ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ, ಶಿರಸಿಯಲ್ಲಿ ಧಾರಾಕಾರ ಮಳೆ

Published 14 ಮೇ 2024, 15:53 IST
Last Updated 14 ಮೇ 2024, 15:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆಯಾಯಿತು. ಮಳೆಯಿಂದ ಉಂಟಾದ ತಂಪಾದ ವಾತಾವರಣ ಜನರಿಗೆ ಖುಷಿ ಕೊಟ್ಟಿತು.

ಧಾರವಾಡ ನಗರ ಸೇರಿ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್, ಬ್ಯಾಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಮಳೆಯಿಂದ ಹುಬ್ಬಳ್ಳಿಯ ಸ್ಟೇಷನ್ ರಸ್ತೆ, ಕೊಯಿನ್ ರಸ್ತೆ ಜಲಾವೃತಗೊಂಡಿತು. ಜನರು ಅದರಲ್ಲೇ ಪ್ರಯಾಸಪಟ್ಟು ಸಾಗಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕಾರವಾರ, ಅಂಕೋಲಾ, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಕುಮಟಾ ಭಾಗದಲ್ಲಿ ಗುಡುಗು ಸಹಿತ ಮಳೆಯಾಯಿತು. ಮೂರು ದಿನಗಳಿಂದ ಮೋಡದ ವಾತಾವರಣವಿತ್ತು. ಈ ಮಳೆಯಿಂದ ತೋಟ ಸಾಲು, ಬಾಳೆ ಮತ್ತು ಹೊಲಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿತ್ತು.

ಶಿರಸಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಅರ್ಧ ಗಂಟೆ ಗುಡುಗು, ಮಿಂಚಿನೊಂದಿಗೆ ಬಿರುಸಿನ ಮಳೆ ಸುರಿಯಿತು. ನಗರದ ಸಹ್ಯಾದ್ರಿ ಕಾಲೊನಿಯಲ್ಲಿ 5ಕ್ಕೂ ಹೆಚ್ಚು ಮರಗಳು ಬುಡ ಸಮೇತ ಧರೆಗೆ ಉರುಳಿದವು.ಘಟ್ಟದ ಕೆಳಗಿನ ತಾಲ್ಲೂಕಾದ ಅಂಕೋಲಾದಲ್ಲಿಯೂ ಹದವಾಗಿ ಮಳೆ ಸುರಿದಿದೆ. 

ಬೆಳಗಾವಿ ತಾಲ್ಲೂಕು, ಬೈಲಹೊಂಗಲ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ ತಾಲ್ಲೂಕಿನ ವಿವಿಧೆಡೆ ಒಂದು ಗಂಟೆ ಹದವಾದ ಮಳೆ ಸುರಿಯಿತು. ನಿಪ್ಪಾಣಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿ, ಮಳೆಗೆ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದವು. ಸ್ಥಳೀಯ ವಿದ್ಯಾಮಂದಿರ ಪ್ರೌಢಶಾಲೆ ಹಾಗೂ ಸಿಟಿ ಮುನ್ಸಿಪಲ್ ಕೌನ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ತಗಡಿನ ಶೀಟುಗಳು ನೂರಾರು ಅಡಿ ಹಾರಿ ಪಕ್ಕದ ಮನೆಗಳ ಮೇಲೆ, ವಾಹನಗಳ ಮೇಲೆ ಬಿದ್ದು ಜಖಂಗೊಂಡು ಅಪಾರ ಹಾನಿಯಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT