ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಳುವು: ₹9.50 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಆರೋಪಿ ಬಂಧನ

Published 12 ಏಪ್ರಿಲ್ 2024, 15:43 IST
Last Updated 12 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗೋಕುಲ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಮಹಿಳೆಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿ, ₹9.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಕುಪ್ಪಂ ನಿವಾಸಿ ಸಂಧ್ಯಾ ಬಂಧಿತ ಆರೋಪಿ. ಬಸ್‌ ನಿಲ್ದಾಣದ ಪ್ಲಾಟ್‌ಫಾರ್ಮ್‌ 4ರ ಬಳಿ ಜನವರಿ 5ರಂದು ಮಹಿಳೆ ಬಸ್‌ ಹತ್ತುವಾಗ, ಆರೋಪಿ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 139 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಳು. ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿಲ್ದಾಣದ ಬಳಿಯಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ, ಆರೋಪಿಯ ಮುಖಚಹರೆ ಪತ್ತೆಯಾಗಿತ್ತು. ತಮಿಳುನಾಡಿನವಳು ಎನ್ನುವ ಖಚಿತ ಮಾಹಿತಿ ಆಧರಿಸಿದ ಇನ್‌ಸ್ಪೆಕ್ಟರ್‌ ಪ್ರವೀಣ ನೀಲಮ್ಮನವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಅಪಘಾತ; ಚಾಲಕ ಸಾವು: ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಂಗಮ ಪಾರ್ಕ್ ಬಳಿಯ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಸಾಧಿಕ ಅಣ್ಣಿಗೇರಿ(21) ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಮಹ್ಮದ್‌ಸೋಹೆಲ್, ಮುಸ್ತುಮ್‌, ಸೀರಾಜ್‌ ಮತ್ತು ತಯ್ಯಬ್‌ ಗಾಯಗೊಂಡವರು. ಗದಗ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಅವರಲ್ಲಿ ಚಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು: ಹುಬ್ಬಳ್ಳಿ ತಾಲ್ಲೂಕಿನ ತಾರಿಹಾಳ ಗ್ರಾಮದ ಬಸವರೇಶ್ವರ ನಗರದ ನಿವಾಸಿ ಸಿದ್ದರಾಯ ಗುಬ್ಬಿ ಅವರ ಮನೆ ಬಾಗಿಲಿನ ಬೀಗ ಮುರಿದು, ₹3.18 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ 260 ಗ್ರಾಂ ಬೆಳ್ಳಿಯ ಆಭರಣ ಕಳವು ಮಾಡಲಾಗಿದೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ನಾಪತ್ತೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ವಿದ್ಯಾನಗರದ ಅಮೃತ ಟಾಕೀಜ್‌ ಬಳಿಯ ವಿದ್ಯಾರ್ಥಿನಿಯೊಬ್ಬಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಕಡಿಮೆ ಅಂಕ ಗಳಿಸಿದ್ದರಿಂದ ಮನನೊಂದು ಮನೆಬಿಟ್ಟು ಹೋಗಿದ್ದಾಳೆ ಎಂದು ದೂರಿನಲ್ಲಿ ಪಾಲಕರು ತಿಳಿಸಿದ್ದಾರೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT