ಬುಧವಾರ, ಮೇ 18, 2022
23 °C
ನಿತ್ಯದ ಕಾರ್ಯಾಚರಣೆ ಸಂಖ್ಯೆ 25ಕ್ಕೆ ಏರಿಕೆ, ಕಡಿಮೆಯಾದ ಕಾಯುವ ಅವಧಿ

ಧಾರವಾಡ: 48 ಗಂಟೆಯಲ್ಲೇ ಸಂತಾನಶಕ್ತಿ ಹರಣ ಚಿಕಿತ್ಸೆ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವ ನಿತ್ಯದ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ದೂರು ನೀಡಿದ 48 ಗಂಟೆಗಳ ಒಳಗೆ ಶಸ್ತ್ರಚಿಕಿತ್ಸೆ ನಡೆಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ಫೆ. 15ರಿಂದ ಅನುಷ್ಠಾನಗೊಳ್ಳಲಿದೆ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಪಾಲಿಕೆ ಮೊದಲು ಪ್ರತಿವರ್ಷವೂ ಟೆಂಡರ್‌ ಕರೆಯುತ್ತಿತ್ತು. ಅವಧಿ ಮುಗಿದ ಮೂರ್ನಾಲ್ಕು ತಿಂಗಳ ನಂತರ ಮತ್ತೊಂದು ವರ್ಷದ ಅವಧಿಗೆ ಟೆಂಡರ್‌ ಕರೆಯಲಾಗುತ್ತಿತ್ತು. ಟೆಂಡರ್ ವಿಳಂಬವಾಗುತ್ತಿದ್ದರಿಂದ ಬೀದಿನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಹೀಗಾಗಿ ಬಳಿಕ ಟೆಂಡರ್‌ ಪಡೆದವರು ನಾಯಿಗಳ ಹಾವಳಿ ತಡೆಯಲು ಹರಸಾಹಸ ಪಡಬೇಕಾಗುತ್ತಿತ್ತು. ದೂರು ದಾಖಲಾಗಿ ಒಂದು ವಾರ ಕಳೆದರೂ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ದೂರು ನೀಡಿದವರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದರು. ಈ ಸಮಸ್ಯೆ ತಪ್ಪಿಸುವ ಸಲುವಾಗಿ ಪಾಲಿಕೆ ಈಗ ಮೂರು ವರ್ಷಗಳ ಅವಧಿಗೆ ಟೆಂಡರ್‌ ಕರೆದಿದೆ.

‘ಮೊದಲು ನಿತ್ಯ 18ರಿಂದ 20 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ ಈ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಪ್ರತಿ ತಿಂಗಳು ದಾಖಲಾಗುತ್ತಿದ್ದ 270ರಿಂದ 280 ದೂರುಗಳ ಸಂಖ್ಯೆ ಈಗ 235ರಿಂದ 240ಕ್ಕೆ ಇಳಿಕೆಯಾಗಿದೆ. ದೂರು ನೀಡಿದ 48 ಗಂಟೆಯೊಳಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು’ ಎನ್ನುತ್ತಾರೆ ಪಾಲಿಕೆಯ ಪಶುವೈದ್ಯ ರವಿ ಸಾಲಿಗೌಡರ.

ವೈಜ್ಞಾನಿಕ ಅಧ್ಯಯನ ಅಗತ್ಯ: ಶ್ವಾನಗಳ ಸಂತಾನಶಕ್ತಿ ಹರಣ ಚಿಕಿತ್ಸೆಯನ್ನು ಸರ್ಕಾರದಿಂದಷ್ಟೇ ಮಾಡುವ ಬದಲು ನಮಗೂ ಅವಕಾಶ, ಜಾಗ ಕೊಟ್ಟರೆ ನಾಯಿಗಳ ಜನನ ಪ್ರಮಾಣದ ಸಂಖ್ಯೆ ವೇಗವಾಗಿ ಕಡಿಮೆ ಮಾಡಬಹುದು ಎಂದು ಶ್ವಾನಗಳ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ಹುಬ್ಬಳ್ಳಿಯ ರಾಯಸ್ಟನ್‌ ಫೌಂಡೇಷನ್ ಸದಸ್ಯೆ ಪ್ರಿಯಾಂಕಾ ಕೋಳ್ವೆಕರ್‌ ಹೇಳಿದರು.

‘ನಾಯಿಗಳ ವರ್ತನೆಯ ಬಗೆಗೆ ಶಾಲಾ, ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ’ ಎಂದರು.

ಪಾಲಿಕೆಯಿಂದ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಆ ನಾಯಿಗಳನ್ನು ತಂದ ಬಡಾವಣೆಯಲ್ಲಿಯೇ ಬಿಡುತ್ತಿಲ್ಲ. ಸ್ಥಳ ಬದಲಾಗುತ್ತಿರುವುದರಿಂದ ಒಂದೇ ಪ್ರದೇಶದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿ ಅಪಾಯ ತಂದೊಡ್ಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಶಸ್ತ್ರಚಿಕಿತ್ಸೆಗೆ ₹980

ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಪಾಲಿಕೆ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ₹84.92 ಲಕ್ಷ ವೆಚ್ಚಮಾಡಿದೆ. ಪ್ರತಿ ನಾಯಿಗೆ ₹980 ಖರ್ಚಾಗುತ್ತದೆ.

2018–19ರಲ್ಲಿ 2,901 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಇದಕ್ಕಾಗಿ ₹28.42 ಲಕ್ಷ ಖರ್ಚಾಗಿದೆ. 2019–21ರ ಅವಧಿಯಲ್ಲಿ 3,067 ನಾಯಿಗಳಿಗಾಗಿ ₹30.05 ಲಕ್ಷ ಮತ್ತು 2020ರ ಏಪ್ರಿಲ್‌ನಿಂದ ಈ ವರ್ಷದ ಜನವರಿ ಅಂತ್ಯದವರೆಗೆ 2,802 ನಾಯಿಗಳಿಗೆ  ₹27.45 ಲಕ್ಷ ವೆಚ್ಚವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು