ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲ್ವೆ ದೇಶದ ಅಭಿವೃದ್ಧಿಯ ಬೆನ್ನೆಲುಬು: ರಾಜ್ಯಪಾಲ ಥಾವರಚಂದ್‌ ಗೆಹಲೋತ್‌

Published 12 ಮಾರ್ಚ್ 2024, 6:52 IST
Last Updated 12 ಮಾರ್ಚ್ 2024, 6:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತೀಯ ರೈಲ್ವೆ ದೇಶದ ಆರ್ಥಿಕ ಮತ್ತು ಸರ್ವತೋಮುಖ ಅಭಿವೃದ್ಧಿಯ ಬೆನ್ನೆಲುಬಾಗಿದೆ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ10 ವಂದೇ ಭಾರತ್ ರೈಲುಗಳಿಗೆ ಚಾಲನೆ ಮತ್ತು ₹85 ಸಾವಿರ ಕೋಟಿ ವೆಚ್ಚದ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ರೈಲು ನಿಲ್ದಾಣದಿಂದ ವರ್ಚುವಲ್‌ ಮೂಲಕ ಭಾಗವಹಿಸಿ, ಮಾತನಾಡಿದರು.

ದೇಶದ ನಿರಂತರ ಅಭಿವೃದ್ಧಿಯಲ್ಲಿ, ಸುಗಮ ಮತ್ತು ಸಮನ್ವಯ ರೈಲ್ವೆ ಸಾರಿಗೆ ವ್ಯವಸ್ಥೆಯು ಪ್ರಮುಖ ಕೊಡುಗೆ ನೀಡಿದೆ. ದೇಶದಲ್ಲಿ ಭಾರತೀಯ ರೈಲ್ವೇ ಮುಖ್ಯ ಸಾರಿಗೆ ವಿಧಾನವಾಗಿದೆ ಎಂದು ಹೇಳಿದರು.

ಕಳೆದ ತಿಂಗಳಷ್ಟೇ ಪ್ರಧಾನಿಗಳು ₹41 ಸಾವಿರ ಕೋಟಿ ಮೌಲ್ಯದ ರೈಲ್ವೆ ಯೋಜನೆಗಳನ್ನು ದೇಶವಾಸಿಗಳಿಗೆ ಅರ್ಪಿಸಿದ್ದರು. ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ದೇಶದಾದ್ಯಂತ 554 ನಿಲ್ದಾಣಗಳು, ರೈಲ್ವೆ ನಿಲ್ದಾಣ ಮತ್ತು 1500 ಆರ್‌ಒಬಿ/ಅಂಡರ್ ಪಾಸ್ ಮತ್ತು ವಿವಿಧ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಬಿಡುಗಡೆ ಮಾಡಲಾಯಿತು. ಈ ಕಾಮಗಾರಿಗಳಲ್ಲಿ, ನೈರುತ್ಯ ರೈಲ್ವೆ ವಲಯದ ಅಡಿಯಲ್ಲಿ 34 ರೈಲು ನಿಲ್ದಾಣಗಳು ಮತ್ತು 30 ರಸ್ತೆ ಮೇಲ್ಸೇತುವೆಗಳು ಮತ್ತು ಕೆಳಸೇತುವೆಗಳ ಪುನರಾಭಿವೃದ್ಧಿ ಮತ್ತು ಆಧುನೀಕರಣದ ಕೆಲಸವನ್ನು ₹ 1192.86 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

₹656.43 ಕೋಟಿ ವೆಚ್ಚದಲ್ಲಿ ಕರ್ನಾಟಕದಲ್ಲಿ 31 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ, 24 ಆರ್‌ಒಬಿ/ಅಂಡರ್ ಪಾಸ್ ಗಳನ್ನು ₹ 330.62 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಓಡುತ್ತಿವೆ. ಈ ದಿನ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಉಡುಗೊರೆಯಾಗಿ ನೀಡಲಾಗುತ್ತಿರುವುದು ಪ್ರಶಂಸನೀಯ. ಮಾಲ್ಡಾ ಟೌನ್- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ರೈಲು ಸಂಚಾರ ಆರಂಭಿಸಲಾಯಿತು. ನೈರುತ್ಯ ರೈಲ್ವೆಯಲ್ಲಿನ 85 ಪ್ರತಿಶತಕ್ಕೂ ಹೆಚ್ಚು ರೈಲು ಜಾಲವು ವಿದ್ಯುದೀಕರಣಗೊಂಡಿವೆ ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕ‌ ಮಹೇಶ ಟೆಂಗಿನಕಾಯಿ‌ ಮಾತನಾಡಿದರು. ಕುಂದಗೋಳ ಶಾಸಕ ಎಂ.ಆರ್‌. ಪಾಟೀಲ ಉಪಸ್ಥಿತರಿದ್ದರು. ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ್, ಮಾಡೆಲ್ ಮ್ಯಾನೇಜರ್ ಹರ್ಷಾ ಖರೆ, ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT