ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ಯೋಜನೆಗಾಗಿ ಮತ್ತೆ ಹೋರಾಟ: ಸೊಬರದಮಠ

Published 12 ಫೆಬ್ರುವರಿ 2024, 16:17 IST
Last Updated 12 ಫೆಬ್ರುವರಿ 2024, 16:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿ ಮಾಡುವ ವಿಷಯವನ್ನು ರಾಜಕೀಯ ವ್ಯಕ್ತಿಗಳು ತಮ್ಮ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರಗಳು ರೈತರ ಅಳಲು ಆಲಿಸುತ್ತಿಲ್ಲ. ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಎಲ್ಲ ರೀತಿಯಿಂದಲೂ ಮತ್ತೆ ತೀವ್ರ ಸ್ವರೂಪದ ಹೋರಾಟ ಆರಂಭಿಸಲಾಗುವುದು ಎಂದು ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಈ ಬಗ್ಗೆ ಚರ್ಚಿಸುವಾಗ ಹುಬ್ಬಳ್ಳಿ–ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಅಭಿಪ್ರಾಯ ಏಕೆ ಕೇಳಿಲ್ಲ. ರಾಜ್ಯವನ್ನು ಪ್ರತಿನಿಧಿಸುತ್ತಿರುವ 25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಇವರೆಲ್ಲ ರೈತರ ಬೇಡಿಕೆಯನ್ನು ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

’ಮಹದಾಯಿ ಹೋರಾಟ ವಿಷಯದಲ್ಲಿ ಇದುವರೆಗೂ ರಾಜಕಾರಣಿಗಳು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಮಹದಾಯಿ ನೀರಿಗಾಗಿ ಕಾದು ಕುಳಿತಿರುವ ರೈತರೆಲ್ಲರೂ ಮತ್ತೆ ಒಟ್ಟಾಗಿ ನಿರ್ಣಯ ಕೈಗೊಂಡಿದ್ದು, ಮತ್ತೆ ಹೋರಾಟ ಆರಂಭಿಸುವುದಕ್ಕೆ ಸಜ್ಜಾಗಿದ್ದೇವೆ’ ಎಂದು ಹೇಳಿದರು.

‘ಹುಬ್ಬಳ್ಳಿ–ಧಾರವಾಡಕ್ಕೆ ಕುಡಿಯವ ನೀರು ಒದಗಿಸಲು ನ್ಯಾಯಮಂಡಳಿ ನೀಡಿರುವ ತೀರ್ಮಾನವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಮಹದಾಯಿ ಯೋಜನೆ ಜಾರಿಗೆ ಕಾನೂನು ತೊಡಕಿದೆ ಎಂದು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಅವರು ಹೇಳಿದ್ದು ಅತ್ಯಂತ ಮೂರ್ಖತನದಿಂದ ಕೂಡಿದೆ. ಇಂಥ ಮಹತ್ವದ ವಿಷಯದ ಕುರಿತು ಸಾಧಕ, ಬಾಧಕಗಳ ಕುರಿತು ಚರ್ಚಿಸಬೇಕಿತ್ತು. ಈ ಭಾಗದ ಜನಪ್ರತಿನಿಧಿಗಳ ಅಭಿಪ್ರಾಯವನ್ನು ಪಡೆದುಕೊಳ್ಳದೆ ಈ ಹೇಳಿಕೆ ಹೇಗೆ ನೀಡಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ‘ ಎಂದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಬಿ.ಜೋಗನ್ನವರ, ಗುರುರಾಯನಗೌಡ ಅವರು ಮಾತನಾಡಿ, ಮಹದಾಯಿ ಯೋಜನೆ ಜಾರಿಗೊಳಿಸುವ ಬಗ್ಗೆ ಸರ್ಕಾರಗಳ ಮೇಲಿದ್ದ ರೈತರ ಭರವಸೆ ಹುಸಿಯಾಗಿದೆ. ಇದಕ್ಕಾಗಿ ಕಾನೂನು ಹೋರಾಟದ ಜೊತೆಗೆ ರೈತರೆಲ್ಲರೂ ಒಟ್ಟಾಗಿ ಪ‍್ರತಿಭಟನೆ ಆರಂಭಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT