ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕೃಷಿ ಮೇಳ: ಎಲ್ಲೆಲ್ಲೂ ಸಿರಿಧಾನ್ಯ ತಿನಿಸುಗಳ ಘಮ

Published 10 ಸೆಪ್ಟೆಂಬರ್ 2023, 4:53 IST
Last Updated 10 ಸೆಪ್ಟೆಂಬರ್ 2023, 4:53 IST
ಅಕ್ಷರ ಗಾತ್ರ

ಧಾರವಾಡ: ಸಾಮೆ ಚಕ್ಲಿ, ನವಣಿ ನಿಪ್ಪಟ್ಟು, ರಾಗಿ ತುಪ್ಪದ ಉಂಡಿ, ಸಾಮೆ ಕೋಡಬೇಳೆ, ರಾಗಿ ಕುಕ್ಕಿಸ್‌, ಸಜ್ಜೆ ಕುಕ್ಕಿಸ್‌.. ಒಂದೇ ಎರಡೆ... ಸಿರಿಧಾನ್ಯಗಳ ತಿನಿಸುಗಳ ಘಮ ಈ ಬಾರಿಯ ಕೃಷಿ ಮೇಳದಲ್ಲಿ ಎಲ್ಲೆಲ್ಲೂ ಕಣ್ಮನ ಸೆಳೆಯುತ್ತಿದೆ. ಬಾಯಲ್ಲಿ ನೀರೂರಿಸುತ್ತಿದೆ.

ಕೃಷಿ ಮೇಳದ ಒಳ, ಹೊರಗಿನ ಮಳಿಗೆಗಳಲ್ಲಿ ಎಲ್ಲೆಲ್ಲೂ ಸಿರಿಧಾನ್ಯಗಳದ್ದೇ ಮಾತು. ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನ, ತಿನಿಸುಗಳದ್ದೇ ಕಾರುಬಾರು. ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ, ಆಹಾರ ಮತ್ತು ಘೋಷಣೆ ವಿಭಾಗ ಮತ್ತು ಆಹಾರ ಸಂಸ್ಕರಣಾ ಘಟಕಗಳು ಸಿರಿಧಾನ್ಯಗಳ ಬೇಕರಿ ತಿನಿಸುಗಳನ್ನು ಸಿದ್ಧಪಡಿಸಿವೆ. 

ಕೃಷಿ ಮೇಳ ಪ್ರವೇಶದ್ವಾರದ ಸಮೀಪದಲ್ಲೇ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಬಿ.ಟೆಕ್‌ (ಆಹಾರ ತಂತ್ರಜ್ಞಾನ) ಪದವಿ ಕಾರ್ಯಕ್ರಮದಡಿ 2019–23ನೇ ಸಾಲಿನ ವಿದ್ಯಾರ್ಥಿಗಳ ನಾಲ್ಕು ತಂಡ ’F.T (ಫುಡ್‌ ಟೆಕ್‌) ಅಡ್ಡ’ ಎಂಬ ಹೆಸರಿನಡಿ ಸಿರಿಧಾನ್ಯಗಳ ತಿನಿಸು, ಬೇಕರಿ ಉತ್ಪನ್ನ, ಚಿಪ್ಸ್‌, ಕಷಾಯದ ಪುಡಿ ತಯಾರಿಸಿದ್ದಲ್ಲದೆ, ಮಾರಾಟಕ್ಕಾಗಿ ತಮ್ಮದೇ ಶೈಲಿಯಲ್ಲಿ ಗ್ರಾಹಕರನ್ನು ಕರೆಯುತ್ತಿದ್ದಾರೆ. ‘ನಿಮ್ಮ ಮಕ್ಳಿಗೆ ಪ್ಯಾಟ್ಯಾಗಿನ ಬೇಕರಿ ಐಟಮ್ಸ್‌, ಫಾಸ್ಟ್‌ಫುಡ್‌ ಕೊಟ್ಟು ಆರೋಗ್ಯ ಹಾಳ್‌ಮಾಡ್‌ಬ್ಯಾಡ್ರಿ.... ನಮ್ಮ ಅಡ್ಡಕ್ಕ ಬರ‍್ರೀ... ಸಿರಿಧಾನ್ಯದ ತಿನಿಸು ತಿನ್ನಿಸರ‍್ರೀ....ಆರೋಗ್ಯ ಕಾಪಾಡ್ರೀ...’ ಎನ್ನುತ್ತ ಗ್ರಾಹಕರ ಸೆಳೆಯುತ್ತಿದ್ದಾರೆ.

‘ರಾಗಿ ಕಪ್‌ಕೇಕ್‌, ರಾಗಿ ಕುಕ್ಕಿಸ್‌, ಸಜ್ಜೆ ಕುಕ್ಕಿಸ್‌, ಸಾವೆ ಚಕ್ಲಿಗಳನ್ನು ₹50ಕ್ಕೆ ಒಂದು ಪ್ಯಾಕೇಟ್‌ನಂತೆ ಮಾರುತ್ತಿದ್ದಾರೆ. ಆರೋಗ್ಯ ವೃದ್ಧಿಗಾಗಿ ಸಕ್ಕರೆ ಬಳಸದೆ, ಗೋಧಿ, ಬೆಲ್ಲ, ಸಿರಿಧಾನ್ಯಗಳನ್ನು ಬಳಸಿದ್ದು ನಮ್ಮ ವಿಶೇಷ’ ಎನ್ನುತ್ತಾರೆ ವಿದ್ಯಾರ್ಥಿಗಳು.

ಸಿರಿಧಾನ್ಯಗಳಿಂದ ಆರೋಗ್ಯ ವೃದ್ಧಿ

ಸಿರಿಧಾನ್ಯಗಳು ಆರೋಗ್ಯವನ್ನು ಹೇಗೆ ಕಾಯಲಿದೆ ಎಂಬುದನ್ನು ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ಆಹಾರ ಸಂಸ್ಕರಣಾ ವಿಭಾಗದ ಸಿಬ್ಬಂದಿ  ತಿಳಿಹೇಳುತ್ತಿದ್ದಾರೆ. ಸಿರಿಧಾನ್ಯಗಳು ಮಧುಮೇಹವನ್ನು ಹತೋಟಿಯಲ್ಲಿಡಲಿವೆ. ಸಿರಿಧಾನ್ಯಗಳಲ್ಲಿರುವ ನಾರಿನಾಂಶ ರಕ್ತದಲ್ಲಿರುವ ಕೊಲೆಸ್ಟ್ರಾಲ್‌ಅನ್ನು ಕಡಿಮೆಗೊಳಿಸುತ್ತದೆ. ಕ್ಯಾನ್ಸರ್‌ನ ವಿರುದ್ಧ ರಕ್ಷಣೆ ನೀಡುತ್ತದೆ. ಎಲುಬುಗಳು ಗಟ್ಟಿಯಾಗುವಿಕೆಗೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಲಬದ್ಧತೆ ತಡೆಗಟ್ಟುತ್ತದೆ. ಮೂತ್ರಕೋಶದ ಕಲ್ಲುಗಳ ತಡೆಗೆ ಸಹಕಾರಿ ಎಂದು ಅವರು ಹೇಳುತ್ತಾರೆ.

ಆಕರ್ಷಣೆಯ ಕೇಂದ್ರಬಿಂದುವೆನಿಸಿದ ಸಿರಿಧಾನ್ಯದ ಮಡಿಕೆ
ಆಕರ್ಷಣೆಯ ಕೇಂದ್ರಬಿಂದುವೆನಿಸಿದ ಸಿರಿಧಾನ್ಯದ ಮಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT