ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಕಚೇರಿಗೆ ರೈತರ ಬೀಗ

Last Updated 8 ಅಕ್ಟೋಬರ್ 2011, 6:20 IST
ಅಕ್ಷರ ಗಾತ್ರ

ನವಲಗುಂದ: ಕಾಲುವೆಗಳಿಗೆ ಸಮರ್ಪಕವಾಗಿ ನೀರು ಬಾರದೇ ರೊಚ್ಚಿಗೆದ್ದ ತಾಲ್ಲೂಕಿನ ಅರಹಟ್ಟಿ ಗ್ರಾಮದ ರೈತರು ಶುಕ್ರವಾರ ಇಲ್ಲಿಯ ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.

ನೀರಾವರಿ ಇಲಾಖೆಯವರು ಕಾಲುವೆಗಳನ್ನು ಸರಿಯಾಗಿ ದುರಸ್ತಿ ಮಾಡದೇ ಇರುವುದರಿಂದ ಕಾಲುವೆಯುದ್ದಕ್ಕೂ ಹೂಳು ತುಂಬಿಕೊಂಡು, ಗಿಡ-ಗಂಟಿಗಳು ಬೆಳೆದಿದ್ದರಿಂದ ಕಾಲುವೆ ಮೂಲಕ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಹೊಲಗಳಿಗೆ ನೀರು ಉಣಿಸಲಾಗದೆ ಬೆಳೆಗಳು ಬಾಡುತ್ತಿವೆ. ಆದರೆ ಅಧಿಕಾರಿಗಳು ಕಾಲುವೆ ದುರಸ್ತಿ ಮಾಡಿದ್ದೇವೆಂದು ಕಾಗದಪತ್ರಗಳಲ್ಲಿ ಬರೆದು ರೈತರನ್ನು ವಂಚಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿ.ಎಚ್. ಪಾಟೀಲ ಅವರೊಡನೆ ಮಾತಿನ ಚಕಮಕಿಯೂ ನಡೆಯಿತು.

`ಕಾಲುವೆಗಳನ್ನು ದುರಸ್ತಿ ಮಾಡಿ, ನೀರು ಬಿಡದಿದ್ದರೇ ಉಗ್ರ ಹೋರಾಟ ಮಾಡಲಾಗುವುದು~ ಎಂದು ರೈತರಾದ ಬಾಬುಗೌಡ ಪಾಟೀಲ, ಭೀಮನಗೌಡ ಪಾಟೀಲ, ಮುತ್ತಪ್ಪ ಮಾದರ, ಶಿವರಾಯಪ್ಪ ಮಾದರ, ಬಸಪ್ಪ ಕುರಿ, ದ್ಯಾವನಗೌಡ ಪಾಟೀಲ, ಶರಣಪ್ಪ ಮಡಿವಾಳರ ಎಚ್ಚರಿಸಿದರು.

ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ತೊನಶಾಳ ಅವರು ರೈತರನ್ನು ಸಮಾಧಾನಪಡಿಸಿ, ಕೂಡಲೇ ಕಾಲುವೆ ದುರಸ್ತಿ ಮಾಡಿಸಿ ನೀರು ಬರುವಂತೆ ನೋಡಿಕೊಳ್ಳಲಾಗುವುದು. ಅಷ್ಟೇ ಅಲ್ಲದೇ ಕಾಲುವೆಯುದ್ದಕ್ಕೂ ನೀರು ಪೋಲಾಗದಂತೆ ನಿಗಾ ವಹಿಸಲಾಗುವುದೆಂದು ಭರವಸೆ ನೀಡಿದರು. ಆದರೆ ರೈತರು ಇದಕ್ಕೆ ಮಣಿಯಲಿಲ್ಲ.

`ಈ ಕೂಡಲೇ ನಮ್ಮ ಜೊತೆಗೆ ಬಂದು ದುರಸ್ತಿ ಕೆಲಸ ಪ್ರಾರಂಭಿಸಿ, ನೀರು ಬಿಡಬೇಕು~ ಎಂದು ಪಟ್ಟು ಹಿಡಿದಾಗ ಅನಿವಾರ್ಯವಾಗಿ ಅಧಿಕಾರಿಗಳು ರೈತರೊಂದಿಗೆ ದುರಸ್ತಿ ಕೆಲಸ ಪ್ರಾರಂಭಿಸಲು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT