ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಶೈಕ್ಷಣಿಕ ಕೈಂಕರ್ಯ ಮೆರೆದ ಪೇಜಾವರ ಶ್ರೀ

Last Updated 29 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರ್ಥಿಕವಾಗಿ ಹಿಂದುಳಿದ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಯನ್ನು ಹುಬ್ಬಳ್ಳಿಯಲ್ಲಿ ಕಟ್ಟಿ ಬೆಳಸಬೇಕು ಎಂಬ ಕನಸು ಕಂಡಿದ್ದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ನಿಟ್ಟಿನಲ್ಲಿ ಏಳು ವರ್ಷಗಳ ಹಿಂದೆ ಮೊದಲ ಹೆಜ್ಜೆಯನ್ನಿಟ್ಟಿದ್ದರು.

ಯತಿಗಳ ಕೋರಿಕೆ ಮೇರೆಗೆ ರಾಜ್ಯ ಸರ್ಕಾರವು ಹುಬ್ಬಳ್ಳಿ ತಾಲ್ಲೂಕಿನ ಬುಡರಸಿಂಗಿಯಲ್ಲಿ ಸುಮಾರು 10 ಎಕರೆ ಜಾಗವನ್ನು ಒದಗಿಸಿತ್ತು. ಈ ಜಾಗದಲ್ಲಿ ‘ಕರ್ನಾಟಕ ಶಿಕ್ಷಣ ಸೇವಾ ಸಮಿತಿ’ಯನ್ನು ಶ್ರೀಗಳು ಹುಟ್ಟುಹಾಕಿ ಶೈಕ್ಷಣಿಕ ಕೈಂಕರ್ಯ ಆರಂಭಿಸಿದ್ದರು. ಸದ್ಯ ಕೆಎಸ್‌ಎಸ್‌ಎಸ್‌ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತೆರೆಯಲಾಗಿದೆ. ಶ್ರೀಗಳ ಆಶಯದಂತೆ ಗ್ರಾಮೀಣ ಭಾಗದ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಇಲ್ಲಿ ವಸತಿಯುತ ಶಿಕ್ಷಣವನ್ನು ನೀಡಲಾಗುತ್ತಿದೆ.

‘ಬುಡರಸಿಂಗಿಯಲ್ಲಿ ಪಿಯುಸಿ ಜೊತೆಗೆ ಬಡ ವಿದ್ಯಾರ್ಥಿಗಳಿಗಾಗಿ ಡಿಪ್ಲೊಮಾ, ಐಟಿಐ ಶಿಕ್ಷಣ ನೀಡುವ ಉದ್ದೇಶವನ್ನು ಶ್ರೀಗಳು ಹೊಂದಿದ್ದರು. ಈ ಬಗ್ಗೆ ನಮ್ಮೊಂದಿಗೆ ಚರ್ಚಿಸಿದ್ದರು. ಶ್ರೀಗಳ ಉತ್ತರಾಧಿಕಾರಿ ವಿಶ್ವ ಪ್ರಸನ್ನ ತೀರ್ಥರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಗುರುಗಳ ಆಶಯ ಈಡೇರಿಸಲಾಗುವುದು’ ಎಂದು ಕರ್ನಾಟಕ ಶಿಕ್ಷಣ ಸೇವಾ ಸಮಿತಿ ಜಂಟಿ ಕಾರ್ಯದರ್ಶಿ ಗೋಪಾಲ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಬಿಎಂ ಹಾಸ್ಟೆಲ್‌ ನಿರ್ಮಾಣ:ವಿದ್ಯಾನಗರದ ಲೋಕಪ್ಪನಹಕ್ಕಲ ಬಳಿ (ಶಾಂತಿ ಕಾಲೊನಿ) 1965ರಲ್ಲಿ ಅಖಿಲ ಭಾರತ ಮದ್ವ ಮಹಾಮಂಡಳ ವಿದ್ಯಾರ್ಥಿ ನಿಲಯ(ಎಬಿಎಂ ಹಾಸ್ಟೆಲ್‌)ವನ್ನು ತೆರೆದು, ಬ್ರಾಹ್ಮಣ ಸಮಾಜದ ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಾ ಬಂದಿದ್ದಾರೆ.

ಕೇವಲ 10 ವಿದ್ಯಾರ್ಥಿಗಳಿಂದ ಆರಂಭವಾದ ಈ ವಿದ್ಯಾರ್ಥಿ ನಿಲಯದಲ್ಲಿ ಪ್ರಸ್ತುತ 220ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ರಿಯಾಯಿತಿ ದರದಲ್ಲಿ ವಸತಿ, ಊಟ ಪಡೆಯುತ್ತಿದ್ದಾರೆ.

‘ಶ್ರೀಗಳು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಎಬಿಎಂ ಹಾಸ್ಟೆಲ್‌ನಲ್ಲಿ ಕರ್ನಾಟಕ ಮಾತ್ರವಲ್ಲದೇ ನೆರೆಯ ಆಂಧ್ರಪ್ರದೇಶದ ಮಕ್ಕಳು ಕಲಿಸುತ್ತಿದ್ದಾರೆ. ದೇಶ, ವಿದೇಶಗಳಲ್ಲಿ ಬದುಕು ಕಂಡುಕೊಂಡಿದ್ದಾರೆ’ ಎಂದು ವಸತಿ ನಿಲಯದ ವಾರ್ಡನ್‌ ಜನಾರ್ಧನ ಭಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶ್ರೀಗಳು ಹುಬ್ಬಳ್ಳಿಗೆ ಭೇಟಿ ನೀಡಿದಾಗ ಬಿಡುವು ಸಿಕ್ಕರೆ ಹಾಸ್ಟೆಲ್‌ಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ವಿಚಾರಿಸುತ್ತಿದ್ದರು. ಯಾವುದೇ ದೂರು ಬಾರದಂತೆ ಅಚ್ಚುಕಟ್ಟಾಗಿ ವಸತಿ ನಿಲಯವನ್ನು ಇಟ್ಟುಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಿದ್ದರು’ ಎಂದು ಅವರು ಹೇಳಿದರು.

ಕಲ್ಯಾಣ ಮಂಟಪ:ಲೋಕ‍ಪ್ಪನ ಹಕ್ಕಲಿನರುವ ಎಬಿಎಂ ಹಾಸ್ಟೆಲ್‌ ಪಕ್ಕದಲ್ಲೇ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲವಾಗಿಸುವ ಉದ್ದೇಶದಿಂದ 2006ರಲ್ಲಿ ‘ಸುಧರ್ಮ’ ಕಲ್ಯಾಣ ಮಂಟಪವನ್ನು ನಿರ್ಮಿಸಿದ್ದಾರೆ. ರಿಯಾಯಿತಿ ದರದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಈ ಕಲ್ಯಾಣ ಮಂಟಪವನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT