ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸಾವಿರ ಕೋಟಿ ಬಜೆಟ್‌ನಲ್ಲಿ ಸರ್ವರಿಗೂ ಪಾಲು

ಸಾವಿರ ಕೋಟಿ ದಾಟಿದ ಬಜೆಟ್‌ ಗಾತ್ರ: ₹8ಲಕ್ಷ ಉಳಿತಾಯ ಬಜೆಟ್
Last Updated 24 ಮಾರ್ಚ್ 2023, 5:47 IST
ಅಕ್ಷರ ಗಾತ್ರ

ಧಾರವಾಡ: ಬರಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಡಳಿತಾರೂಢ ಬಿಜೆಪಿ ಪಕ್ಷವು 2023–24ನೇ ಸಾಲಿಗೆ ₹1138 ಕೋಟಿ ಬಜೆಟ್ ಮತ್ತು ₹1041ಕೋಟಿಯ ನೀರಿನ ಬಜೆಟ್‌ನ್ನು ಗುರುವಾರ ಮಂಡಿಸಿತು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ವಾರ್ಡ್ ಅಭಿವೃದ್ಧಿಗೆ ₹75ಲಕ್ಷ, ಪಾಲಿಕೆ ವ್ಯಾಪ್ತಿಯ 51 ಹಳ್ಳಿಗಳ ಅಭಿವೃದ್ಧಿಗೆ ₹5ಕೋಟಿ, ಪೌರ ಕಾರ್ಮಿಕರು ಮತ್ತು ಆಟೊ, ಟಿಪ್ಪರ್ ಚಾಲಕರಿಗೆ ₹75ಲಕ್ಷದ ಆರೋಗ್ಯ ವಿಮೆ, ₹2ಕೋಟಿ ವೆಚ್ಚದಲ್ಲಿ ತಿನಿಸು ಕಟ್ಟೆ, ಉದ್ಯಾನಗಳ ಅಭಿವೃದ್ಧಿ, ಮಹಿಳಾ ಸದಸ್ಯರಿಗೆ ಹೆಚ್ಚುವರಿ ₹5ಲಕ್ಷ, ಮಹಿಳೆಯರಿಗಾಗಿ ಫ್ರಾನ್ಸ್ ಮಾದರಿಯ ಗುಲಾಬಿ ಶೌಚಾಲಯ, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರಿಗೆ ಹಲವು ಯೋಜನೆಗಳು, ಪತ್ರಕರ್ತರ ಆರೋಗ್ಯ ವಿಮೆಗೆ ₹25ಲಕ್ಷ, ಆಟೊ ಚಾಲಕರು, ಸಂಘ ಸಂಸ್ಥೆಗಳು ಹೀಗೆ ಎಲ್ಲಾ ವರ್ಗವನ್ನು ತಲುಪುವ ಪ್ರಯತ್ನ ಬಜೆಟ್‌ನಲ್ಲಿ ಮಾಡಲಾಗಿದೆ.

ಪಾಲಿಕೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ₹1ಸಾವಿರ ಕೋಟಿ ಮೀರಿದ ಬಜೆಟ್‌ ಮಂಡಿಸಿದ ದಾಖಲೆಯನ್ನು ಮೇಯರ್ ಈರೇಶ ಅಂಚಟಗೇರಿ ನೇತೃತ್ವದ ತಂಡ ದಾಖಲಿಸಿತು. ಸಾರ್ವಜನಿಕರಿಗೆ ಯಾವುದೇ ಹೊಸ ತೆರಿಗೆ ವಿಧಿಸದೇ, ವಾಣಿಜ್ಯ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವ ಮೂಲಕ ತೆರಿಗೆ ನಿರ್ಧಾರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಾನಂದ ಮೆಣಸಿನಕಾಯಿ ಅವರು ₹8ಲಕ್ಷ ಉಳಿತಾಯ ಬಜೆಟ್‌ ಅನ್ನು ಸಭೆಗೆ ಗುರುವಾರ ಮಂಡಿಸಿದರು.

ರಾಜ್ಯದಲ್ಲಿರುವ ಮಹಾನಗರಗಳಲ್ಲೇ ಎರಡನೇ ಅತಿಹೆಚ್ಚು ಜನಸಂಖ್ಯೆ ಇರುವ ಹುಬ್ಬಳ್ಳಿ– ಧಾರವಾಡದ ಜನರ ಮನಗೆಲ್ಲುವ ಅಂಶಗಳ ಜತೆಗೆ, ಆದಾಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಧಾರವಾಡಕ್ಕೆ ತುಸು ಹೆಚ್ಚೇ ಅನುದಾನ ನೀಡುವ ಮೂಲಕ, ಈರೇಶ ಅಂಚಟಗೇರಿ ತವರಿನ ಜನರ ಮನಮೆಚ್ಚಿಸುವ ಪ್ರಯತ್ನ ನಡೆಸಿದ್ದಾರೆ.

‘ನಮ್ಮ ಯೋಜನೆ ನಿಮ್ಮ ಆದ್ಯತೆ’ ಎಂಬ ಘೋಷವಾಕ್ಯದ ಬಜೆಟ್‌ನಲ್ಲಿ ಪಾಲಿಕೆಯ ವ್ಯವಸ್ಥೆಗೆ ಆಧುನಿಕ ಸ್ಪರ್ಶ ನೀಡುವ ಯತ್ನ ನಡೆಸಿದ್ದಾರೆ. ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಮೊದಲ ಬಾರಿಗೆ ಪಡೆಯುವವರಿಗೆ 30 ದಿನಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ‘ಮನೆ ಬಾಗಿಲಿಗೆ ಆಡಳಿತ’ ವ್ಯವಸ್ಥೆ ಘೋಷಿಸಲಾಗಿದೆ. ಪಾಲಿಕೆಯ ಎಲ್ಲಾ ಸಿಬ್ಬಂದಿಗೂ ಕಂಪ್ಯೂಟರ್‌ ಸೌಲಭ್ಯ ಹಾಗೂ ಆನ್‌ಲೈನ್ ಮೂಲಕವೇ ಕಡತ ವಿಲೇವಾರಿ, ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳಿಗೆ ಗುರಿ ವಿಧಿಸುವ ಹಾಗೂ ಗುರಿ ಸಾಧಿಸಿದವರಿಗೆ ಪುರಸ್ಕಾರ ಮತ್ತು ಉತ್ತೇಜನ ನೀಡುವ ಆಡಳಿತ ಸುಧಾರಣಾ ಕ್ರಮಗಳೂ ಬಜೆಟ್‌ನಲ್ಲಿವೆ.

ಕಟ್ಟಡ ಪರವಾನಗಿ ಪಡೆದು ನಂತರ ಮುಕ್ತಾಯ ಪ್ರಮಾಣಪತ್ರ ಪಡೆಯದವರಿಗಾಗಿ ದಂಡ ಸಹಿತ ಪ್ರಮಾಣ ಪತ್ರ ಪಡೆಯಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಪ್ರಸ್ತಾವ ಬಜೆಟ್‌ನಲ್ಲಿದೆ.

ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಹಣ: ಪ್ರತಿ ವಾರ್ಡ್‌ಗಳ ಅಭಿವೃದ್ಧಿಗೆ 82 ಸದಸ್ಯರಿಗೆ ತಲಾ ₹75ಲಕ್ಷ, ನಾಮನಿರ್ದೇಶಿತ ಐದು ಸದಸ್ಯರಿಗೆ ತಲಾ ₹25ಲಕ್ಷ, ಮೇಯರ್‌ಗೆ ₹3ಕೋಟಿ, ಉಪಮೇಯರ್‌ ಅವರಿಗೆ ₹1.5ಕೋಟಿ ಹಾಗೂ ಪಾಲಿಕೆ ಆಯುಕ್ತರಿಗೆ ₹5ಕೋಟಿ ಅನುದಾನ ಮೀಸಲಿರಿಸಲಾಗಿದೆ.

ವಿಶೇಷ ನೇಮಕಾತಿಯಡಿ ಪೌರ ಕಾರ್ಮಿಕರ ನೇಮಕಕ್ಕೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 134 ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ತಾತ್ಕಾಲಿಕ ನೇಮಕಾತಿ ಪಟ್ಟಿ ಹೊರಡಿಸಲಾಗಿದೆ. ಉಳಿದ 206 ಪೌರಕಾರ್ಮಿಕರ ಕಾಯಂಗೆ ಕ್ರಮ ಕೈಗೊಳ್ಳುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಅವಳಿ ನಗರದಲ್ಲಿರುವ ತ್ಯಾಜ್ಯ ಸಂಗ್ರಹಣಾ ಕೇಂದ್ರದಲ್ಲಿ ಆಗಾಗ ಉಂಟಾಗುವ ಅಗ್ನಿ ದುರಂತ ತಪ್ಪಿಸಲು ಎನ್‌ಟಿಪಿಸಿ ಕಂಪನಿಯಿಂದ ಒಣತ್ಯಾಜ್ಯದಿಂದ ಟೆರಿಫೈಡ್ ಚಾರ್‌ಕೋಲ್ ತಯಾರಿಕಾ ಘಟಕ ನಿರ್ಮಾಣಕ್ಕೆ ₹70ಕೋಟಿ ಮೀಸಲಿಡಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿ ತಲಾ ₹7 ಸಾವಿರ ನೀಡುವಂತೆ ಯೋಜನೆಯನ್ನು ಬಜೆಟ್‌ನಲ್ಲಿ ರೂಪಿಸಲಾಗಿದೆ. ಇದನ್ನು ಆಯಾ ಪಾಲಿಕೆ ಸದಸ್ಯರ ವಿವೇಚನೆಗೆ ಬಿಟ್ಟಿದ್ದು, ಇದಕ್ಕಾಗಿ ಪ್ರತಿ ವಾರ್ಡ್‌ಗೆ ₹2ಲಕ್ಷ ಅನುದಾನ ಮೀಸಲಿಡಲಾಗಿದೆ.

ಬಜೆಟ್‌ ಮಂಡಣೆ ನಂತರ ನಡೆದ ಚರ್ಚೆಯಲ್ಲಿ ಕೇಳಿಬಂದ ಕೆಲವೊಂದು ಸಲಹೆಗಳನ್ನು ಒಳಗೊಂಡ ತಿದ್ದುಪಡಿ ಸಹಿತ ಬಜೆಟ್‌ ಅನ್ನು ಸರ್ವಾನುಮತದಿಂದ ಸಭೆ ಅಂಗೀಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT