ಭಾನುವಾರ, ಸೆಪ್ಟೆಂಬರ್ 15, 2019
27 °C
‘ಆವರಣ–50 ಮತ್ತು ಕಥೆ ಕಾದಂಬರಿಗಳ ಹಬ್ಬ’ ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಎಲ್.

ಕುರಾನ್‌ನ ಪೂಜಾ ವಿಧಾನ ಅನುಸರಿಸಿದರೆ ಮಾತ್ರ ಮುಸ್ಲಿಮರ ಸುಧಾರಣೆ: ಭೈರಪ್ಪ

Published:
Updated:
Prajavani

ಧಾರವಾಡ: ‘ಕುರಾನ್ ಮತ್ತು ಹದೀಸ್‌ನಲ್ಲಿರುವ ದೇವರ ಪೂಜಾ ವಿಧಾನವನ್ನು ಅನುಸರಿಸಿದರೆ ಮಾತ್ರ ಮುಸ್ಲಿಮರು ಸುಧಾರಿಸುತ್ತಾರೆ. ಇಲ್ಲವಾದಲ್ಲಿ ಅಂತರಂಗದಲ್ಲಿ ಕ್ರೌರ್ಯ ಇದ್ದೇ ಇರುತ್ತದೆ’ ಎಂದು ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.

ಎಸ್‌.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಸಾಹಿತ್ಯ ಪ್ರಕಾಶನ ಹಾಗೂ ಸ್ನೇಹ ಪ್ರತಿಷ್ಠಾನವು ಭಾನುವಾರ ಆಯೋಜಿಸಿದ್ದ ‘ಆವರಣ–50 ಮತ್ತು ಕಥೆ ಕಾದಂಬರಿಗಳ ಹಬ್ಬ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಇಸ್ಲಾಂ ಆರಂಭದಿಂದ ಹೇಗಿದೆಯೋ, ಈಗಲೂ ಬಹುಸಂಖ್ಯಾತರು ಅದನ್ನೇ ಅನುಸರಿಸುತ್ತಿದ್ದಾರೆ. ಅಲ್ಲಿ ಪರಿವರ್ತನೆಗೆ ಅವಕಾಶವಿಲ್ಲ. ನೂರಾರು ವರ್ಷಗಳ ಕಾಲ ಆಳಿದ ಮುಸ್ಲಿಂ ದೊರೆಗಳ ಅಧರ್ಮದ ಹೋರಾಟದ ವಿರುದ್ಧ ಧರ್ಮಶಾಸ್ತ್ರ ಅನುಸರಿಸುವ ನಮ್ಮ ರಾಜರು ಸೋತರು. ಅವರ ಗುಲಾಮರಾದರು. ಸುಮಾರು 35ಸಾವಿರ ದೇವಸ್ಥಾನಗಳು ನಾಶವಾದವು. ಆದರೆ ಅವರ ಕುರಿತು ಮೃದು ಧೋರಣೆ ಹೊಂದಿದವರು ಇತಿಹಾಸವನ್ನೇ ತಿರುಚಿ ಹೇಳಲು ಹೊರಟಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಔರಂಗಜೇಬ್ ಕಟ್ಟಾ ಇಸ್ಲಾಂ ಅನುಯಾಯಿಯಾಗಿದ್ದ. ಆತನ ಕ್ರೌರ್ಯವೂ ಅಷ್ಟೇ ಭೀಕರವಾಗಿತ್ತು. ಆದರೆ ಜವಾಹರಲಾಲ್ ನೆಹರೂ ಅವರು ಬರೆದ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಆತನ ಕುರಿತು ಸಣ್ಣ ಟಿಪ್ಪಣಿ ನೀಡಿ, ಆತ ಒಳ್ಳೆಯ ಆಡಳಿತಗಾರ ಎಂದು ಹೇಳಿ ತೇಲಿಸಿದ್ದಾರೆ. ಹೀಗೆ ಇತಿಹಾಸವನ್ನು ತಪ್ಪಾಗಿ ತಿಳಿಸುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದರು.

‘ಇತಿಹಾಸವನ್ನು ಅರಿತು, ವರ್ತಮಾನದಲ್ಲಿ ಬದುಕಿ, ಭವಿಷ್ಯವನ್ನು ನಾವು ಕಟ್ಟಬೇಕು. ಹಿಂದೂಗಳಿಗೆ ರಾಮಾಯಣ ಹಾಗೂ ಮಹಾಭಾರತದ ಕಥೆಗಳು, ಉಪಕಥೆಗಳೇ ಧರ್ಮಶಾಸ್ತ್ರಗಳು. ಸ್ವರ್ಗಕ್ಕೆ ಹೋಗುವ ಅರ್ಹತೆ ಇರುವ ಧರ್ಮರಾಯ ಯುದ್ಧದಲ್ಲಿ ಹೇಳಿದ ಒಂದು ಸುಳ್ಳಿನಿಂದಾಗಿ ನರಕಕ್ಕೆ ಹೋಗುತ್ತಾನೆ. ಬೌದ್ಧ, ಜೈನ ಧರ್ಮಗಳಿಂದಲೂ ಒಳಿತಾದದ್ದನ್ನು ಹಿಂದೂ ಧರ್ಮ ಅಳವಡಿಸಿಕೊಂಡಿದೆ. ಕ್ರೈಸ್ತ ಧರ್ಮದಲ್ಲಿ ಪ್ರೊಟೆಸ್ಟೆಂಟ್ ಹುಟ್ಟಿದ್ದರಿಂದ ಆ ದೇಶಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದು, ರಾಷ್ಟ್ರಗಳು ಶ್ರೀಮಂತವಾಗಿವೆ. ಪರಿವರ್ತನೆ ಇದ್ದಲ್ಲಿ ಬದಲಾವಣೆಗೆ ಅವಕಾಶವಿದೆ’ ಎಂದರು.

‘ಆವರಣ’ ಕಾದಂಬರಿ ಬಿಡುಗಡೆ ಸಂದರ್ಭದಲ್ಲೂ ಕೃತಿಯನ್ನು ಸರ್ಕಾರ ನಿಷೇಧಿಸಬಹುದು ಎಂಬ ಆತಂಕವಿತ್ತು. ಸಲ್ಮಾನ್ ರಶ್ದಿ ಅವರ ಕೃತಿಯನ್ನು ಆ ಸಂದರ್ಭದಲ್ಲೇ ನಿಷೇಧಿಸಲಾಗಿತ್ತು. ಹೀಗಾಗಿ ನ್ಯಾ. ರಾಮಾಜೋಯಿಸ್, ಡಾ. ಎಚ್.ಎಸ್.ದೊರೆಸ್ವಾಮಿ, ಅಶೋಕ ಹಾರನಹಳ್ಳಿ ಇವರಿಂದ ಓದಿಸಿ ಕಾನೂನು ಅಭಿಪ್ರಾಯ ಪಡೆದೆ. ಇವರು ಓದಿದ್ದಾರೆ ಎಂದು ಪುಸ್ತಕದಲ್ಲಿ ಪ್ರಕಟಿಸಿದ್ದರಿಂದ ಸರ್ಕಾರಕ್ಕೆ ಅದು ಎಚ್ಚರಿಕೆಯಾಯಿತು’ ಎಂದು ಭೈರಪ್ಪ ಅವರು ಹೇಳಿದರು.

ಪಟೇಲ್‌ ಪ್ರಧಾನಿ ಪಟ್ಟ ತ್ಯಜಿಸಿದರೇಕೆ?

‘ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿದ್ದ 12 ಜನರಲ್ಲಿ ಬಹುಮತ ಸರ್ದಾರ್‌ ವಲ್ಲಭ್‌ ಭಾಯಿ ಪಟೇಲ್ ಅವರ ಪರವಾಗಿಯೇ ಇತ್ತು. ಆದರೆ ಮಹಾತ್ಮಾ ಗಾಂಧೀಜಿ ಅವರು ರಾಜೀನಾಮೆ ನೀಡಿ ಎಂದಾಕ್ಷಣ ನೀಡಿದ್ದಕ್ಕೆ ಅವರ ಮೇಲೆ ಇದ್ದ ಗೌರವ ಕಾರಣವಲ್ಲ, ಬದಲಿಗೆ ಹಿಂದೆ ಸುಭಾಸಚಂದ್ರ ಬೋಸ್ ಅವರಿಗೆ ಮಾಡಿದ ತಂತ್ರವೇ ತನಗೂ ಆಗುವುದು ಎಂಬ ಮುಂದಾಲೋಚನೆಯಿಂದ’ ಎಂದು ಡಾ. ಭೈರಪ್ಪ ಹೇಳಿದರು.

‘ಬೋಸ್ ಅವರು ಮೊದಲ ಬಾರಿಗೆ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ, ಸ್ವಾತಂತ್ರ್ಯ ಪಡೆಯುವುದು ಅಹಿಂಸೆಯಿಂದ ಸಾಧ್ಯವಿಲ್ಲ ಎಂದು ನಂಬಿದ್ದರು. ಎರಡನೇ ಬಾರಿಗೆ ಭಾರೀ ಬಹುಮತದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದಾಗ, ಕ್ರಾಂತಿಯ ಕಹಳೆ ಊದಿದರು. ಇದನ್ನು ಗಾಂಧೀಜಿ ಸಹಿಸಲಿಲ್ಲ. ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯ ಎಲ್ಲಾ ಸದಸ್ಯರನ್ನೂ ಒಬ್ಬೊಬ್ಬರಾಗಿ ಕರೆದು, ಅವರಿಂದ ರಾಜೀನಾಮೆ ಕೊಡಿಸಿದರು. ಕೊನೆಗೆ ಉಳಿದ ಬೋಸ್‌, ಗಾಂಧೀ ಇರುವವರೆಗೂ ಇದು ಸಾಧ್ಯವಿಲ್ಲ ಎಂದು ತಾವೇ ರಾಜೀನಾಮೆ ನೀಡಿದ್ದರು.  ಇದನ್ನು ಅರಿತಿದ್ದ ಪಟೇಲ್, ಒಂದು ಮತವೂ ಸಿಗದ ನೆಹರೂಗೆ ಪ್ರಧಾನಿ ಪಟ್ಟ ಬಿಟ್ಟುಕೊಟ್ಟರು’ ಎಂದರು.

***

ಸರ್ಕಾರದ ಬಾಲಬಡಿಯುವ, ಬಾವುಟಗಳನ್ನು ಹಿಡಿದು ಪ್ರತಿಭಟನೆ ಮಾಡುವ ಸಾಹಿತಿಗಳಿಂದ ಬದಲಾವಣೆ ಸಾಧ್ಯವಿಲ್ಲ. ಸಾಹಿತಿಯಾದವನು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ತನ್ನ ಭಾವನೆಗಳನ್ನು ಅಭಿವ್ಯಕ್ತಿಸಬೇಕು. ಬರೆಯಬೇಕು. ಸತ್ಯ ಹೇಳಬೇಕು. ಪ್ರಾಮಾಣಿಕನಾಗಿರಬೇಕು. ಅಂದಾಗ ಮಾತ್ರ ಬದಲಾವಣೆ ಸಾಧ್ಯ

–ಡಾ.ಎಸ್.ಎಲ್.ಭೈರಪ್ಪ, ಕಾದಂಬರಿಕಾರ

Post Comments (+)