ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಮುಂಗಾರು ಜೋರಾಗುವ ಸಾಧ್ಯತೆ: ಹಳ್ಳದಂಚಿನ ನಿವಾಸಿಗಳಿಗೆ ಎಚ್ಚರಿಕೆ

ಟಾಸ್ಕ್‌ಫೋರ್ಸ್‌ ತಂಡ ರಚನೆ; ಜಿಲ್ಲಾಡಳಿತ ಸರಣಿ ಸಭೆ
Published 7 ಜೂನ್ 2024, 15:45 IST
Last Updated 7 ಜೂನ್ 2024, 15:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಸ್ತುತ ವರ್ಷ ಮುಂಗಾರು ಜೋರಾಗುವ ಸಾಧ್ಯತೆಯಿದೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಹು–ಧಾ ಮಹಾನಗರ ಪಾಲಿಕೆ ಹಾಗೂ ತಾಲ್ಲೂಕಾಡಳಿತವು ಜಿಲ್ಲಾಡಳಿತದ ಸಹಯೋಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ.

ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ತಂಡ ರಚನೆ, ಗ್ರಾಮೀಣ ಭಾಗದಲ್ಲಿನ ಉತ್ಸಾಹಿ ಯುವಕರ ಮುಂದಾಳತ್ವದಲ್ಲಿ ನುರಿತ ಈಜುಗಾರರ ತಂಡ ರಚನೆ, ತಗ್ಗು ಪ್ರದೇಶದ ಹಾಗೂ ಹಳ್ಳದ ಅಂಚಿನ ನಿವಾಸಿಗಳ ಮಾಹಿತಿ ಸಂಗ್ರಹ, ಕಾಳಜಿ ಕೇಂದ್ರಗಳ ಸ್ಥಾಪನೆಗೆ ಶಾಲಾ–ವಸತಿ ಗೃಹ ಹಾಗೂ ಸಮುದಾಯ ಭವನಗಳ ಗುರುತಿಸುವಿಕೆ, ಗಟಾರು, ಚರಂಡಿ ಹಾಗೂ ರಾಜಕಾಲುವೆಯಲ್ಲಿನ ಹೂಳೆತ್ತುವುದು ಸೇರಿದಂತೆ ಕೆಲವು ಕ್ರಮಗಳನ್ನು ಕೈಗೊಂಡಿವೆ.

ಈಗಾಗಲೇ ಜಿಲ್ಲಾಡಳಿತ ಮಳೆಯಿಂದಾಗುವ ಅನಾಹುತ ತಪ್ಪಿಸಲು ಪಾಲಿಕೆ, ತಾಲ್ಲೂಕಾಡಳಿತ ಹಾಗೂ ಗ್ರಾಮ ಮಟ್ಟದ ಬಿಡಿಒ ಜೊತೆ ನಿರಂತರ ಸಭೆ ನಡೆಸುತ್ತಿದ್ದು, ಜನ–ಜಾನುವಾರುಗಳ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಲು ಸೂಚಿಸಿದೆ. ಅಪಾಯ ಎದುರಾಗಬಹುದಾದ ಹಳ್ಳದ ಅಂಚಿನ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಿ, ಗ್ರಾಮ ಪಂಚಾಯ್ತಿ, ಬಸ್‌ ನಿಲ್ದಾಣಗಳಲ್ಲಿ ಕರಪತ್ರಗಳನ್ನು ಅಂಟಿಸಿ ಸೂಚನೆ ನೀಡುತ್ತಿದೆ. ತುರ್ತು ಸಂದರ್ಭದಲ್ಲಿ ನಿವಾಸಿಗಳನ್ನು ಸ್ಥಳಾಂತರ ಮಾಡಲು ಹಾಗೂ ಕಾಳಜಿ ಕೇಂದ್ರ ತೆರೆಯಲು ಸಹ ಯೋಜನೆ ರೂಪಿಸಿಕೊಂಡಿದೆ.

‘ಜಿಲ್ಲೆಯ ತುಪ್ಪರಿ ಹಳ್ಳ ಹಾಗೂ ಬೆಣ್ಣೆ ಹಳ್ಳದ ಪ್ರವಾಹದಿಂದ ಬಾಧೆಗೆ ಒಳಗಾಗುವ ಗ್ರಾಮಗಳ ಮಾಹಿತಿ, ಜನಸಂಖ್ಯೆ ಹಾಗೂ ಜಾನುವಾರುಗಳ ಅಂಕಿ–ಸಂಖ್ಯೆ ಸಂಗ್ರಹಿಸಲಾಗಿದೆ. ಒಂದೊಂದು ಗ್ರಾಮದಲ್ಲೂ ತುರ್ತು ಯುವ ಪಡೆಯನ್ನು ಸಜ್ಜುಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಸಹ ಸಹಕಾರ ನೀಡಲಿದ್ದಾರೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

‘ತುರ್ತು ಸಂದರ್ಭದಲ್ಲಿ ಶಾಲೆ, ದೇವಸ್ಥಾನ, ಸಭಾಭವನಗಳನ್ನು ಕಾಳಜಿ ಕೇಂದ್ರಗಳನ್ನಾಗಿ ಮಾಡಲು ಯೋಜಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಸಿಬ್ಬಂದಿ ಸಹ ಸಹಕಾರ ನೀಡಲಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಗಳ ಸಂಗ್ರಹ, ಜಾನುವಾರುಗಳಿಗೆ ಮೇವು ದಾಸ್ತಾನು ಮಾಡಲಾಗಿದೆ. ಉರಗ ತಜ್ಞರನ್ನು ಸಂಪರ್ಕಿಸಿ ತುರ್ತು ಸಂದರ್ಭದಲ್ಲಿ ಸಹಕಾರ ನೀಡುವಂತೆ ವಿನಂತಿಸಲಾಗಿದೆ’ ಎಂದು ತಿಳಿಸಿದರು.

‘ಪ್ರವಾಹದಿಂದ ಸಮಸ್ಯೆಯಾಗುವ ಬೆಣ್ಣೆಹಳ್ಳದ ಅಂಚಿನ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿಗೆ ತಾಲ್ಲೂಕು ಮಟ್ಟದ ಅಧಿಕಾರಿಯೊಬ್ಬರನ್ನು ನೋಡಲ್‌ ಆಫೀಸರ್‌ ಎಂದು ನೇಮಿಸಿ, ಆಯಾ ವ್ಯಾಪ್ತಿಯ ಜವಾಬ್ದಾರಿ ವಹಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಮಣ್ಣಿನ ಮನೆಗಳಿರುವುದರಿಂದ, ಮಳೆಗೆ ಮಣ್ಣು ಗೋಡೆ ಕುಸಿಯುತ್ತವೆ. ಅದರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳಿದ್ದು, ಅಂತಹ ಮನೆಗಳನ್ನು ಗುರುತಿಸಿ, ಎಚ್ಚರಿಕೆ ನೀಡುವ ಕಾರ್ಯ ನಡೆಯುತ್ತಿದೆ’ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ಹೊಲೆಪ್ಪಗೋಳ ತಿಳಿಸಿದರು.

ಅಧಿಕಾರಿಗಳ ಸರಣಿ ಸಭೆ: ಇತ್ತೀಚೆಗೆ ನಗರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಕೆಲೆವೆಡೆ ಒಳಚರಂಡಿ ಮತ್ತು ಗಟಾರು ತುಂಬಿ ಹರಿದಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿತ್ತು. ರಾಜಕಾಲುವೆಯ ಅಕ್ಕಪಕ್ಕ ನೀರು ನುಗ್ಗಿ ಅಪಾಯದ ಎಚ್ಚರಿಕೆ ನೀಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಾಲಿಕೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಗಟಾರು ಮತ್ತು ಕಾಲುವೆಗಳ ಹೂಳೆತ್ತುವ ತಾತ್ಕಾಲಿಕ ಕಾರ್ಯ ಕೈಗೊಂಡಿದ್ದಾರೆ. ವಲಯಾಧಿಕಾರಿಗಳ, ಆರೋಗ್ಯಾಧಿಕಾರಿಗಳ ಹಾಗೂ ಎಂಜಿನಿಯರ್‌ಗಳ ಜೊತೆ ಸರಣಿ ಸಭೆ ನಡೆಸಿರುವ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

‘ಈಗಾಗಲೇ ಹಿರಿಯ ಅಧಿಕಾರಿಗಳ ಮುಂದಾಳತ್ವದಲ್ಲಿ, ಹುಬ್ಬಳ್ಳಿ ಮತ್ತು ಧಾರವಾಡದ ವ್ಯಾಪ್ತಿಗೆ ಎರಡು ಟಾಸ್ಕ್‌ಫೋರ್ಸ್‌ ತಂಡಗಳನ್ನು ರಚಿಸಲಾಗಿದೆ. ಅದರ ಅಡಿ ಮೂರು ತಂಡಗಳಲ್ಲಿ ಪಾಲಿಕೆಯ ವಿವಿಧ ವಿಭಾಗದ 24 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ರಾಜಕಾಲುವೆ, ಗಟಾರದ ಹೂಳೆತ್ತುವ ಕಾಮಗಾರಿ ಮುಂದುವರಿದಿದೆ’ ಎಂದರು ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

‘ಪಾಲಿಕೆ ವ್ಯಾಪ್ತಿಯಲ್ಲಿರುವ ಮಣ್ಣಿನ ಮನೆ ಹಾಗೂ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಸಮೀಕ್ಷೆ ನಡೆಸಲಾಗಿದೆ. ಮಳೆಯಿಂದಾಗಿ ಮಣ್ಣಿನ ಗೋಡೆಗಳು ಹಿಗ್ಗಿ ಹಾಗೂ ಶಿಥಿಲಗೊಂಡ ಕಟ್ಟಡಗಳು ಕುಸಿಯುವ ಸಾಧ್ಯತೆಯಿದ್ದು, ಅಲ್ಲಿಯ ವಾಸಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಹುಬ್ಬಳ್ಳಿಯ ಶಿರೂರಪಾರ್ಕ್‌ ಬಳಿ ಶುಕ್ರವಾರ ಜಿಟಿಜಿಟಿ ಮಳೆಯಾಯಿತು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಶಿರೂರಪಾರ್ಕ್‌ ಬಳಿ ಶುಕ್ರವಾರ ಜಿಟಿಜಿಟಿ ಮಳೆಯಾಯಿತು –ಪ್ರಜಾವಾಣಿ ಚಿತ್ರ
ಮಣ್ಣಿನ ಮನೆ ಹಾಗೂ ಶಿಥಿಲ ಕಟ್ಟಡಗಳ ಕುರಿತು ಮಾಹಿತಿ ಪಡೆದು ಮಳೆಯಿಂದ ಅಪಾಯ ಎದುರಾಗುವ ಅಂತಹ ಮನೆ–ಕಟ್ಟಡಗಳ ನಿವಾಸಿಗಳನ್ನು ತೆರವುಗೊಳಿಸಲಾಗುವುದು
-ದಿವ್ಯಪ್ರಭು ಜಿಲ್ಲಾಧಿಕಾರಿ ಧಾರವಾಡ
ಗುಡುಗು–ಮಿಂಚು ಸಂದರ್ಭ ಮನೆಯಿಂದ ಹೊರಗೆ ಹೋಗದಂತೆ ಹಾಗೂ ಮರಗಳ ಕೆಳಗೆ ಆಶ್ರಯಿಸದಂತೆ ಗ್ರಾಮೀಣ ಭಾಗದ ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ
-ಪ್ರಕಾಶ ಹೊಲೆಪ್ಪಗೋಳ ತಹಶೀಲ್ದಾರ್‌ ಹುಬ್ಬಳ್ಳಿ ಗ್ರಾಮೀಣ
20 ಮಂದಿ ಉತ್ಸಾಹಿಗಳ ತಂಡ
ಹುಬ್ಬಳ್ಳಿ ತಾಳ್ಲೂಕಿನ ಬೆಣ್ಣೆ ಹಳ್ಳದ ಪ್ರವಾಹಕ್ಕೆ ಹಳ್ಳದ ವ್ಯಾಪ್ತಿಯ ಇಂಗಳಹಳ್ಳಿ ನಾಗೂರು ಶಿರಗುಪ್ಪಿ ಭಂಡಿವಾಡ ಮಂಟೂರು ಹೆಬಸೂರು ಸೇರಿದಂತೆ ಹನ್ನೊಂದು ಹಳ್ಳಿಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಪ್ರತಿವರ್ಷದ ಪ್ರವಾಹಕ್ಕೆ ಜಾನುವಾರುಗಳು ಹಳ್ಳದಲ್ಲಿ ಕೊಚ್ಚಿ ಹೋಗುವುದು ಕೆಲವರು ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಹಳ್ಳದ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ನಿರಾಶ್ರಿತವಾಗುತ್ತವೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಾಡಳಿತ ಈಜು ಸಾಹಸ ಮುಂದಾಳತ್ವದ ಮನೋಭಾವ ಇರುವ 20 ಮಂದಿಯ ಉತ್ಸಾಹಿ ಯುವಕರ ತಂಡವನ್ನು ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT