ಸೋಮವಾರ, ನವೆಂಬರ್ 30, 2020
20 °C
ನಮ್ಮ ಸಹಾಯ ನಿಮಗೆ ಬೇಕೆ? ಸಹಾಯವಾಣಿ ತಂಡ ಇಂದಿನಿಂದ ಕಾರ್ಯಾರಂಭ

ಮಜೇಥಿಯಾ ಫೌಂಡೇಷನ್‌–ಕಿಮ್ಸ್‌ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಚಿಕಿತ್ಸೆಗಾಗಿ ಕಿಮ್ಸ್‌ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಸಂಬಂಧಿಕರಿಗೆ ಮಾರ್ಗದರ್ಶನ ಮಾಡಲು ಮಜೇಥಿಯಾ ಫೌಂಡೇಷನ್‌ ತನ್ನ 20 ಸಿಬ್ಬಂದಿಯನ್ನು ಕಿಮ್ಸ್‌ಗೆ ನೀಡಿದೆ. ಈ ಕುರಿತು ‘ನಮ್ಮ ಸಹಾಯ ನಿಮಗೆ ಬೇಕೆ?’ ಸಹಾಯವಾಣಿ ತಂಡದ ಒಪ್ಪಂದ ಮತ್ತು ಪ್ರಮಾಣವಚನ ಸ್ವೀಕಾರ ಸೋಮವಾರ ನಡೆಯಿತು.

ಆಸ್ಪತ್ರೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಹೋಗಲು, ರಕ್ತ ಪರೀಕ್ಷೆ, ಔಷಧಿ ವಿಭಾಗ, ಎಕ್ಸರೆ ಹೀಗೆ ಬೇರೆ ಬೇರೆ ವಿಭಾಗಗಳಿಗೆ ಹೋಗಲು ಈ ಸಿಬ್ಬಂದಿ ನೆರವಾಗುತ್ತಾರೆ. ಕಿಮ್ಸ್‌ ಆವರಣದಲ್ಲಿ ಅಲ್ಲಲ್ಲಿ ಇವರು ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಹಿಡಿದುಕೊಂಡು ಇರುತ್ತಾರೆ. ಮಾಸ್ಕ್ ಧರಿಸದವರಿಗೆ ತಿಳಿಹೇಳಿ ಉಚಿತವಾಗಿ ಮಾಸ್ಕ್‌ ಕೊಡುತ್ತಾರೆ. ಬೆಳಿಗ್ಗೆ 9ರಿಂದ ಸಂಜೆ 5ರ ತನಕ ಸಿಬ್ಬಂದಿ ಕೆಲಸ ಮಾಡುತ್ತಾರೆ.

ಒಪ್ಪಂದದ ಬಳಿಕ ಮಾತನಾಡಿದ ಫೌಂಡೇಷನ್‌ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ‘ಕಿಮ್ಸ್‌ ಆವರಣ ದೊಡ್ಡದಾದ ಕಾರಣ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಬರುವ ಜನರಿಗೆ ಯಾವ ವಿಭಾಗಕ್ಕೆ ಹೇಗೆ ಹೋಗಬೇಕು ಎನ್ನುವುದು ಬೇಗನೆ ಗೊತ್ತಾಗುವುದಿಲ್ಲ. ಅವರಿಗೆ ನಮ್ಮ ಸಿಬ್ಬಂದಿ ನೆರವಾಗುತ್ತಾರೆ. ಅಗತ್ಯಬಿದ್ದರೆ ಇನ್ನಷ್ಟು ಸಿಬ್ಬಂದಿ ಒದಗಿಸಲಾಗುವುದು’ ಎಂದರು.

‘ರೋಗಿಗಳ ಜೊತೆ ಬರುವವರು ಕಿಮ್ಸ್ ಆವರಣದ ಪಾರ್ಕ್‌ನಲ್ಲಿ, ಗಿಡದ ನೆರಳಿನಲ್ಲಿ ಕುಳಿತು ಊಟ ಮಾಡುತ್ತಾರೆ. ಅವರಿಗೆ ಊಟದ ಶೆಲ್ಟರ್‌ ಕಟ್ಟಿಸಿಕೊಡಲಾಗುವುದು’ ಎಂದು ತಿಳಿಸಿದರು.

ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಮಾತನಾಡಿ ‘ಕೋವಿಡ್‌ ಸಮಯದಲ್ಲಿ ಅನೇಕ ಸಂಘ, ಸಂಸ್ಥೆಗಳು ಆಸ್ಪತ್ರೆ ಜೊತೆ ಕೈ ಜೋಡಿಸಿವೆ’ ಎಂದರು.

ನಿವೃತ್ತ ಏರ್‌ ಕಮಾಂಡರ್‌ ಸಿ.ಎಸ್‌. ಹವಾಲ್ದಾರ್‌ ಮಾತನಾಡಿ ‘ಕೋವಿಡ್‌ ಸಮಯದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದ್ದರೂ, ಸರ್ಕಾರ ಯೋಧರಿಗೆ ಮತ್ತು ವೈದ್ಯರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ವೈದ್ಯರು ಕೂಡ ಯೋಧರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಿಮ್ಸ್‌ ವೈದ್ಯಕೀಯ ಅಧೀಕ್ಷಕ (ಉಸ್ತುವಾರಿ) ಡಾ. ರಾಜಶೇಖರ ದ್ಯಾಬೇರಿ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಉಪ ವೈದ್ಯಕೀಯ ಅಧೀಕ್ಷಕ ಮುಲ್ಕಿ ಪಾಟೀಲ, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಲಕ್ಷ್ಮಿಕಾಂತ್‌ ಲೋಖರೆ, ಫೌಂಡೇಷನ್‌ ಸಲಹಾ ಸಮಿತಿ ಸದಸ್ಯರಾದ ಡಾ. ಕೆ. ರಮೇಶಬಾಬು, ಡಾ. ವಿ.ಬಿ. ನಿಟಾಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು