ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ 12 ಲಕ್ಷ–ಶೌಚಾಲಯ 47!

ಜಲಬಾಧೆ ತೀರಿಸಲು ಪರದಾಟ ತಪ್ಪಿದ್ದಲ್ಲ
Last Updated 20 ಅಕ್ಟೋಬರ್ 2014, 5:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದ ಜನಸಂಖ್ಯೆ 12ಲಕ್ಷ. ನಿತ್ಯ ನಗರಕ್ಕೆ ಬಂದು ಹೋಗುವ ಜನರನ್ನೂ ಸೇರಿಸಿದರೆ ಈ ಸಂಖ್ಯೆ 13 ಲಕ್ಷ ದಾಟುತ್ತದೆ. ಆದರೆ, ಅವಳಿ­ನಗರದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಮಾತ್ರ 47!

ಇದು ಅಚ್ಚರಿ ಎನಿಸಿದರೂ ಅವಳಿ­ನಗರದಲ್ಲಿನ ಮೂಲಸೌಲಭ್ಯಗಳ ಕೊರ­ತೆಗೆ ಹಿಡಿದ ಕೈಗನ್ನಡಿ. ಆದರೆ, ಈ 47­ರಲ್ಲಿ ಸರಿಯಾಗಿ ನಿರ್ವಹಣೆ­ಯಾಗು­ತ್ತಿ­ರುವ ಶೌಚಾಲಯಗಳ ಸಂಖ್ಯೆ ಕೈಬೆರ­ಳೆಣಿಕೆಯಷ್ಟು ಮಾತ್ರ.

ನಗರದ ಪ್ರಧಾನ ಅಂಚೆ ಕಚೇರಿ­ಯಿಂದ ಧಾರವಾಡದ ವರೆಗೆ ಸಂಚರಿ­ಸಿದರೆ ರಸ್ತೆ ಅಕ್ಕಪಕ್ಕ ಒಂದೇ ಒಂದು ಸಾರ್ವಜನಿಕ ಶೌಚಾಲಯ ಸಿಗುವುದಿಲ್ಲ. ಕರ್ನಾಟಕ ವಾಣಿ­ಜ್ಯೋ­ದ್ಯಮ ಸಂಸ್ಥೆ, ಕಿತ್ತೂರ ಚೆನ್ನಮ್ಮ ವೃತ್ತ­ದಿಂದ ಕೋರ್ಟ್‌ ವೃತ್ತಕ್ಕೆ ಹೋಗುವ ಮಾರ್ಗದಲ್ಲಿ ಶೌಚಾಲಯಗಳು ಇವೆ­ಯಾದರೂ ಅವುಗಳನ್ನು ಹುಡುಕ­ಬೇಕು. ಅಲ್ಲದೇ, ಅವುಗಳ ಉಪ­ಯೋಗಕ್ಕೆ ಹಣ ನೀಡಬೇಕು.
ಅದರಲ್ಲೂ, ಬೇರೆ ಊರುಗಳಿಂದ ಬರು­ವವರ ಪಾಡು ಹೇಳತೀರದು. ಶೌಚಾಲಯ ಸಿಗದೇ ಖಾಲಿ ಬಿದ್ದ ಜಾಗ ಇಲ್ಲವೇ ರಸ್ತೆ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಇಲ್ಲಿ ಸಾಮಾನ್ಯ ಎನ್ನುತ್ತಾರೆ ಖಾಸಗಿ ಕಂಪೆನಿ ಉದ್ಯೋಗಿ ವಿಜಯಕುಮಾರ ಕವಲೂರು.

‘ಮಹಿಳೆಯರು ಹೋಟೆಲ್‌ ಇಲ್ಲವೇ ಖಾಸಗಿ ಸಂಸ್ಥೆಗಳಲ್ಲಿರುವ ಶೌಚಾಲಯ­ಗಳ ಮೊರೆ ಹೋಗಬೇಕು. ಇದು ಬಹಳ ಮುಜುಗರದ ವಿಷಯ. ಈ ಬಗ್ಗೆ ಮಹಾ­ನಗರ ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದಿದ್ದರೆ ಹೇಗೆ’ ಎಂದೂ ಪ್ರಶ್ನಿಸುತ್ತಾರೆ.

ದುರ್ಗದ ಬೈಲ್‌, ಸ್ಟೇಷನ್‌ ರಸ್ತೆ, ದಾಜಿಬಾನಪೇಟೆ, ಎಂ.ಜಿ.­ಮಾರ್ಕೆಟ್‌­ಗಳು ಪ್ರಮುಖ ವಾಣಿಜ್ಯ ಪ್ರದೇಶಗಳು. ಇಲ್ಲಿ ನಗರದ ಜನತೆಯಲ್ಲದೇ ವ್ಯಾಪಾರ­ಕ್ಕಾಗಿ ಬೇರೆ ಊರುಗಳಿಂದಲೂ ಜನರು ಬರುತ್ತಾರೆ. ಆದರೆ, ನಿಸರ್ಗದ ಕರೆ ತೀರಿಸಲು ಸೂಕ್ತ ಸ್ಥಳಕ್ಕೆ ಅವರಿಗೆ ಸ್ವರ್ಗ ಮೂರೇ ಗೇಣು ಎಂಬಂತಹ ಸ್ಥಿತಿ ಇದೆ ಎಂದು ದಾಜಿಬಾನಪೇಟೆಯಲ್ಲಿರುವ ವರ್ತಕ ಜಗದೀಶ ಮಿಸ್ಕಿನ್‌ ಹೇಳು­ತ್ತಾರೆ.
ನಗರದ ಕೆಲವೆಡೆ ಮಹಾನಗರ ಪಾಲಿಕೆ ಸಂಚಾರಿ ಶೌಚಾಲಯಗಳನ್ನು ಅಳ­ವಡಿಸಿದೆ. ಒಂದಕ್ಕೆ ₨ 1.15 ಲಕ್ಷ­ದಂತೆ ಒಟ್ಟು 15 ಸಂಚಾರಿ ಶೌಚಾ­ಲಯಗಳನ್ನು ಖರೀದಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಹೇಳು­ತ್ತಾರೆ.

ಆದರೆ, ಅವುಗಳ ಹತ್ತಿರ ಹೋಗು­ವುದೇ ದುಸ್ತರ. ನಿಯಮಿತವಾಗಿ ನೀರ­ನ್ನು ಹಾಕಿ ಅವುಗಳ ನಿರ್ವಹಣೆ ಮಾಡಿ ಯಾವ ವರ್ಷವಾಯಿತೋ ಗೊತ್ತಿಲ್ಲ. ಕೊಚ್ಚೆ ನೀರಿನಿಂದ, ಒಳಚರಂಡಿ ತ್ಯಾಜ್ಯ­ದಿಂದ ದ್ವೀಪದಂತ ಸ್ಥಿತಿ ನಿರ್ಮಾಣ­ವಾಗಿದ್ದು, ನಡುವೆ ಈ ಸಂಚಾರಿ ಶೌಚಾಲಯಗಳಿರುವುದು ಪಾಲಿಕೆಯ ನಿರ್ಲಕ್ಷ್ಯವನ್ನು ತೋರುತ್ತದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಅನುದಾನ ಇದೆ: ‘ನಗರದಲ್ಲಿ ಸಾರ್ವ­ಜನಿಕ ಶೌಚಾಲಯಗಳನ್ನು ನಿರ್ಮಿಸಲು ಹಣಕಾಸಿನ ತೊಂದರೆ ಇಲ್ಲ. ಶೌಚಾಲಯಗಳು ಅಗತ್ಯವಿರುವಂತಹ ಪ್ರದೇಶಗಳಲ್ಲಿ ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೀಘ್ರವೇ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ಮೇಯರ್‌ ಶಿವು ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT