ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸುರಕ್ಷತೆ; ಆಗದಿರಲಿ ನಿರ್ಲಕ್ಷ್ಯ

Published 11 ಮಾರ್ಚ್ 2024, 5:10 IST
Last Updated 11 ಮಾರ್ಚ್ 2024, 5:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತಿ ವರ್ಷವೂ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ (ಮಾರ್ಚ್‌ 8) ಆಚರಿಸಲಾಗುತ್ತದೆ. ಮಹಿಳೆ ಸುರಕ್ಷತೆ ಮತ್ತು ಪ್ರೋತ್ಸಾಹದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಆದರೆ ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯ ಹೆಚ್ಚುತ್ತಲೇ ಇದೆ.

ಪುರುಷ ಕೇಂದ್ರಿತ ಸಮಾಜದಲ್ಲಿ ಅನುಭವಿಸಬೇಕಾಗಿರುವ ಅಸಮಾನತೆಯ ತಳಮಳ, ತಾರತಮ್ಯದ ಕಳವಳದೊಂದಿಗೆ ಏಗಿಯೇ ಬಸವಳಿದಿದೆ ಸ್ತ್ರೀ ಸಂಕುಲ. ಅದರೊಂದಿಗೆ ಜಾಗತೀಕರಣದ ಕರಾಳತೆ, ವ್ಯಾಪಾರಿ ಜಗತ್ತಿನ ಕ್ರೌರ್ಯ, ಮಿತಿಮೀರಿದ ದೌರ್ಜನ್ಯ, ಕ್ರೌರ್ಯದ ಸಂಕಟಗಳೂ ಸೇರಿವೆ.

ಮಹಿಳಾ ಪರ ಹೋರಾಟಗಾರರ ಒತ್ತಡಗಳಿಂದ ಮಹಿಳಾ ಸುರಕ್ಷತೆಯನ್ನು ಖಾತರಿಗೊಳಿಸಲು ದಶಕಗಳ ಹಿಂದೆಯೇ ಹಲವು ಸರ್ಕಾರಿ ಆದೇಶಗಳು ರೂಪುಗೊಂಡಿವೆ. ಆದರೆ, ಅನುಷ್ಠಾನಕ್ಕೆ ಬಂದಿದ್ದು ಕಡಿಮೆ.

‘ಪ್ರತಿ ಹೆಣ್ಣಿಗೆ ಸಂಬಂಧಿಸಿದ ಯಾವುದೇ ಪ್ರತ್ಯೇಕ ಘಟನೆಯನ್ನೂ ನಿರ್ಲಕ್ಷಿಸದೇ, ಸ್ಪಂದಿಸುತ್ತಾ ಸಾಗಬೇಕಾದ ತುರ್ತು ಇಂದು ಹೆಚ್ಚಾಗಿದೆ. ಪುರುಷರು ಅನುಭೂತಿ ತೋರುವ ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ. ಮನೆ ಮತ್ತು ಮನೆಯ ಹೊರಗೆ ಎರಡೂ ಕಡೆ ಮಹಿಳೆಯರನ್ನು ಒಳಗೊಳ್ಳುವ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಪುರುಷರು ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡರೆ, ಸಾಮಾಜಿಕ ಬದಲಾವಣೆಯಾಗಬಹುದು. ಸಮ ಸಮಾಜವನ್ನು ನಿರ್ಮಿಸಬಹುದು’ ಎನ್ನುವುದು ಮಹಿಳಾ ಪರ ಹೋರಾಟಗಾರರ ಅಭಿಪ್ರಾಯ.

ಮಾನಸಿಕ ಹಿಂಸೆ: ‘ಇತ್ತೀಚೆಗೆ ಮರ್ಯಾದೆ ಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಕುಟುಂಬಗಳಲ್ಲಿ ದೌರ್ಜನ್ಯ, ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಮಾನಸಿಕ ಹಿಂಸೆಗಳು ಹೆಚ್ಚಾಗುತ್ತಿವೆ. ಶೇ50ರಿಂದ 55ರಷ್ಟು ಈ ಸಂಖ್ಯೆ ಹೆಚ್ಚುತ್ತಿದ್ದರೂ ಬಹುತೇಕರು ಗೌರವಕ್ಕೆ ಹೆದರಿ ಅಂಥವುಗಳ ವಿರುದ್ಧ ಮಾತನಾಡಲಾಗುತ್ತಿಲ್ಲ’ ಎಂದು
ಧಾರವಾಡದ ಸಾಧನಾ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ಸಂಸ್ಥಾಪಕಿ ಡಾ. ಇಸಬೆಲಾ ಝೇವಿಯರ್ ಹೇಳಿದರು.

‘ಜಾಹೀರಾತು, ವೃತ್ತ ಪತ್ರಿಕೆ, ಟಿ.ವಿ ಮಾಧ್ಯಮ, ಸೋಷಿಯಲ್‌ ಮೀಡಿಯಾ ಸೇರಿದಂತೆ ಇನ್ನಿತರ ಮಾಧ್ಯಮಗಳಲ್ಲಿ ಮಹಿಳೆಯರನ್ನು ಲೈಂಗಿಕ ವಸ್ತುವಾಗಿ ಬಿಂಬಿಸಲಾಗುತ್ತಿದ್ದು, ಅದು ಕೂಡ ಒಂದರ್ಥದಲ್ಲಿ ಮಾನಸಿಕ ಅತ್ಯಾಚಾರ.ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡಲಾಗುತ್ತಿದೆ. ‘ನಮ್ಮತನ’ದ  ಹತ್ಯೆ ಸದ್ದಿಲ್ಲದೇ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

‘ಮಹಿಳೆ ಮಾನಸಿಕವಾಗಿ ಸದೃಢಳಾಗಬೇಕು, ಸ್ವಯಂ ರಕ್ಷಣೆಗೆ ಕೌಶಲಗಳನ್ನು ಕಲಿಯಬೇಕಿರುವುದು ಈ ಕಾಲದ ಅನಿವಾರ್ಯ. ಶಾಲಾ– ಕಾಲೇಜುಗಳಲ್ಲಿ ಅಷ್ಟೇ ಅಲ್ಲದೇ ಮನೆಗಳಲ್ಲೂ ಲಿಂಗ ಸೂಕ್ಷ್ಮತೆ, ಲಿಂಗ ಸಂವೇದನೆ ಬಗ್ಗೆ ತಿಳಿವಳಿಕೆ ನೀಡಬೇಕು’ ಎಂದು ವಿವರಿಸಿದರು.

ಲಿಂಗ ಸಮಾನತೆ ಮನೆಯಿಂದಆರಂಭವಾಗಲಿ: ‘ಮಹಿಳೆಯರು ಕೌಟುಂಬಿಕ ದೌರ್ಜನ್ಯ, ಹಿಂಸೆ ಅನುಭವಿಸಿದ್ದಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳ ಮೂಲಕ ಅವರ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ. ಇಂಥ ಪ್ರಕರಣಗಳಲ್ಲಿ ಮನೆಬಿಟ್ಟು ಬಂದ ಮಹಿಳೆಯರಿಗೆ ಸಖಿ ಕೇಂದ್ರಗಳ ಮೂಲಕ ಕಾನೂನು ಸಲಹೆ, ನೆರವು ನೀಡಲಾಗುತ್ತದೆ. ಸ್ವಾಧಾರ ಕೇಂದ್ರಗಳ ಮೂಲಕ ಮಹಿಳೆಯರಿಗೆ ವಸತಿ, ಊಟ, ಸ್ವಾವಲಂಬನೆಗಾಗಿ ವೃತ್ತಿ ತರಬೇತಿ ನೀಡಲಾಗುತ್ತಿದೆ. 18 ವರ್ಷ ತುಂಬಿದ ಮಾನಸಿಕ ಸ್ಥಿಮಿತತೆ ಕಳೆದುಕೊಂಡ ಮಹಿಳೆಯರಿಗಾಗಿ ಮಂದ‌ ಮತಿಯ ಮಹಿಳಾಗೃಹ ತೆರೆಯಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮಾವತಿ ತಿಳಿಸಿದರು.

‘ಮಹಿಳಾ ಸುರಕ್ಷತೆಗೆ ಮನೆಯಲ್ಲೇ ಮೊದಲ ಆದ್ಯತೆ ಸಿಗಬೇಕು. ಲಿಂಗ ತಾರತಮ್ಯದಿಂದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾಳೆ. ಈ ಮನೋಭಾವ ಅಳಿಸುವ ಕಾರ್ಯ ಮೊದಲು ಮನೆಯಿಂದಲೇ ಆಗಿ, ಅವಳ ಶ್ರಮ ಗೌರವಿಸುವಂತಾಗಬೇಕು. ಶಿಕ್ಷಣದಿಂದ ಮಾತ್ರವೇ ಇದೆಲ್ಲ ಸಾಧ್ಯ. ಹಾಗಾಗಿ ಹೆಣ್ಮಕ್ಕಳ ಶಿಕ್ಷಣಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಬೇಕು’ ಎಂದರು. 

ರೇಣುಕಾ ಸುಕುಮಾರ್ ಪೊಲೀಸ್‌ ಕಮಿಷನರ್‌
ರೇಣುಕಾ ಸುಕುಮಾರ್ ಪೊಲೀಸ್‌ ಕಮಿಷನರ್‌
ಶಿವಾನಂದ ಗುಡಗನಟ್ಟಿ
ಶಿವಾನಂದ ಗುಡಗನಟ್ಟಿ
ಡಾ. ಇಸಬೆಲಾ ಝೇವಿಯರ್
ಡಾ. ಇಸಬೆಲಾ ಝೇವಿಯರ್

ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ ದಾಖಲಾದ ಪ್ರಕರಣಗಳ ಅಂಕಿಸಂಖ್ಯೆ ವರ್ಷ; ಅತ್ಯಾಚಾರ; ಪೋಕ್ಸೊ;ಕೌಟುಂಬಿಕ ದೌರ್ಜನ್ಯ 2022;7;45;87;2023;6;45;1042024(ಮಾರ್ಚ್‌4ರ ವರೆಗೆ);3;5;17

ಪೊಲೀಸ್‌ ಇಲಾಖೆಯಿಂದ ಶಾಲೆ ಕಾಲೇಜುಗಳಲ್ಲಿ ಮಹಿಳೆ ಮಕ್ಕಳ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಾರ್ವಜನಿಕರ ಬೀಟ್‌ ಸಭೆಗಳನ್ನೂ ನಡೆಸಲಾಗುತ್ತಿದೆ. ಕಾನೂನು ತಿಳಿವಳಿಕೆ ಪಡೆದು ಸುರಕ್ಷಿತವಾಗಿರಿ.- ರೇಣುಕಾ ಸುಕುಮಾರ್‌ ಪೊಲೀಸ್‌ ಕಮಿಷನರ್‌ ಹು–ಧಾ

ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು’ ಜಿಲ್ಲಾಡಳಿತ ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳಡಿ ಮಹಿಳೆಯರ ಶಿಕ್ಷಣ ಸಬಲೀಕರಣ ಸಶಕ್ತೀಕರಣ ಸುರಕ್ಷತೆ ಏಳಿಗೆಗೆ ಕ್ರಮ ವಹಿಸಲಾಗುತ್ತಿದೆ. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ‌ ಕೊಠಡಿ ಅವರ ಮಕ್ಕಳ ಪಾಲನೆಗಾಗಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಮಹಿಳೆಯರ ಸುರಕ್ಷತೆಗೆ ಇನ್ನಷ್ಟು ಹೆಚ್ಚಿನ ಒತ್ತು ನೀಡಲಾಗುವುದು -ದಿವ್ಯಪ್ರಭು ಜಿ.ಆರ್.ಜೆ ಜಿಲ್ಲಾಧಿಕಾರಿ ಧಾರವಾಡ

‘ಸಮಸ್ಯೆಗಳಿದ್ದಾಗ ಹಿಂಜರಿಯದೇ ಪೊಲೀಸರಿಗೆ ಮಾಹಿತಿ ನೀಡಿ’ ಧಾರವಾಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ (ವಿವಾಹಿತ ಮಹಿಳೆಯರಿಗೆ ಸಂಬಂಧಪಟ್ಟಂತೆ ವರದಕ್ಷಿಣೆ ಕಿರುಕುಳ ಕೌಟುಂಬಿಕ ದೌರ್ಜನ್ಯ ಹಿಂಸೆ ಪ್ರಕರಣಗಳು) 2022 ರಲ್ಲಿ 97 2023ರಲ್ಲಿ 102 2024 (ಮಾರ್ಚ್ 6ರವರೆಗೆ) ರಲ್ಲಿ 20 ಪ್ರಕರಣಗಳು ದಾಖಲಾಗಿವೆ. ಠಾಣೆಯು ಮಹಿಳಾಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಶೇ 95ರಷ್ಟು ಮಹಿಳಾ ಸಿಬ್ಬಂದಿಗಳೇ ಇಲ್ಲಿರುವುದರಿಂದ ಸಂತ್ರಸ್ತ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬಹುದು. ಕೌನ್ಸಿಲಿಂಗ್ ಸಹ ಮಾಡಲಾಗುತ್ತದೆ. ಎಂಥದ್ದೇ ಸಮಸ್ಯೆಗಳಿದ್ದಾಗಲೂ ಹಿಂಜರಿಯದೇ ಪೊಲೀಸರಿಗೆ ಮಾಹಿತಿ ನೀಡಲು ಮಹಿಳೆಯರು ಮುಂದಾಗಬೇಕು. ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 112 ಕರೆ ಮಾಡಿ ದೂರು ನೀಡಬಹುದು.- ಶಿವಾನಂದ ಗುಡಗನಟ್ಟಿ ಪೊಲೀಸ್ ಇನ್ಸ್‌ಪೆಕ್ಟರ್ ಮಹಿಳಾ ಪೊಲೀಸ್ ಠಾಣೆ ಹುಬ್ಬಳ್ಳಿ.

‘ಸಾಮಾಜಿಕ ಮಾಧ್ಯಮ; ಇರಲಿ ಎಚ್ಚರ’ ಇನ್‌ಸ್ಟಾಗ್ರಾಂ ಫೇಸ್‌ಬುಕ್‌ನಂತಹ ಸೋಷಿಯಲ್‌ ಮೀಡಿಯಾಗಳಲ್ಲಿ ಮಹಿಳೆಯರ ಖಾತೆಗಳನ್ನು ಹ್ಯಾಕ್‌ ಮಾಡಿ ನಕಲಿ ಖಾತೆ ತೆರೆದು ವಂಚಿಸುವ ಬ್ಲ್ಯಾಕ್‌ಮೇಲ್‌ ಮಾಡುವ ಇತ್ಯಾದಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ  ಹುಬ್ಬಳ್ಳಿ– ಧಾರವಾಡ ನಗರಗಳಲ್ಲಿ 2022ರಲ್ಲಿ 36 2023ರಲ್ಲಿ 22 ಪ್ರಕಣಗಳು ದಾಖಲಾಗಿವೆ. ಈ ವರ್ಷ ಯಾವುದೇ ಪ್ರಕರಣ ದಾಖಲಾಗಿಲ್ಲ. ಶಾಲೆ– ಕಾಲೇಜು ಸಾರ್ವಜನಿಕ ಸ್ಥಳಗಳಲ್ಲಿ ಸೈಬರ್‌ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದರಿಂದ ಅಪರಾಧಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಉತ್ತಮ ಬೆಳವಣಿಗೆ. ಮಹಿಳೆಯರು ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಭಾವಚಿತ್ರ ಹಂಚಿಕೊಳ್ಳಬಾರದು ಅನಧಿಕೃತ ಲೋನ್‌ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಾರದು ಗೊತ್ತಿರದ ಲಿಂಕ್‌ಗಳನ್ನು ಒತ್ತದಿರಿ. ಸಹಾಯವಾಣಿ 1930ಗೆ ಸಂಪರ್ಕಿಸಿ ದೂರು ದಾಖಲಿಸಿ. –ಬಿ.ಕೆ. ಪಾಟೀಲ ಪೊಲೀಸ್‌ ಇನ್ಸ್‌ಪೆಕ್ಟರ್ ಸೈಬರ್‌ ಅಪರಾಧ ವಿಭಾಗ ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT