ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಡಿ ಮನೆಗೆ ಮನಸೋತ ವಿದೇಶಿ ಪೈಲ್ವಾನರು

ಧಾರವಾಡದಲ್ಲಿ ಅಜರ್‌ಬೈಜಾನ್‌ ದೇಶದ ಮಹಿಳಾ ಕುಸ್ತಿಪಟುಗಳ ಸಾಂಪ್ರದಾಯಿಕ ಅಭ್ಯಾಸ
Last Updated 25 ಫೆಬ್ರುವರಿ 2020, 8:05 IST
ಅಕ್ಷರ ಗಾತ್ರ

ಧಾರವಾಡ: ಸಾಂಸ್ಕೃತಿಕ ನಗರಿಯ ಕಿಲ್ಲಾದಲ್ಲಿ ಜ್ಯೋತಿ ತಾಲೀಮು ಗರಡಿ ಮನೆಯಿದೆ. ಅಲ್ಲಿಗೆ ಅಜರ್‌ ಬೈಜಾನ್‌ನಿಂದ ಬಂದ ಮಹಿಳಾ ಕುಸ್ತಿ ಪಟುಗಳು ಅಭ್ಯಾಸ ಮಾಡಲು ಬರುತ್ತಾರೆ ಎನ್ನುವ ಸುದ್ದಿ ಹೊರಬಿದ್ದ ಕ್ಷಣದಿಂದಲೇ ಅಲ್ಲಿ ಕುತೂಹಲ ಮನೆ ಮಾಡಿತ್ತು. ಸಾಂಪ್ರದಾಯಿಕ ಶೈಲಿಯ ಗರಡಿ ಮನೆಯಲ್ಲಿವಿದೇಶಿ ಪೈಲ್ವಾನರ ಅಭ್ಯಾಸ ಹೇಗಿರುತ್ತದೆ ಎನ್ನುವ ಕೌತುಕ ಎಲ್ಲರದ್ದಾಗಿತ್ತು.

ಅಜರ್‌ ಬೈಜಾನ್‌ನ ಜಿಯಾಲ್‌ ನಾಡಿಗ್ಜ್‌ ಮತ್ತುಸಬೀರಾ ಅಲಿಯೆವಾ ಅಲಹವರ್ಡಿ ಗರಡಿ ಮನೆಯೊಳಗೆ ಹೋಗುತ್ತಿದ್ದಂತೆ ನೇರವಾಗಿ ಅಖಾಡದೊಳಗೆ ನುಗ್ಗಲು ಮುಂದಾದರು. ಆಗ ಗರಡಿ ಮನೆಯ ಸಿಬ್ಬಂದಿ ಕಾಲು ತೊಳೆದುಕೊಂಡೇ ಅಖಾಡಕ್ಕೆ ಇಳಿಯಬೇಕು,ಅದು ಇಲ್ಲಿಯ ಸಂಪ್ರದಾಯ ಎಂದು ಹೇಳಿದರು. ಇದಕ್ಕೆ ಇಬ್ಬರೂ ಕೈ ಮುಗಿದು ಮುಗುಳ್ನಕ್ಕರು.

ಬಳಿಕ ಕಾಲು ತೊಳೆದುಕೊಂಡು ಅಖಾಡದ ಮಣ್ಣಿಗೆ ನಮಸ್ಕಾರ ಮಾಡಿ, ಭಾರತದ ಕುಸ್ತಿಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿರುವಂತೆ ಉಸ್ತಾದ್‌ಗೆ (ಕೋಚ್‌) ನಮಸ್ಕಾರ ಮಾಡಿ ಅಭ್ಯಾಸ ಆರಂಭಿಸಿದರು. ಚಂಡೀಗಡದಲ್ಲಿ ತರಬೇತಿ ಪಡೆಯುತ್ತಿರುವ ಈ ಇಬ್ಬರೂ ಮಹಿಳಾ ಪೈಲ್ವಾನರು ಅಲ್ಲಿ ಮ್ಯಾಟ್‌ ಮೇಲೆ ಮಾತ್ರ ಅಭ್ಯಾಸ ಮಾಡುತ್ತಾರೆ. ಅವರಿಗೆ ಮಣ್ಣಿನ ಮೇಲೆ, ಗರಡಿ ಮನೆಗಳಲ್ಲಿ ಅಭ್ಯಾಸದ ಅನುಭವವಿಲ್ಲ. ಆದ್ದರಿಂದ ಅವರು ಹೇಗೆ ಅಭ್ಯಾಸ ಮಾಡುತ್ತಾರೆ ಎನ್ನುವುದು ಗರಡಿ ಮನೆಯ ಸಿಬ್ಬಂದಿ ಕೂಡ ಕುತೂಹಲದಿಂದ ನೋಡುತ್ತಿದ್ದರು.

ಪಂಜಾಬ್‌ನ ಚಂಡೀಗಡದಲ್ಲಿ ಕುಸ್ತಿ ಕೋಚ್‌ ಹಾಗೂ ಪೊಲೀಸ್‌ ಇಲಾಖೆಯಲ್ಲಿ ಡಿ.ಎಸ್‌.ಪಿ. ಆಗಿರುವ ರಾಕೇಶ ಪಾಟೀಲ ವಿದೇಶಿ ಪೈಲ್ವಾನರಿಗೆ ಸಾಂಪ್ರದಾಯಿಕ ಕುಸ್ತಿಯ ಪಟ್ಟುಗಳನ್ನು ಹೇಳಿಕೊಟ್ಟರು. ಅಂಕ ಗಳಿಸುವ ವಿಧಾನ, ಎದುರಾಳಿಯನ್ನು ಮಣಿಸಲು ಬೇಕಾದ ಕೌಶಲ ಹೀಗೆ ಕೌಶಲಗಳನ್ನು ತಿಳಿಸಿಕೊಟ್ಟರು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ 68 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವಜಿಯಾಲ್‌ ನಾಗಿಡ್ಜ್‌ ಮತ್ತು 75 ಕೆ.ಜಿ. ವಿಭಾಗದ ಯುರೋಪಿಯನ್‌ ಗೇಮ್ಸ್‌ನಲ್ಲಿ ಪದಕ ಜಯಿಸಿರುವ ಸಬೀರಾ ಪಂಜಾಬ್‌ನ ಖುಸ್ಲಾ ಕುಸ್ತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಾರೆ. ಅವರಿಗೆ ರಾಕೇಶ ತರಬೇತಿ ನೀಡುತ್ತಾರೆ.

ಸುಮಾರು ಒಂದು ತಾಸು ಅಭ್ಯಾಸ ಮಾಡಿದ ಬಳಿಕ ಗರಡಿ ಮನೆಯ ಸಿಬ್ಬಂದಿ ಜೊತೆ ಫೋಟೊ ತೆಗೆಸಿಕೊಂಡರು. ಅಖಾಡದಿಂದ ಹೊರಬರುವಾಗ ಮಣ್ಣಿಗೆ ಮತ್ತು ಕೋಚ್‌ ಕಾಲಿಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು.

ಹಸಿ ತರಕಾರಿಯೇ ಆಹಾರ

ಕುಸ್ತಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಾಗ ವಿದೇಶಿ ಪೈಲ್ವಾನರು ಹಸಿ ತರಕಾರಿ ಮತ್ತು ಹಾಲು ಬಿಟ್ಟು ಬೇರೆ ಏನನ್ನೂ ತಿನ್ನುವುದಿಲ್ಲ.

ಆಹಾರ ಪದ್ಧತಿ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಉತ್ತರ ಭಾರತದ ಹವಾಗುಣಕ್ಕೂ ಇಲ್ಲಿಗೂ ಸಾಕಷ್ಟು ವ್ಯತ್ಯಾಸವಿದೆ. ಆದ್ದರಿಂದ ಸ್ಪರ್ಧೆಯಿರುವ ಎರಡು ದಿನಗಳ ಮೊದಲು ಹಸಿ ತರಕಾರಿ ಮಾತ್ರ ತಿನ್ನುತ್ತೇನೆ’ ಎಂದು ಜಿಯಾಲ ಹೇಳಿದರು.

ಕುಸ್ತಿ ಆಡಲು ಮೊದಲ ಬಾರಿಗೆ ಭಾರತಕ್ಕೆ ಬಂದಿರುವ ಸಬೀರಾ ‘ಐ ಲವ್‌ ಇಂಡಿಯಾ, ನೈಸ್‌ ಪೀಪಲ್‌’ ಎಂದು ತುಟಿಯಂಚಿನಲ್ಲಿ ನಗೆ ಅರಳಿಸಿದರು.

ಹೋದ ವರ್ಷ ಬೆಳಗಾವಿಯಲ್ಲಿ ನಡೆದಿದ್ದ ಕುಸ್ತಿ ಹಬ್ಬದಲ್ಲಿ ಜಿಯಾಲ ಭಾರತದ ರಿತು ಮಲೀಕ್ ಎದುರು ಗೆಲುವು ಪಡೆದಿದ್ದರು. ಈ ಬಾರಿಯೂ ಇಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಕಾಯುತ್ತಿದ್ದಾರೆ.

‘ಮಹಿಳಾ ಕುಸ್ತಿಪಟು ಮಣ್ಣಿನಅಖಾಡದಲ್ಲಿ ಇಳಿದರೆ ತಪ್ಪೇನು?’

ಕುಸ್ತಿ ಪರಂಪರೆಯ ಪ್ರಕಾರ ಮಹಿಳಾ ಕುಸ್ತಿಪಟುವನ್ನು ಅಖಾಡದಲ್ಲಿ ಹೋಗಲು ಬಿಡುವುದಿಲ್ಲ. ಆದರೆ, ಈಗ ಕಾಲ ಸಾಕಷ್ಟು ಬದಲಾಗಿದೆ. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದು ಸಾಕ್ಷಿ ಮಲೀಕ್‌. ಅವಳೂ ಹೆಣ್ಣಲ್ಲವೇ? ಹೆಣ್ಣು ಮಣ್ಣಿನ ಅಖಾಡದಲ್ಲಿ ಅಭ್ಯಾಸ ಮಾಡಿದರೆ ತಪ್ಪೇನು’ ಎಂದು ಕೋಚ್‌ ರಾಕೇಶ ಪಾಟೀಲ ಪ್ರಶ್ನಿಸಿದರು.

‘ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಭರವಸೆ ಇರುವುದೇ ಹೆಣ್ಣು ಮಕ್ಕಳ ಮೇಲೆ. ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು ಪದಕ ಗೆಲ್ಲಲಿಲ್ಲವೇ? ಈಗ ಸ್ಪರ್ಧೆ ಹೆಚ್ಚಿರುವ ಕಾರಣ ಸಾಂಪ್ರದಾಯಿಕತೆಯನ್ನೂ ಮೀರಿ ನಾವು ಬೆಳೆಯಬೇಕು. ಮ್ಯಾಟ್‌ ಕುಸ್ತಿ ಮತ್ತು ಮಣ್ಣಿನ ಅಖಾಡ ಎರಡರಲ್ಲಿಯೂ ಅಭ್ಯಾಸದ ಅನುಭವ ದೊರಕಿಸಿಕೊಡಬೇಕು. ಆಗ ಕುಸ್ತಿಯಲ್ಲಿ ಭಾರತ ಬಲಿಷ್ಠವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT