ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮಳೆ ಕೊರತೆ: ಕೃಷಿ ಪಂಪ್‌ಸೆಟ್‌ ಹೆಚ್ಚು ಬಳಕೆ

Published 25 ನವೆಂಬರ್ 2023, 4:35 IST
Last Updated 25 ನವೆಂಬರ್ 2023, 4:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಳೆ ಕೊರತೆಯಿಂದ ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ವರ್ಷ ವಾಡಿಕೆಗಿಂತ ಮೊದಲೇ ಕೃಷಿ ಪಂಪ್‌ಸೆಟ್‌ಗಳನ್ನು ಬಳಸಲು ರೈತರು ಆರಂಭಿಸಿದ್ದಾರೆ. ಇದರ ಪರಿಣಾಮ ಮನೆ, ಕಚೇರಿ, ವಾಣಿಜ್ಯ ಮಳಿಗೆ ಮತ್ತು ಕೈಗಾರಿಕೆಗಳಿಗಿಂತ ಹೆಚ್ಚು ವಿದ್ಯುತ್‌ ಪಂಪ್‌ಸೆಟ್‌ಗೆ ಬಳಕೆಯಾಗಿದೆ.

ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಇತರ ಮೂಲಗಳು 2,960 ದಶಲಕ್ಷ ಯೂನಿಟ್‌ (ಶೇ 40ರಷ್ಟು) ವಿದ್ಯುತ್‌ ಬಳಸಿದ್ದರೆ, ಕೃಷಿ ಪಂಪ್‌ ಸೆಟ್‌ಗಳು 4,525 ದಶಲಕ್ಷ ಯೂನಿಟ್‌ (ಶೇ 60ರಷ್ಟು) ವಿದ್ಯುತ್‌ ಬಳಸಿವೆ ಎಂದು ಹೆಸ್ಕಾಂ ಅಂಕಿ– ಅಂಶಗಳು ಹೇಳಿವೆ.

ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್‌–ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಆಗುತಿತ್ತು. ಆದರೆ, ಈ ವರ್ಷ ಮುಂಗಾರು ಪೂರ್ವ ಮಳೆಯಾಗಿಲ್ಲ. ನಂತರ ಜೂನ್‌– ಜುಲೈ ತಿಂಗಳಲ್ಲೂ ಮುಂಗಾರು ಮಳೆ ಸಮಪರ್ಕವಾಗಿ ಸುರಿಯಲಿಲ್ಲ. ಆಗಸ್ಟ್‌ನಲ್ಲಿ ಮಾತ್ರ ಉತ್ತಮ ಮಳೆಯಾಯಿತು. ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಆಯಿತು. ಇದರಿಂದ ಬೆಳೆಗೆ ನೀರು ಹರಿಸಲು ಕೃಷಿ ಪಂಪ್‌ ಸೆಟ್‌ಗಳು ಹೆಚ್ಚು ಬಳಕೆಯಾಗಿವೆ.

10 ಲಕ್ಷ ಕೃಷಿ ಪಂಪ್‌ಸೆಟ್‌: ಹೆಸ್ಕಾಂ ವ್ಯಾಪ್ತಿಯ ಒಟ್ಟು ಏಳು ಜಿಲ್ಲೆಗಳಲ್ಲಿ 59.87 ಲಕ್ಷ ವಿದ್ಯುತ್‌ ಗ್ರಾಹಕರಿದ್ದಾರೆ. ಅವುಗಳಲ್ಲಿ ಮನೆ, ಕಚೇರಿ, ವಾಣಿಜ್ಯ ಮಳಿಗೆ ಮತ್ತು ಕೈಗಾರಿಕೆಗಳ ಸಂಖ್ಯೆ 49.55 ಲಕ್ಷ (ಶೇ 83ರಷ್ಟು) ಇದೆ. ಕೃಷಿ ಪಂಪ್‌ಸೆಟ್‌ ಸಂಖ್ಯೆ 10.31 ಲಕ್ಷ (ಶೇ 17ರಷ್ಟು) ಇದೆ.

ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ಪಂಪ್‌ಸೆಟ್‌ಗಳಿದ್ದು, ಅಲ್ಲಿಯೇ ಹೆಚ್ಚು ವಿದ್ಯುತ್ ಬಳಕೆಯಾಗಿದೆ. ಕಬ್ಬಿಗೆ ನಿರಂತರ ನೀರಿನ ಅಗತ್ಯವಿರುವ ಕಾರಣ ರೈತರು ಕೊಳವೆಬಾವಿ ಮತ್ತು ಜಲಮೂಲಗಳಿಂದ ನೀರು ಹರಿಸಲು ಕೃಷಿ ಪಂಪ್‌ ಸೆಟ್‌ ಹೆಚ್ಚು ಬಳಸುತ್ತಾರೆ.

ವಿದ್ಯುತ್‌ ಶುಲ್ಕ

‘ಕೃಷಿ ಪಂಪ್‌ ಸೆಟ್‌ಗಳ ವಿದ್ಯುತ್‌ ಶುಲ್ಕ ಕೂಡ ಇತರ ಮೂಲಗಳ ಶುಲ್ಕಕ್ಕಿಂತ ಹೆಚ್ಚಾಗಿದೆ. ಒಟ್ಟು ಶುಲ್ಕ₹ 7 ಕೋಟಿ ಆಗಿದೆ. 10 ಎಚ್‌ಪಿ ಒಳಗಿರುವ ಕೃಷಿ ಪಂಪ್‌ ಸೆಟ್‌ಗಳ ವಿದ್ಯುತ್‌ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ’ ಎಂದು ಹೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT