ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಂಗಡಿ ವ್ಯಾಪಾರಿ ನಬೀಸಾಬ್‌ ಈಗ ವಾಚ್‌ಮನ್‌!

ಗುಡಿ ಪೌಳಿಯಿಂದ ಕಲ್ಲಂಗಡಿ ಹಣ್ಣು ಬೀದಿಗೆ ಚೆಲ್ಲಿದ ಘಟನೆ ಇನ್ನೂ ಮಾಸಿಲ್ಲ
Published 19 ಜೂನ್ 2023, 21:43 IST
Last Updated 19 ಜೂನ್ 2023, 21:43 IST
ಅಕ್ಷರ ಗಾತ್ರ

–ಬಿ.ಜೆ.ಧನ್ಯಪ್ರಸಾದ್‌

ಧಾರವಾಡ: ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ಕಳೆದ ವರ್ಷ ತಮ್ಮ ಅಂಗಡಿ ಮೇಲೆ ದಾಳಿ ನಡೆಸಿ ಹಣ್ಣುಗಳನ್ನು ಬೀದಿಗೆ ಚೆಲ್ಲಿದ್ದ ಘಟನೆಯ ಬಳಿಕ ವ್ಯಾಪಾರಿ ನಬೀಸಾಬ್‌ ಗೌಸುಸಾಬ್‌ ಕಿಲ್ಲೇದಾರ ಅವರ ಬದುಕೂ ಚೆಲ್ಲಾಪಿಲ್ಲಿಯಾಗಿದೆ. 80ರ ಇಳಿವಯಸ್ಸಿನಲ್ಲಿ ಈ ವ್ಯಾಪಾರಿ ಜೀವನ ನಿರ್ವಹಣೆಗಾಗಿ ಈಗ ಕಾವಲುಗಾರ (ವಾಚ್‌ಮನ್‌) ಆಗಿದ್ದಾರೆ.

ನುಗ್ಗಿಕೇರಿಯ ಹನುಮಂತ ದೇವರ ಗುಡಿಯ ಪೌಳಿಯಲ್ಲಿ ನಬೀಸಾಬ್‌ ಅವರ ಕಲ್ಲಂಗಡಿ ಹಣ್ಣಿನ ಅಂಗಡಿ ಇತ್ತು. ವರ್ಷದಹಿಂದೆ ಅವರ ಅಂಗಡಿ ಮೇಲೆ ದಾಳಿ ನಡೆ
ದಿತ್ತು. ಬಳಿಕ ಹಣ್ಣಿನ ವ್ಯಾಪಾರವನ್ನೇ ಬಿಟ್ಟು
ಕೊಟ್ಟಿದ್ದ ಅವರು, ಸದ್ಯ ಕೊಪ್ಪದಕೇರಿಯ ವಿಲ್ಲಾ
ದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ.

ವಿಲ್ಲಾದ ಪಾರ್ಕಿಂಗ್‌ ಭಾಗದಲ್ಲಿ ಪಿಲ್ಲರ್‌ಗಳಿಗೆ ತಗಡು ಜೋಡಿಸಿ ನಿರ್ಮಿಸಿರುವ ಚಿಕ್ಕಗೂಡಿನಲ್ಲಿ ನಬೀಸಾಬ್‌ ಮತ್ತು ಪತ್ನಿ ಶಕಿನಾ ಬಾನು ಆಶ್ರಯ ಪಡೆದಿದ್ದಾರೆ. ಅವರ ಮೊಮ್ಮಕ್ಕಳು ಆಗಾಗ ಇಲ್ಲಿಗೆ ಬಂದು ಭೇಟಿಯಾಗುತ್ತಾರೆ.

ನಬೀಸಾಬ್ ಸಂಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಅಹಿತಕರ ಘಟನೆಯ ನೆನಪು ಮಾಸಿಲ್ಲ. ಮತ್ತೆ ವ್ಯಾಪಾರ ಶುರುಮಾಡಲು ಅವ್ಯಕ್ತ ಭಯ ಒಂದೆಡೆಯಾದರೆ, ಬಂಡವಾಳದ ಕೊರತೆ ಇನ್ನೊಂದೆಡೆ. ಅದಕ್ಕೆ ಹಣ್ಣಿನ ವ್ಯಾಪಾರದಿಂದಲೇ ದೂರ ಉಳಿದಿದ್ದಾರೆ. ಬದುಕು ಕಟ್ಟಿಕೊಳ್ಳಲು ನೆರವು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಅವರು ಮತ್ತು ಕುಟುಂಬ ಇದೆ.

‘ಕುಂದುಗೋಳ ತಾಲ್ಲೂಕಿನ ಬಿಲೆಬಾಳ ನಮ್ಮೂರು. ಧಾರವಾಡಕ್ಕೆ ಬಂದು 15 ವರ್ಷಗಳಾದವು. ಹೊಟ್ಟೆಪಾಡಿಗೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದೆ. ಕಳೆದ ವರ್ಷ ನಡೆದ ಘಟನೆ ನಂತರ ವ್ಯಾಪಾರ ಕೈಬಿಟ್ಟಿರುವೆ’ ಎಂದು ನಬೀಸಾಬ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಊರಿನಲ್ಲಿ ಸ್ವಲ್ಪ ಜಮೀನಿದೆ. ಅದರ ಮೇಲೆ ಸಾಲ ಪಡೆದಿರುವೆ. ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದೇನೆ. ವಾರಕ್ಕೆ ₹1,500 ಪಗಾರ ಇದೆ. ಬಿದ್ದು ಕಾಲಿಗೆ ಸ್ವಲ್ಪ ಪೆಟ್ಟಾಗಿದೆ. ಆಸ್ಪತ್ರೆ
ಯಲ್ಲಿ ತಪಾಸಣೆ ಮಾಡಿಸಲು ಹಣ ಇಲ್ಲ. ಬದುಕು ಮೂರಾಬಟ್ಟೆಯಾಗಿದೆ’ ಎಂದು ಅವರು ಗೋಳು ತೋಡಿಕೊಂಡರು. ‘ನನಗೆ ಮೂವರು ಪುತ್ರರು ಇದ್ದಾರೆ. ಅವರ ಸಂಸಾರ ಬೇರೆಡೆ ಇದೆ. ಪತ್ನಿಯೊಂದಿಗೆ ಇಲ್ಲಿದ್ದೇನೆ. ಮತ್ತೆ ಹಣ್ಣಿನ ವ್ಯಾಪಾರ ಮಾಡುವ ಆಲೋಚನೆ ಇದೆ. ಆದರೆ, ಬಂಡವಾಳ ಇಲ್ಲ. ಸರ್ಕಾರ ನೆರವು ನೀಡಿದರೆ ಮರುಜೀವ ಸಿಕ್ಕಂತಾಗುತ್ತದೆ’ ಎಂದು ಅವರು ಹೇಳಿದರು..

ಸಂಕಷ್ಟದಲ್ಲಿರುವ ನಬೀಸಾಬ್‌ ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು. ಕೋಮುದ್ವೇಷ ಹರಡುವ ಹುನ್ನಾರಗಳ ಮೇಲೆ ನಿಗಾ ಇಡಲು ‘ಟಾಸ್ಕ್‌ ಫೋರ್ಸ್’ ರಚಿಸಬೇಕು.
–ಬಸವರಾಜ ಸೂಳಿಬಾವಿಸಂಚಾಲಕ, ಸಂವಿಧಾನ ಸಂರಕ್ಷಣಾ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT