ಹೊಸ ತಲೆಮಾರಿಗೂ ಸಿಗಲಿ ಸಮ್ಮೇಳನದಲ್ಲಿ ಆದ್ಯತೆ...

7

ಹೊಸ ತಲೆಮಾರಿಗೂ ಸಿಗಲಿ ಸಮ್ಮೇಳನದಲ್ಲಿ ಆದ್ಯತೆ...

Published:
Updated:

ಕಾಲಮಾನಕ್ಕೆ ತಕ್ಕಂತೆ ಸಾಹಿತ್ಯ ಸಮ್ಮೇಳನಗಳ ಸ್ವರೂಪ ಬದಲಾಗಿದೆ. ಯುವ ಜನರೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಆದರೆ, ಅವರಿಗೆ ವೇದಿಕೆ ಹತ್ತುವ ಅವಕಾಶದ ಕೊರತೆ ಕಾಡುತ್ತಿದೆ. ಹೊಸ ತಲೆಮಾರಿನ ಸಾಹಿತಿಗಳಿಗೆ ಪ್ರೋತ್ಸಾಹ ಕೊಡಬೇಕು ಎನ್ನುವ ಆಗ್ರಹ ದಿನೇ ದಿನೇ ಬಲಗೊಳ್ಳುತ್ತಿದೆ. ವಿದ್ಯಾಕಾಶಿಯಲ್ಲಿ ನಡೆಯುವ ನುಡಿ ಹಬ್ಬದ ನೆಪದಲ್ಲಿ ಜಿಲ್ಲೆಯ ಯುವ ಮತ್ತು ಅನುಭವಿ ಸಾಹಿತಿಗಳನ್ನು ಮಾತನಾಡಿಸಿದಾಗ ವ್ಯಕ್ತವಾದ ಅಭಿಪ್ರಾಯಗಳ ಗುಚ್ಛ ಇಲ್ಲಿದೆ.

ಯುವಜನರಿಗೆ ಆದ್ಯತೆ ಸಿಗಲಿ

ಸಮ್ಮೇಳನದಲ್ಲಿ ಯುವಜನರಿಗೆ ಆದ್ಯತೆ ಸಿಗಬೇಕು. ಈಗ ಅನೇಕ ಯುವಕ, ಯುವತಿಯರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಅವರಿಗೆ ಅಗತ್ಯ ಮಾರ್ಗದರ್ಶನ ಸಿಗದೇ ಹೋದರೆ ಅವರು ಈ ಕಾಯಕದಲ್ಲಿ ಮುಂದುವರಿಯುವುದಾದರೂ ಹೇಗೆ?  ಕೃಷಿ, ಪಶುಸಂಗೋಪನೆ, ರೈತರ ಕಷ್ಟಗಳ ಬಗ್ಗೆ ಹೊಸ ಆಯಾಮದಲ್ಲಿ ಚರ್ಚೆಯಾಗಬೇಕು. ರೈತರ ಜ್ವಲಂತ ಸಮಸ್ಯೆಗಳನ್ನು ಇಟ್ಟುಕೊಂಡು ಗಂಭೀರ ಚರ್ಚೆ ನಡೆಯಬೇಕು. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಅವು ಅನುಷ್ಠಾನಕ್ಕೆ ಬಂದರೆ ಮಾತ್ರ ಸಮ್ಮೇಳನ ಸಾರ್ಥಕವೆನಿಸುತ್ತದೆ.

–ಮಾರ್ತಾಂಡಪ್ಪ ಎಂ. ಕತ್ತಿ

**

ಕಾಲಕ್ಕೆ ತಕ್ಕಂತೆ ಬದಲಾಗಲಿ

ಪ್ರತಿ ವರ್ಷ ಸಾಹಿತ್ಯ ಸಮ್ಮೇಳನ ನಡೆಯುತ್ತಲೇ ಇದೆ. ಆದರೆ, ಕಾಲಮಾನಕ್ಕೆ ತಕ್ಕಂತೆ ಬದಲಾಗಿಲ್ಲ. ಕುಮಾರವ್ಯಾಸನ ಊರು ಧಾರವಾಡ ಜಿಲ್ಲೆಯಲ್ಲಿಯೇ ಇದೆ. ಅವರ ಸಾಹಿತ್ಯಕ್ಕೂ ಪ್ರಾಶಸ್ತ್ಯ ಸಿಗಬೇಕಾಗಿತ್ತು. ಆಯಾ ಕಾಲಘಟ್ಟದ ಸಾಹಿತಿಗಳು, ಬರಹಗಾರರಿಗೆ ಮನ್ನಣೆ ಸಿಗಬೇಕು. ಯಾವ ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತದೆಯೋ ಆಯಾ ಜಿಲ್ಲೆಯ ಅಥವಾ ಆಯಾ ಭಾಗದ ಸಾಹಿತ್ಯ ಕೃಷಿಯ ಬಗ್ಗೆ ಚರ್ಚೆಯಾಗಬೇಕು. ಸ್ಥಳೀಯ ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ಪರಿಚಯಿಸುವ ಕೆಲಸವಾಗಬೇಕು.

–ರಾಜಕುಮಾರ ಮಡಿವಾಳರ

**

 ಭಾಷಾ ಬೆಳವಣಿಗೆ ಕುರಿತು ಚರ್ಚೆಯಾಗಲಿ

ಪ್ರತಿ ಸಮ್ಮೇಳನದಲ್ಲಿ ಗೋಷ್ಠಿ ಹಾಗೂ ಚರ್ಚೆಗಳು ಇದ್ದೇ ಇರುತ್ತವೆ. ಇವುಗಳಿಗಿಂತ ಹೆಚ್ಚಾಗಿ ಕನ್ನಡ ಭಾಷೆಯನ್ನು ಹೇಗೆ ಬೆಳೆಸಬೇಕು. ಇಂಗ್ಲಿಷ್‌ ಮಾಧ್ಯಮದತ್ತ ವಾಲಿರುವ ಈಗಿನ ಮಕ್ಕಳಲ್ಲಿ ತಾಯ್ನಾಡಿನ ಭಾಷಾ ಪ್ರೀತಿ ಹೇಗೆ ಬೆಳೆಸಬೇಕು ಎನ್ನುವುದರ ಬಗ್ಗೆ ಗೋಷ್ಠಿಗಳು ಇರಬೇಕು. ಕರ್ನಾಟಕದಲ್ಲಿ ವಿಶಿಷ್ಟವಾದ ಉತ್ತರ ಕರ್ನಾಟಕದ ಭಾಷೆ ಬಗ್ಗೆ ಚರ್ಚೆಯಾಗಲಿ. ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಸಮ್ಮೇಳನ ನಡೆದುಕೊಂಡು ಹೋಗುವ ಬದಲು ಗಂಭೀರ ಬದಲಾವಣೆಗೆ ವೇದಿಕೆಯಾಗಲಿ. ಯುವ ಸಾಹಿತಿಗಳಿಗೆ ಮತ್ತು ಬರಹಗಾರರಿಗೆ ಆದ್ಯತೆ ನೀಡಿದರೆ ಧಾರವಾಡದ ಸಮ್ಮೇಳನ ಸಾರ್ಥಕತೆ ಎನಿಸುತ್ತದೆ.

–ಪವನ್‌ ಆದಿ

**

 ಹಿರಿಯರಿಗಷ್ಟೇ ಸೀಮಿತವಾಗದಿರಲಿ

ಹಿರಿಯ ಸಾಹಿತಿಗಳಿಗಷ್ಟೇ ಸೀಮಿತವಾದ ಸಮ್ಮೇಳನದಲ್ಲಿ ಯುವಕರಿಗೂ ಅವಕಾಶ ಲಭಿಸಬೇಕು. ಶಾಲಾ, ಕಾಲೇಜು ಹಂತದಲ್ಲಿ ಭಾಷಣ ಅಥವಾ ಕಥಾಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದರೆ ಬಹುಮಾನ ಕೊಟ್ಟು ಪ್ರೋತ್ಸಾಹಿಸುತ್ತಾರೆ. ಅದೇ ರೀತಿ ಯುವಜನತೆ ಹೊಸ ಪುಸ್ತಕ ಬರೆದಾಗ ಅವುಗಳನ್ನು ಓದಿ ಹಿರಿಯರು ಮಾರ್ಗದರ್ಶನ ಮಾಡಬೇಕು. ಸ್ಥಳೀಯ ಯುವ ಸಾಹಿತಿಗಳು, ಕಲಾವಿದರಿಗೆ ಆದ್ಯತೆ ನೀಡಬೇಕು. ತಳಮಟ್ಟದಿಂದ ಯುವಸಾಹಿತಿಗಳನ್ನು ಗಟ್ಟಿಗೊಳಿಸುತ್ತಾ ಹೋದರೆ ಭವಿಷ್ಯದಲ್ಲಿ ಸಾಹಿತ್ಯದ ಬೇರು ಇನ್ನಷ್ಟು ಗಟ್ಟಿಯಾಗುತ್ತದೆ. ಹೊಸ ಪ್ರತಿಭೆಗಳು ಹೊರಬರುತ್ತಾರೆ.

ಸೋಮುರೆಡ್ಡಿ

**

ಸ್ಥಳೀಯರಿಗೆ ಆದ್ಯತೆ ಸಿಗಲಿ

ಹಳೇ ಸಾಹಿತಿಗಳು ಹಾಕಿಕೊಟ್ಟ ಅಡಿಪಾಯದ ಮೇಲೆ ಈಗಿನ ಸಮ್ಮೇಳನಗಳು ನಡೆಯುತ್ತಿವೆ. ಇದರಿಂದ ಯುವಜನತೆಗೆ ಆದ್ಯತೆ ಸಿಗುತ್ತಿಲ್ಲ. ಯುವ ಸಾಹಿತಿಗಳ ಪುಸ್ತಕ ಪರಿಚಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಯುವ ಸಾಹಿತಿಗಳು ಇದ್ದಾರೆ. ಅವರನ್ನು ಸಕ್ರಿಯವಾಗಿ ಸಮ್ಮೇಳನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಹಳೇ ಸಾಹಿತಿಗಳು ಹೊಸ ತಲೆಮಾರಿನ ಸಾಹಿತಿಗಳ ಹೊಸತನವನ್ನು ಒಪ್ಪಿಕೊಳ್ಳುವ ಮನೋಭಾವ ಹೊಂದಿದ್ದರೆ ಸಮ್ಮೇಳನಕ್ಕೆ ಅರ್ಥ ಬರುತ್ತದೆ. ಹೊಸಬರ ಪಾಲ್ಗೊಳ್ಳುವಿಕೆ ಹೆಚ್ಚಾಗುವಂತೆ ಮಾಡಿದರೆ ಹೊಸದನ್ನು ಕಂಡುಕೊಳ್ಳಲು ಸಾಧ್ಯ.

–ವಿಜಯಾ ಕುಲಕರ್ಣಿ

**

ಓದುಗರ ಮುಖಾಮುಖಿಯಾಗಲಿ

ಬದಲಾದ ಕಾಲಕ್ಕೆ ತಕ್ಕಂತೆ ಸಮ್ಮೇಳನಗಳ ಸ್ವರೂಪ ಬದಲಾಗಬೇಕಾಗಿದೆ. ಯುವ ಸಾಹಿತಿಗಳನ್ನು ಗುರುತಿಸಿ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬೇಕು. ಯುವಜನತೆಯನ್ನು ಗುರಿಯಾಗಿಟ್ಟುಕೊಂಡು ಸಮ್ಮೇಳನ ನಡೆಸಬೇಕು. ಅನುಭವಿ ಸಾಹಿತಿಗಳು ಕಿರಿಯರಿಗೆ ಮಾರ್ಗದರ್ಶನ ಮಾಡಿದರೆ ಹೊಸಬರು ಕೂಡ ಶ್ರೇಷ್ಠ ಸಾಹಿತ್ಯ ರಚಿಸಬಲ್ಲರು. ಆಳವಾದ ಅಧ್ಯಯನ ಮತ್ತು ಗಟ್ಟಿ ಸಾಹಿತ್ಯ ರೂಪುಗೊಳ್ಳಲು ಮಾರ್ಗದರ್ಶನ ಅಗತ್ಯ. ಸಮ್ಮೇಳನ ಹಳೇ ಸಾಹಿತಿಗಳು, ಹೊಸ ಸಾಹಿತಿಗಳು ಮತ್ತು ಓದುಗರ ಮುಖಾಮುಖಿಗೆ, ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸಬೇಕು

–ರಾಜೇಶ್ವರಿ ಲಕ್ಕಮ್ಮನವರ

**

ಸಾಹಿತ್ಯದ ಚರ್ಚೆಯಷ್ಟೇ ಆಗಲಿ

ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ ಮಾತ್ರ ಚರ್ಚೆಯಾಗಬೇಕು. ಅನುಭವಕ್ಕೆ ಆದ್ಯತೆ ನೀಡುವ ಜೊತೆಗೆ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಸಮ್ಮೇಳನ ನಡೆಯಬೇಕು. ಇಂಗ್ಲಿಷ್‌ ಪ್ರಭಾವದಿಂದ ಕನ್ನಡದ ಓದುಗರು ಕಡಿಮೆಯಾಗುತ್ತಿದ್ದಾರೆ. ಈ ಆತಂಕದ ನಡುವೆಯೂ ಅನೇಕ ಯುವಕ, ಯುವತಿಯರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಯುವಜನತೆಗೂ ಅವಕಾಶ ಕೊಡಬೇಕು. ಹೊಸ ಲೇಖಕರ, ಹೊಸ ಪುಸ್ತಕಗಳ ಪರಿಚಯ ಆಗಬೇಕು.

–ದೀಪಾ ಜೋಶಿ

**

ಹೊಸ ಪ್ರಯೋಗಗಳು ನಡೆಯಲಿ

ಸಮ್ಮೇಳನದಲ್ಲಿ ಹೊಸ ಪ್ರಯೋಗಗಳು ನಡೆಯಬೇಕು. ಮುಖ್ಯವಾಗಿ ಯುವಜನತೆಯನ್ನು ಆಕರ್ಷಿಸಲು ಆದ್ಯತೆ ಕೊಡಬೇಕು. ಹಳೇ ಸಾಹಿತ್ಯದ ಜೊತೆಗೆ ಹೊಸ ಸಾಹಿತ್ಯದ ಬಗ್ಗೆಯೂ ಚರ್ಚೆಯಾಗಲಿ. ಯುವ ಸಾಹಿತಿಗಳು ಬರೆದೆದ್ದಲ್ಲವನ್ನೂ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಾರೆ. ಇದಕ್ಕೂ ಮೊದಲು ಅವರು ಗುಣಮಟ್ಟದ ಬರವಣಿಗೆಗೆ ಆದ್ಯತೆ ಕೊಡಬೇಕು. ಧಾರವಾಡದಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಇಲ್ಲಿನ ಸಾಹಿತಿಗಳು ಮತ್ತು ಸಂಸ್ಕೃತಿಯನ್ನು ಪರಿಚಯಿಸಬೇಕು. ಧಾರವಾಡದ ಕವಿಗಳ ಮನೆಗಳನ್ನು ನೋಡಲು ಬಸ್‌ ವ್ಯವಸ್ಥೆ ಮಾಡಬೇಕು. ಸ್ಥಳೀಯ ಸಂಸ್ಕೃತಿಗೆ ಒತ್ತು ಕೊಡಬೇಕು.

–ರೂಪಾ ಮಾಚಿಗಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !