ಶುಕ್ರವಾರ, ಅಕ್ಟೋಬರ್ 7, 2022
28 °C
ನಗರದ ಹಲವೆಡೆ ರಸ್ತೆ ಉಬ್ಬು; ಆರೋಗ್ಯ ಸಮಸ್ಯೆಗೂ ಮೂಲ

ಧಾರವಾಡ | ಅವೈಜ್ಞಾನಿಕ ಹಂಪ್ಸ್‌; ಸಂಚಕಾರ

ಮಹಮ್ಮದ್ ಶರೀಫ್‌ ಕಾಡುಮಠ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಹಲವು ಕಡೆ ಕಾಂಕ್ರೀಟ್ ರಸ್ತೆಗಳಲ್ಲಿ ಹಂಪ್ಸ್ (ಉಬ್ಬು) ಹಾವಳಿ ಹೆಚ್ಚಾಗಿದ್ದು, ಹಿರಿಯ ನಾಗರಿಕರು, ವಾಹನ ಚಾಲಕರು ಬೇಸತ್ತು ಹೋಗಿದ್ದಾರೆ.

ಮರಾಠ ಗಲ್ಲಿ, ಹಳೇ ಹುಬ್ಬಳ್ಳಿಯ ನೇಕಾರನಗರ ರಸ್ತೆ, ಕೇಶ್ವಾಪುರ, ಬೆಳವಣಿಕಿ ಕಾಲೊನಿ ರಸ್ತೆ ಸೇರಿದಂತೆ ವಿವಿಧೆಡೆ ಕಾಂಕ್ರೀಟ್ ರಸ್ತೆಗಳಲ್ಲಿ 20-30 ಮೀಟರ್ ಅಂತ ರಕ್ಕೂ ಹಂಪ್ಸ್ ಅಳ ವಡಿಸಲಾಗಿದೆ. ಕುಸುಗಲ್ ರಸ್ತೆಯ ಬೆಳವಣಿಕೆ ಕಾಲೊನಿಯಲ್ಲಿ 500 ಮೀಟರ್ ಅಂತರದಲ್ಲಿ 5 ಹಂಪ್ ಇದ್ದರೆ, ಮರಾಠ ಗಲ್ಲಿಯ ರಸ್ತೆಯ 200 ಮೀಟರ್ ಅಂತರದಲ್ಲಿ 3 ಇವೆ.

ನೇಕಾರ ನಗರದಿಂದ ಎಸ್.ಕೆ. ಕಾಲೊನಿವರೆಗಿನ ಒಂದೇ ರಸ್ತೆಯಲ್ಲಿ 10ರಿಂದ 14 ರಸ್ತೆ ಉಬ್ಬುಗಳನ್ನು ಹಾಕಿದ್ದರೆ, ನವ ಅಯೋಧ್ಯ ನಗರ, ಟಿಪ್ಪುನಗರ ಮುಂತಾದೆಡೆ 100 ಮೀಟರ್ ಅಂತರದಲ್ಲಿ ಮೂರ್ನಾಲ್ಕು ಉಬ್ಬುಗಳಿವೆ. ಟೆಲಿಫೋನ್‌ ಕೇಬಲ್‌ಗಳನ್ನು ಅಳವಡಿಸಲು ನೆಲ ಅಗೆದ ಬಳಿಕ ಪ್ಯಾಸೇಜ್‌ಗಳನ್ನು ಮಾಡಲಾಗುತ್ತದೆ. ಆದರೆ, ನಗರದ ಹಲವೆಡೆ ರಸ್ತೆಗಳಲ್ಲಿ ಪ್ಯಾಸೇಜ್‌ಗಳನ್ನೇ ಹಂ‍ಪ್‌ಗಳಂತೆ ಎತ್ತರಕ್ಕೆ ನಿರ್ಮಿಸಲಾಗಿದೆ.

ನಿಯಮವೇನು?: ವೈಜ್ಞಾನಿಕ ರಸ್ತೆ ಉಬ್ಬು 17 ಮೀಟರ್ ವಿಸ್ತಾರ, 3.7 ಮೀಟರ್ ಅಗಲ ಹಾಗೂ 0.10 ಮೀಟರ್ ಎತ್ತರದಲ್ಲಿರಬೇಕು. ವಾಹನ ಸಂಚಾರ ಹೆಚ್ಚಿರುವ, ಜನದಟ್ಟಣೆ ಇರುವ ರಸ್ತೆಗಳಲ್ಲಿ ಉಬ್ಬುಗಳನ್ನು ನಿರ್ಮಿಸಬೇಕು.

‘T’ ಆಕಾರದಲ್ಲಿ ಸಂಧಿಸುವ ಸಣ್ಣ ರಸ್ತೆಗಳಲ್ಲಿ ಉಬ್ಬುಗಳ ನಿರ್ಮಾಣ ಅಗತ್ಯ. ಅವು ಮುಖ್ಯ ರಸ್ತೆಗಿಂತ 10ಮೀಟರ್ ಅಂತರದಲ್ಲಿರಬೇಕು. ಅಪಘಾತ ವಲಯ ಎಂದೇ ಗುರುತಿಸಲಾಗುವ ತಿರುವುಗಳಲ್ಲಿ ಸಿಗುವ ಸೇತುವೆಗಳಲ್ಲಿ ಉಬ್ಬು ನಿರ್ಮಿಸಬೇಕು. ಉಬ್ಬುಗಳನ್ನು ನಿರ್ಮಿಸಿದಷ್ಟೇ ನಿರ್ವಹಣೆಯನ್ನೂ ಮಾಡಬೇಕು. ನಿಯಮಿತವಾಗಿ ಬಣ್ಣಹಚ್ಚುವುದು, ದುರಸ್ತಿಗೊಳಿಸುವುದು, ಸ್ಪಷ್ಟವಾಗಿ ಗೋಚರಿಸುವಂತೆ ಮಾಡುವುದು ಸೇರಿದಂತೆ ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲನೆ ಮಾಡಬೇಕು.

‘ಬೆನ್ನು ನೋವಿಗೆ ನಾಂದಿ’
‘ವಾಹನಗಳು ರಸ್ತೆ ಉಬ್ಬುಗಳ ಮೇಲೆ ಏರಿ ಇಳಿಯುವುದರಿಂದ ಒಂದೇ ಕ್ಷಣಕ್ಕೆ ಬೆನ್ನಿನ ಮೂಳೆಯ ನಡುವೆ ಇರುವ ಚಿಪ್ಪು (ಡಿಸ್ಕ್‌)ಗೆ ಹಾನಿಯಾಗುವ ಸಾಧ್ಯತೆ ಇದೆ. ಬೆನ್ನಿನ ಚಿಪ್ಪು ಕುಸಿಯುವುದರಿಂದ ಕೈ, ಕಾಲು ಹಾಗೂ ಕುತ್ತಿಗೆಯ ನರಗಳಿಗೆ ಹೊಡೆತ ಬೀಳುತ್ತದೆ. ಇದರ ನೋವು ತೋಳುಗಳಿಗೂ ವ್ಯಾಪಿಸುತ್ತದೆ. ಆಸ್ಪತ್ರೆಗೆ ಬರುವ ಬೆನ್ನುನೋವಿನ ಪ್ರಕರಣಗಳಲ್ಲಿ ಬಹಳಷ್ಟು ಇಂಥವೇ ಆಗಿರುತ್ತವೆ’ ಎಂದು ಕಿಮ್ಸ್ ಆಸ್ಪತ್ರೆಯ ಉಪಅಧೀಕ್ಷಕ ಡಾ. ಎಸ್.ವೈ. ಮುಲ್ಕಿ ಪಾಟೀಲ ಮಾಹಿತಿ ನೀಡಿದರು.

‘ಗರ್ಭಿಣಿಯರು ಸೇರಿದಂತೆ ಆಂಬುಲೆನ್ಸ್‌, ಆಟೊರಿಕ್ಷಾಗಳಲ್ಲಿ ಆಸ್ಪತ್ರೆಗೆ ಸಾಗುವ ರೋಗಿಗಳ ಸ್ಥಿತಿ ಹಂಪ್ಸ್‌ನಿಂದಾಗಿಯೇ ಇನ್ನಷ್ಟು ಚಿಂತಾಜನಕವಾಗುವುದಿದೆ. ಹಾಗಾಗಿ, ವೈಜ್ಞಾನಿಕವಾಗಿ ಹಂಪ್‌ಗಳನ್ನು ನಿರ್ಮಿಸಬೇಕು’ ಎಂದು ಹೇಳಿದರು.

ಸಚಿವರ ಗಮನಕ್ಕೆ ತಂದಾಗ ತೆಗೆದರು
ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್‌ಗಳನ್ನು ತೆಗೆಯುವಂತೆ ಪತ್ರಕರ್ತ ಯು.ಅ. ಮೇಲಾಂಟ ಅವರು, ಹಲವು ಬಾರಿ ಮಹಾನಗರ ಪಾಲಿಕೆ ದೂರು ಕೊಟ್ಟರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಬೇಸತ್ತಿದ್ದ ಮೇಲಾಂಟ ಅವರು, ನೇರವಾಗಿ ಸಚಿವ ಪ್ರಲ್ಹಾದ ಜೋಶಿ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳಿಸಿ ಗಮನ ಸೆಳೆದಿದ್ದರು. ಇದಾದ ಕೆಲ ದಿನಗಳಲ್ಲೇ ಕೊಪ್ಪಿಕರ ರಸ್ತೆಯುದ್ದಕ್ಕೂ ನಿರ್ಮಿಸಿದ್ದ ಮೂರ್ನಾಲ್ಕು ಹಂಪ್ಸ್ ತೆಗೆಯಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು