೆಂಬರ್ 2023, 6:26 IST
Last Updated 25 ಡಿಸೆಂಬರ್ 2023, 6:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆ ದಾಖಲಾಗುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ವರ್ಷಕ್ಕೆ 2,650 ರೋಗಿಗಳು ದಾಖಲಾದರೆ, ಇಲ್ಲಿನ ಪ್ರಮುಖ ಮೂರು ಖಾಸಗಿ ಆಸ್ಪತ್ರೆಗಳಲ್ಲೂ ಸರಾಸರಿ 2,000ದಿಂದ 2,500 ರೋಗಿಗಳು ದಾಖಲಾಗುತ್ತಾರೆ.

ಕ್ಯಾನ್ಸರ್‌ ಪ್ರಕರಣ ಏರುಗತಿಯಲ್ಲಿದೆ ಎಂಬುದಕ್ಕೆ ಕ್ಯಾನ್ಸರ್‌ ತಜ್ಞ ವೈದ್ಯರ ಹೇಳಿಕೆಗಳ ಹೊರತಾಗಿ ನಿಖರ ಅಂಕಿ– ಅಂಶಗಳು ಸಿಗುವುದು ಕಷ್ಟ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಪಿಸಿಬಿಆರ್‌ ಸಮೀಕ್ಷೆ (2021) ಪ್ರಕಾರ, ಧಾರವಾಡ ಜಿಲ್ಲೆಯಲ್ಲಿ 2,575 (ಪುರುಷರು–1,109, ಸ್ತ್ರಿಯರು–1,476) ಪ್ರಕರಣಗಳು ದಾಖಲಾಗಿವೆ.

ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್‌ನಿಂದ ಬಳಲುವವರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ 1977ರಲ್ಲಿ ನವನಗರ ಕ್ಯಾನ್ಸರ್ ಆಸ್ಪತ್ರೆಯನ್ನು ಡಾ.ಆರ್‌.ಬಿ.ಪಾಟೀಲ ಆರಂಭಿಸಿದರು.ಕಿಮ್ಸ್‌ನಲ್ಲೂ 30 ವರ್ಷಗಳಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ನಂತರದ ವರ್ಷಗಳಲ್ಲಿ ಖಾಸಗಿ ಆಸ್ಪತ್ರೆಗಳೂ ಪೂರ್ಣಪ್ರಮಾಣದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ನೀಡತೊಡಗಿದವು.

ಉತ್ತರ ಕರ್ನಾಟಕದಲ್ಲೇ ಹೆಚ್ಚು ರೋಗಿಗಳು ಬಂದು ಹೋಗುವ ಕಿಮ್ಸ್‌ನಲ್ಲಿ ಕ್ಯಾನ್ಸರ್‌ ರೋಗಿಗಳಿಗೆ 60 ಹಾಸಿಗೆಯುಳ್ಳ ಕೇಂದ್ರವಿದೆ. 30 ವರ್ಷಗಳಿಂದ ಪ್ರತಿ ವರ್ಷ ಸರಾಸರಿ 2,000–2,500 ಮಂದಿ ಕ್ಯಾನ್ಸರ್‌ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ.  ಹುಬ್ಬಳ್ಳಿ –ಧಾರವಾಡ ಅಲ್ಲದೆ ಕೊಪ್ಪಳ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಬಳ್ಳಾರಿ–ವಿಜಯನಗರ ಜಿಲ್ಲೆಗಳಿಂದ ರೋಗಿಗಳೂ ಸಹ ಇಲ್ಲಿ ಬರುತ್ತಾರೆ.

ಕಿಮ್ಸ್‌ನಲ್ಲಿ ನಿತ್ಯ 60 ಕ್ಯಾನ್ಸರ್‌ ರೋಗಿಗಳು ರೆಡಿಯೊಥೆರಪಿ ಮತ್ತು ಸರಾಸರಿ 30 ರೋಗಿಗಳು ಕಿಮೊ ಚಿಕಿತ್ಸೆ ಪಡೆಯುತ್ತಾರೆ. ಜಿಲ್ಲೆಯಲ್ಲೇ ಹೆಚ್ಚು ಸಾಮರ್ಥ್ಯವುಳ್ಳ ರೆಡಿಯೇಷನ್‌ ಯಂತ್ರವಿರುವುದು ಕಿಮ್ಸ್‌ಗೆ ಹಿರಿಮೆ ತಂದಿದೆ. ಆದರೆ, ಪೆಟ್‌ ಸ್ಕ್ಯಾನ್‌ ಮತ್ತು ಹಾಗೂ ಮಾಲೆಕ್ಯುಲರ್‌ ಬಯಾಲಜಿ ಪ್ರಯೋಗಾಲಯ ವ್ಯವಸ್ಥೆ ಇಲ್ಲದಿರುವುದು ಚಿಕಿತ್ಸೆಗೆ ಹಿನ್ನೆಡೆಯಾಗಿದೆ.‌

‘ಬೇರೆ ಬೇರೆ ಜಿಲ್ಲೆಗಳಿಂದ ರೋಗಿಗಳು ಕ್ಯಾನ್ಸರ್‌ ಉಲ್ಬಣದ ಹಂತದಲ್ಲಿ ಇಲ್ಲಿಗೆ ಬಂದು ದಾಖಲಾಗುತ್ತಾರೆ. ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಲು ಬಯಾಪ್ಸಿಗೆ ಒಳಪಡುವ ಅಗತ್ಯವಿದ್ದು, ವರದಿ ಕೈಸೇರಲು 10 ರಿಂದ 15 ದಿನ ಬೇಕು. ವರದಿ ಪರಿಶೀಲಿಸಿದ ನಂತರ ರೋಗಿಗೆ ಅಗತ್ಯ ಕಿಮೊಥೆರಪಿ, ಸರ್ಜರಿ, ರೆಡಿಯೋಥೆರಪಿ ನೀಡಲಾಗುವುದು. ಅಷ್ಟು ಹೊತ್ತಿಗೆ ರೋಗ ಇನ್ನಷ್ಟು ಉಲ್ಬಣಗೊಳ್ಳುತ್ತದೆ’ ಎಂದು ಕಿಮ್ಸ್‌ನ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಗಿರಿಯಪ್ಪಗೌಡರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾನ್ಸರ್‌ ಹರಡುವಿಕೆ ತ್ವರಿತವಾಗಿ ಗುರುತಿಸಲು ಪೆಟ್‌ ಸ್ಕ್ಯಾನ್‌ ಅಗತ್ಯವಿದೆ. ಆದರೆ, ಅದು ಕಿಮ್ಸ್‌ನಲ್ಲಿ ಲಭ್ಯವಿಲ್ಲ. ಹೊರಗಡೆ ಸ್ಕ್ಯಾನ್‌ ಮಾಡಿಸಲು ₹25 ಸಾವಿರ ತಗುಲುತ್ತದ. ಇಲ್ಲಿ ಬರುವ ರೋಗಿಗಳೆಲ್ಲ ಬಡವರು. ಆರ್ಥಿಕ ಸಮಸ್ಯೆಯಿಂದ ಅವರಿಗೆ ಸ್ಕ್ಯಾನ್ ಮಾಡಿಸಲು ಆಗುವುದಿಲ್ಲ. ಕಿಮ್ಸ್‌ನಲ್ಲೇ ಪೆಟ್‌ ಸ್ಕ್ಯಾನ್‌ ಅಳವಡಿಸಿದಲ್ಲಿ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.

‘ಕ್ಯಾನ್ಸರ್‌ ರೆಜಿಸ್ಟ್ರಿ ಡಿಪಾರ್ಟ್‌ಮೆಂಟ್‌ ಮಾಡಿದರೆ ರೋಗಿಗಳ ನಿಖರ ದಾಖಲೆ ಸಾಧ್ಯ. ಮೂಳೆ, ರಕ್ತ ಕ್ಯಾನ್ಸರ್‌ಗೆ ಚಿಕಿತ್ಸೆ ವಿಭಾಗ ಆರಂಭಿಸಬೇಕಿದೆ. ಮಕ್ಕಳ ಕ್ಯಾನ್ಸರ್‌ ವಿಭಾಗದ ಅಗತ್ಯವಿದೆ. ಪೆಟ್‌ ಸ್ಕ್ಯಾನ್‌ ಹಾಗೂ ಮಾಲೆಕ್ಯುಲರ್‌ ಬಯಾಲಜಿ ಪ್ರಯೋಗಾಲಯ ವಿಭಾಗ ಮತ್ತು ಅಂಕೊ ಪೆಥಾಲಜಿ ವಿಭಾಗ ಆರಂಭಿಸುವುದರಿಂದ ಕ್ಯಾನ್ಸರ್‌ ರೋಗಿಗಳಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಸಿಗುತ್ತದೆ’ ಎಂದರು.

ಪ್ರಾದೇಶಿಕ ಕ್ಯಾನ್ಸರ್‌ಗೆ ಬೇಡಿಕೆ:

‘ಕಿಮ್ಸ್‌ನಲ್ಲಿ ಎಲ್ಲ ಬಗೆಯ ಕ್ಯಾನ್ಸರ್‌ ರೋಗಿಗಳು ದಾಖಲಾಗುತ್ತಿದ್ದು, ರಕ್ತ ಕ್ಯಾನ್ಸರ್‌, ಎಲುಬಿನ ಕ್ಯಾನ್ಸರ್‌, ಮಕ್ಕಳಿಗೆ ಕ್ಯಾನ್ಸರ್‌ ಚಿಕಿತ್ಸೆ ಸೌಲಭ್ಯವಿಲ್ಲ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಇರುವಂತೆ ಒಂದೇ ಸೂರಿನಡಿ ಎಲ್ಲ ಬಗೆಯ ಕ್ಯಾನ್ಸರ್‌ ರೋಗಗಳಿಗೆ ಚಿಕಿತ್ಸೆ ಲಭ್ಯವಾಗುವಂತಿದ್ದರೆ ಉತ್ತರ ಕರ್ನಾಟಕದ ರೋಗಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಅದಕ್ಕಾಗಿ ಕಿಮ್ಸ್‌ನಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ (ಆರ್‌ಸಿಸಿ) ಆರಂಭಿಸುವ ಅಗತ್ಯವಿದೆ’ ಎಂದು ಕ್ಯಾನ್ಸರ್‌ ರೋಗಿಗಳ ಸಂಬಂಧಿಕರು ಹೇಳುತ್ತಾರೆ.

ಕಿಮ್ಸ್‌ನಲ್ಲಿ ಪ್ರಾದೇಶಿಕ ಕ್ಯಾನ್ಸರ್‌ ಕೇಂದ್ರ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ಡಾ.ಗಿರಿಯಪ್ಪ ಗೌಡರ್ ಹಾಗೂ ಅಂಕೊ ತಂಡ ಇತ್ತೀಚೆಗೆ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಮನವಿ ಪತ್ರ ನೀಡಿದೆ. 

ಕಿಮ್ಸ್‌ನ ಹೊರತಾಗಿ ಹುಬ್ಬಳ್ಳಿಯಲ್ಲಿ ಕೆಸಿಟಿಆರ್‌ಐ ನವನಗರ (ಚಾರಿಟಿ ಆಸ್ಪತ್ರೆ), ಎಚ್‌ಸಿಜಿ ಎನ್‌ಎಂಆರ್‌, ರೇಡಾನ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ಇವುಗಳಲ್ಲಿ ಎಚ್‌ಸಿಜಿ ಎನ್‌ಎಂಆರ್‌ ಆಸ್ಪತ್ರೆಯಲ್ಲಿ ಪೆಟ್‌ ಸ್ಕ್ಯಾನ್‌, ಕಿಮೊಥೆರಪಿ, ಸರ್ಜರಿ, ರೆಡಿಯೋಥೆರಪಿ ಎಲ್ಲವೂ ಒಂದೇ ಸೂರಿನಡಿ ಸಿಗುತ್ತದೆ. ಇಎಸ್‌ಐ, ಆಯುಷ್ಮಾನ್‌ ಆರೋಗ್ಯ ಯೋಜನೆಗಳ ಹೊರತಾಗಿ ಉಳಿದಂತೆ ಪೂರ್ತಿ ಹಣ ಭರಿಸಿ ಚಿಕಿತ್ಸೆ ಪಡೆಯಬೇಕು.

ಕಿಮ್ಸ್‌ ಆಸ್ಪತ್ರೆಯ ಕ್ಯಾನ್ಸರ್‌ ಚಿಕಿತ್ಸಾ ವಿಭಾಗದ ಒಳರೋಗಿಗಳ ವಾರ್ಡ್‌
ಕಿಮ್ಸ್‌ ಆಸ್ಪತ್ರೆಯ ಕ್ಯಾನ್ಸರ್‌ ಚಿಕಿತ್ಸಾ ವಿಭಾಗದ ಒಳರೋಗಿಗಳ ವಾರ್ಡ್‌
ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ರಿಷೆಪ್ನನ್‌ ಕೌಂಟರ್‌
ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ರಿಷೆಪ್ನನ್‌ ಕೌಂಟರ್‌
ಡಾ.ಗಿರಿಯಪ್ಪ ಗೌಡರ್‌
ಡಾ.ಗಿರಿಯಪ್ಪ ಗೌಡರ್‌
ಸಂತೋಷ ಲಾಡ್‌ ಜಿಲ್ಲಾ ಉಸ್ತುವಾರಿ ಮಂತ್ರಿ
ಸಂತೋಷ ಲಾಡ್‌ ಜಿಲ್ಲಾ ಉಸ್ತುವಾರಿ ಮಂತ್ರಿ
ಡಾ.ಬಿ.ಆರ್‌.ಪಾಟೀಲ
ಡಾ.ಬಿ.ಆರ್‌.ಪಾಟೀಲ
ನವನಗರದ ಕೆಸಿಟಿಆರ್‌ಐ ಕಾಂಪೌಂಡ್‌ನಲ್ಲಿ ಮಜೇಥಿಯಾ ಫೌಂಡೇಷನ್‌ ಸ್ಥಾಪಿಸಿರುವ ಹಾಸ್ಪೈಸ್‌
ನವನಗರದ ಕೆಸಿಟಿಆರ್‌ಐ ಕಾಂಪೌಂಡ್‌ನಲ್ಲಿ ಮಜೇಥಿಯಾ ಫೌಂಡೇಷನ್‌ ಸ್ಥಾಪಿಸಿರುವ ಹಾಸ್ಪೈಸ್‌
ಕಿಮ್ಸ್‌ನಲ್ಲಿ ಪೆಟ್‌ ಸ್ಕ್ಯಾನ್‌ ಹೊರತು ಪಡಿಸಿದರೆ ಉಳಿದೆಲ್ಲ ಸೌಲಭ್ಯವಿದೆ. ಪೆಟ್‌ ಸ್ಕ್ಯಾನ್‌ ಸೌಲಭ್ಯ ಅಳವಡಿಸಿದಲ್ಲಿ ರೋಗಿಗಳಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯ ಸಿಕ್ಕಂತಾಗಲಿದೆ
ಡಾ.ಗಿರಿಯಪ್ಪ ಗೌಡ ಮುಖ್ಯಸ್ಥ ಕ್ಯಾನ್ಸರ್‌ ವಿಭಾಗ ಕಿಮ್ಸ್‌
ಕಿಮ್ಸ್‌ಗೆ ಬಂದು ಐದಾರು ದಿನಗಳೇ ಆದ್ವು. ಆದರೆ ಕ್ಯಾನ್ಸರ್‌ ವಿಭಾಗಕ್ಕೆ ಬರಬೇಕೆಂದರೆ ಹೇಗೆ ಬರಬೇಕು ಅನ್ನೋದೆ ತಿಳಿವಲ್ದು. ಒಂದೇ ಒಂದು ಬೋರ್ಡ್‌ ಇಲ್ಲ.
ತಿರುಗಿ ಬರೋದ್ರೊಳಗೆ ಕಾಲು ಬಿದ್ದೋಗ್ತವೆ ಸಂಗವ್ವ ರೋಗಿ ಸಂಬಂಧಿ
ಜಿಲ್ಲೆಯಲ್ಲಿ ಕ್ಯಾನ್ಸರ್‌ ರೋಗ ಪ್ರಕರಣ ಹೆಚ್ಚುತ್ತಿರುವುದು ಗಮನಕ್ಕಿಲ್ಲ. ಹುಬ್ಬಳ್ಳಿಯಲ್ಲಿ ಸುಸಜ್ಜಿತ ಕ್ಯಾನ್ಸರ್‌ ಆಸ್ಪತ್ರೆ ತೆರೆಯಲು ಪ್ರಸ್ತಾವವನ್ನು ಸರ್ಕಾರದ ಗಮನಕ್ಕೆ ತಂದು ಆ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡುವೆ
ಸಂತೋಷ ಲಾಡ್‌ ಜಿಲ್ಲಾ ಉಸ್ತುವಾರಿ ಸಚಿವ
ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಗೆ ‍‍ಒಳಪಡುವ ರೋಗಿಗಳಿಂದ ಶುಲ್ಕ ಪಡೆಯದೆ ಶಸ್ತ್ರಚಿಕಿತ್ಸೆ ನಡೆಸುವ ರೂಢಿ ಮುಂದುವರಿಸಿರುವೆ
ಡಾ.ಬಿ.ಆರ್‌. ಪಾಟೀಲ ಆಂಕೊ ಸರ್ಜನ್‌ ಕೆಸಿಟಿಆರ್‌ಐ ನವನಗರ

ಕ್ಯಾನ್ಸರ್‌ ಬರಲು ಕಾರಣ ಸ್ತನ ಕ್ಯಾನ್ಸರ್‌ ಗಂಟಲು–ಬಾಯಿ ಕ್ಯಾನ್ಸರ್‌ ಗರ್ಭಾಶಯ ಮತ್ತು ಗರ್ಭಕಂಠದ ಕ್ಯಾನ್ಸರ್‌ ಕರುಳಿನ ಕ್ಯಾನ್ಸರ್‌ ಶ್ವಾಸಕೋಶದ ಕ್ಯಾನ್ಸರ್‌ ಮೂಳೆ ಕ್ಯಾನ್ಸರ್‌ ರಕ್ತದ ಕ್ಯಾನ್ಸರ್‌ ಗುದ ಥೈರಾಯ್ಡ್‌ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ ಎಂಬ ಅಂಶ ಜಿಲ್ಲೆಯ ವಿವಿಧ ಕ್ಯಾನ್ಸರ್‌ ಆಸ್ಪತ್ರೆಗಳ ವರದಿಗಳು ದೃಢಪಡಿಸಿವೆ. ತಜ್ಞ ವೈದ್ಯರ ಪ್ರಕಾರ ಇಂಥದ್ದೆ ಕಾರಣಕ್ಕೆ ಕ್ಯಾನ್ಸರ್‌ ಬರಲಿದೆ ಎಂದು ಹೇಳಲಾಗದು. ಇಂದಿನ ಜೀವನ ಶೈಲಿ ಆಹಾರ ಶೈಲಿ ಆನುವಂಶಿಕ ಕಾರಣ ಸ್ಥೂಲಕಾಯ ಒತ್ತಡದ ಜೀವನ ವ್ಯಾಯಾಮವಿಲ್ಲದ ಜೀವನ ಪರಿಸರ ಮಾಲಿನ್ಯ ಕಲಬೆರಕೆ ಆಹಾರ ಕ್ಯಾನ್ಸರ್‌ ಕಾರಕ ಪದಾರ್ಥಗಳು ತಿನ್ನುವ ಆಹಾರದಲ್ಲಿ ಸೇರಿದಾಗ ಎಲ್ಲವೂ ಕ್ಯಾನ್ಸರ್‌ ಪ್ರಕರಣ ಹೆಚ್ಚಲು ಕಾರಣವಾಗುತ್ತಿದೆ. ಯಾವುದೇ ವಯಸ್ಸಲ್ಲಿ ಯಾವುದೇ ಅಂಗಕ್ಕೂ ಕ್ಯಾನ್ಸರ್‌ ಬಾಧಿಸಬಹುದು. ತಂಬಾಕು ಸಿಗರೇಟ್‌ ಮದ್ಯ ಸೇವನೆಯಿಂದ ಬಾಯಿ ಗಂಟಲು ಶ್ವಾಸಕೋಶದ ಕ್ಯಾನ್ಸರ ಉಂಟಾಗುವ ಸಂಭವ ಹೆಚ್ಚಿದೆ. ಬಾಯಿ ಹುಣ್ಣು ಬಾಯಿ ತೆರೆಯಲು ಕಷ್ಟವಾಗುತ್ತಿದ್ದರೆ ಇವು ಬಾಯಿ ಕ್ಯಾನ್ಸರ್‌ನ ಲಕ್ಷಣವಾಗಿದೆ.   ಸ್ತನ ಕ್ಯಾನ್ಸರ್‌ ಆನುವಂಶಿಕ ಹಿನ್ನಲೆಯಿಂದ ಶೇ 20ರಷ್ಟು ಮಂದಿಯಲ್ಲಿ ಕಂಡುಬಂದರೆ ಧೂಮಪಾನ ತಡವಾಗಿ ಮದುವೆಯಾಗುವುದು ಮಗುವಿಗೆ ಹಾಲುಣಿಸದಿರುವುದು ಸ್ಥೂಲಕಾಯ ಕೂಡ ಸ್ತನ ಕ್ಯಾನ್ಸರ್‌ಗೆ ಕಾರಣವಾಗಲಿದೆ. ಗರ್ಭಕಂಠದ‌ ಕ್ಯಾನ್ಸರ್‌ಗೆ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕು ಪ್ರಮುಖ ಕಾರಣವಾಗಿದೆ. ‘ಮುಂಜಾಗ್ರತೆ ವಹಿಸಿದಲ್ಲಿ ಕ್ಯಾನ್ಸರ್‌ ರೋಗ ಬಾಧಿಸದಂತೆ ಕಂಡುಕೊಳ್ಳಲು ಸಾಧ್ಯ. ನಿತ್ಯ ವ್ಯಾಯಾಮ ಯೋಗವನ್ನು ಅಳವಡಿಸಿಕೊಳ್ಳುವುದು ತಂಬಾಕು ಸೇವಿಸದಿರುವುದು ಆದಷ್ಟು ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ ಪರಿಸರ ಶುಚಿಯಾಗಿಟ್ಟುಕೊಳ್ಳುವುದು ಪ್ಲಾಸ್ಟಿಕ್‌ ಪಾತ್ರೆಗಳಲ್ಲಿ ಆಹಾರ ಬಿಸಿ ಪಾನೀಯ ಸೇವನೆ ತಪ್ಪಿಸುವುದು ಕಾಲಕಾಲಕ್ಕೆ ತಪಾಸಣೆಗೊಳಪಡುವುದರಿಂದ ಕ್ಯಾನ್ಸರ್‌ ರೋಗದಿಂದ ದೂರವಿರಲು ಸಾಧ್ಯವಿದೆ ಎನ್ನುತ್ತಾರೆ ಡಾ.ಗಿರಿಯಪ್ಪ ಗೌಡರ್.  ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ತಪಾಸಣೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಹೊಂದಲು ಸಾಧ್ಯ’ ಎಂದು ವೈದ್ಯರು ಹೇಳುತ್ತಾರೆ.

ಮಜೇಥಿಯಾ ಫೌಂಡೇಷನ್‌ನಿಂದ ಹಾಸ್ಪೈಸ್‌ ಸೇವೆ ಕ್ಯಾನ್ಸರ್‌ನ ಕೊನೆಯ ಹಂತದಲ್ಲಿ ಯಾತನಾದಾಯಕ ಬದುಕನ್ನು ಸಾಗಿಸುವ ಮನೆಯಲ್ಲಿ ನೋಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುವಂಥ ರೋಗಿಗಳನ್ನು ಉಪಚರಿಸಲೆಂದೇ ಹುಬ್ಬಳ್ಳಿಯ ನವನಗರದ ಕೆಸಿಟಿಆರ್‌ಐ ಆವರಣದಲ್ಲಿ ಹಾಸ್ಪೈಸ್‌ ಸೇವೆ ನೀಡುತ್ತಿದೆ. ಮಜೇಥಿಯಾ ಫೌಂಡೇಷನ್‌ ನಡೆಸುತ್ತಿರುವ ಈ ಹಾಸ್ಪೈಸ್‌ನಲ್ಲಿ ಬಡ ರೋಗಿಗಳಿಗೆ ಉಚಿತ ವಸತಿ ಊಟ ಹಾಗೂ ಉಪಚಾರವಿದೆ. ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 0836–2001316 ಅಥವಾ 9341798093.

ಕ್ಯಾನ್ಸರ್‌ ರೋಗಿಗಳಿಗೆ ಆರೋಗ್ಯ ಭಾಗ್ಯ ಮತ್ತು ವಿಮೆ ಸೌಲಭ್ಯ ‌‌ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಸರ್ಕಾರದಿಂದ ವಿಶೇಷ ಸೌಲಭ್ಯಗಳಿವೆ. ಅವುಗಳಲ್ಲಿ ಆಯುಷ್ಮಾನ್‌ ಆರೋಗ್ಯ ಭಾಗ್ಯದಡಿ ಬಿಪಿಎಲ್‌ ಕಾರ್ಡ್‌ದಾರರಿಗೆ ಸಂಪೂರ್ಣ ಉಚಿತ ಸೇವೆ ಲಭ್ಯವಿದೆ. ಎಪಿಎಲ್‌ನವರಿಗೆ ಶೇ 70ರಷ್ಟು ಆಸ್ಪತ್ರೆ ಭರಿಸಿದರೆ ಶೇ 30ರಷ್ಟು ಖರ್ಚನ್ನು ರೋಗಿಯೇ ಭರಿಸಬೇಕು. ಯಶಸ್ವಿನಿ ಯೋಜನೆಯಡಿ ಉಚಿತ ಸೇವೆ ಪಡೆಯಬಹುದು. ಸರ್ಕಾರಿ ನೌಕರರು ಪೊಲೀಸ್‌ ಇಲಾಖೆಯವರಿಗೆ ಉಚಿತ ಸೇವೆ ಲಭ್ಯವಿದೆ. ಪರಿಶಿಷ್ಟ ಜಾತಿ; ಪರಿಶಿಷ್ಟ ಪಂಗಡದವರಿಗೆ ಉಚಿತ ಸೇವೆ ನೀಡಲಾಗುವುದು. ಉಳಿದಂತೆ ನವನಗರದ ಕೆಸಿಟಿಆರ್‌ಐ ಎಚ್‌ಸಿಜಿ–ಎನ್‌ಎಂಆರ್‌ ಆಸ್ಪತ್ರೆಯಲ್ಲೂ ಆಯುಷ್ಮಾನ್‌ ಆರೋಗ್ಯ ಭಾಗ್ಯದಡಿ ರಿಯಾಯತಿ ದರದಡಿ ಹಾಗೂ ಖಾಸಗಿ ವಿಮೆ ಸೌಲಭ್ಯ (ಕ್ಯಾಶ್‌ಲೆಸ್‌) ಲಭ್ಯವಿದೆ.

ಜಿಲ್ಲೆಯಲ್ಲಿ ಇರುವ ಕ್ಯಾನ್ಸರ್ ಆಸ್ಪತ್ರೆ ಹಾಗೂ ಸಂಪರ್ಕಆಸ್ಪತ್ರೆ; ಹಾಸಿಗೆ ಸಂಖ್ಯೆ; ವರ್ಷಕ್ಕೆ ದಾಖಲಾಗುವ ರೋಗಿಗಳು;ಸಹಾಯವಾಣಿ ಕಿಮ್ಸ್‌;60;2600;ಇಲ್ಲ ಕೆಸಿಟಿಆರ್‌ಐ ನವನಗರ;120;2500;6364882972 ಎಚ್‌ಸಿಜಿ ಎನ್‌ಎಂಆರ್‌;40;2000;6358888810 / 0836-4252940ರೇಡಾನ್;30;1500;0836–2239611

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT