ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ: ಶಿವನ ದೇಗುಲ ಸಿಂಗಾರ

ಪಲ್ಲಕ್ಕಿ ಉತ್ಸವ, ರಥೋತ್ಸವ ಸಂಭ್ರಮಕ್ಕೆ ಸಿದ್ಧತೆ
Published 5 ಮಾರ್ಚ್ 2024, 16:02 IST
Last Updated 5 ಮಾರ್ಚ್ 2024, 16:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾಶಿವರಾತ್ರಿ ಹಬ್ಬವನ್ನು ಮಾರ್ಚ್‌ 8ರಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಈಗಾಗಲೇ ನಗರದ ಬಹುತೇಕ ಈಶ್ವರ ದೇಗುಲಗಳನ್ನು ವಿದ್ಯುತ್‌ ದೀಪಗಳಿಂದ ಸಿಂಗಾರ ಮಾಡಲಾಗುತ್ತಿದೆ. ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. 

ಪ್ರಮುಖವಾಗಿ ಇಲ್ಲಿನ ಸ್ಟೇಷನ್‌ ರಸ್ತೆಯ ಈಶ್ವರ ದೇವಸ್ಥಾನ, ಶಿವಪುರ ಕಾಲೊನಿಯ ಶಿವನ ಮೂರ್ತಿ ದೇಗುಲ, ಉಣಕಲ್‌ ಕ್ರಾಸ್‌ನ ರಾಮಲಿಂಗೇಶ್ವರ ದೇವಸ್ಥಾನ, ಸಿದ್ಧಾರೂಢ ಮಠ, ದಿವಟೆ ಗಲ್ಲಿಯ ಈಶ್ವರ ದೇವಸ್ಥಾನ ಸೇರಿದಂತೆ ನಗರದಲ್ಲಿ ಈಶ್ವರ ದೇವಸ್ಥಾನಗಳಲ್ಲಿ ಈಗಾಗಲೇ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲಿವೆ. 

ಸಿದ್ಧಾರೂಢ ಮಠದ ಆವರಣದಲ್ಲಿ ಮಾರ್ಚ್‌ 3ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಮಾರ್ಚ್‌ 11ರವರೆಗೆ ಶಿವರಾತ್ರಿ ಉತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.

‘ಶ್ರೀಮಠದ ಕೈಲಾಸ ಮಂಟಪದಲ್ಲಿ ಮಾರ್ಚ್‌ 11ರ ವರೆಗೆ ವಿವಿಧ ಮಠಗಳ ಮಠಾಧೀಶರು ಧಾರ್ಮಿಕ ಉಪನ್ಯಾಸ ನೀಡುವರು. ಮಾರ್ಚ್‌ 8ರಂದು ಸಂಜೆ ವಾದ್ಯ ಮೇಳದೊಂದಿಗೆ ಸಂಭ್ರಮದಿಂದ ಸಿದ್ದಾರೂಢರ ಪಲ್ಲಕ್ಕಿ ಉತ್ಸವ ನಡೆಯಲಿದೆ. ನಂತರ ಆಹೋರಾತ್ರಿ ಜಾಗರಣೆ ನಡೆಯುವುದು. ಮಾರ್ಚ್‌ 9ರಂದು ಪಲ್ಲಕ್ಕಿಯು ಊರೊಳಗೆ ಹೋಗಿ ಬಂದು ನಂತರ ಸಂಜೆ 5.30ಕ್ಕೆ ರಥೋತ್ಸವ ನಡೆಯಲಿದೆ’ ಎಂದು ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್‌ ಕಮಿಟಿಯ ಚೇರಮನ್‌ ಬಸವರಾಜ ಸಿ.ಕಲ್ಯಾಣಶೆಟ್ಟರ ಹೇಳಿದರು. 

‘ಉಣಕಲ್‌ ಕ್ರಾಸ್‌ನಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದ ರಾಮಲಿಂಗೇಶ್ವರ ಸ್ವಾಮಿಯ ರಥೋತ್ಸವವು ಮಾರ್ಚ್‌ 9ರಂದು ಸಂಭ್ರಮದಿಂದ ನಡೆಯಲಿದೆ’ ಎಂದು ಮುಖಂಡ ರಾಜಣ್ಣ ಕೊರವಿ ತಿಳಿಸಿದರು. 

‘ಶಿವರಾತ್ರಿ ಪ್ರಯುಕ್ತ ನೇಕಾರ ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಾರ್ಚ್‌ 8ರಂದು ಬೆಳಿಗ್ಗೆ 10ಕ್ಕೆ ಉಚಿತ ಸಾಮೂಹಿಕ ವಿವಾಹ, ಶಿವಾಷ್ಟೋತ್ತರ ಶತನಾಮಾವಳಿ ಪಠಣದೊಂದಿಗೆ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮ ನಡೆಯಲಿದೆ’ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ. 

‘ಗೋಕುಲ ರಸ್ತೆಯ ಶಿವಪುರ ಕಾಲೊನಿಯ ಉದ್ಯಾನದಲ್ಲಿ ಬೃಹತ್‌ ಶಿವನಮೂರ್ತಿಯನ್ನು ನಿರ್ಮಿಸಿ 16 ವರ್ಷ ಪೂರ್ಣಗೊಂಡಿದ್ದು ಮಾರ್ಚ್‌ 8ರಂದು ಶಿವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಸಂಜೆ 6ಕ್ಕೆ ದೀಪೋತ್ಸವ ನಡೆಯಲಿದೆ‘ ಎಂದು ಶಿವಪುರ ನಿವಾಸಿಗಳ ಸಂಘದವರು ‍ತಿಳಿಸಿದ್ದಾರೆ. 

ಮಠ, ಮಂದಿರಗಳಲ್ಲಿ ಧಾರ್ಮಿಕ ಉಪನ್ಯಾಸ ವಿವಿಧ ಮಠಗಳ ಮಠಾಧೀಶರು ಭಾಗಿ  ಶಿವನ ಮೂರ್ತಿಗೆ ಬಣ್ಣದ ಅಲಂಕಾರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT