ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೀರಿನ ಅಕ್ರಮ ಬಳಕೆ ತಡೆಗೆ ಟಾಸ್ಕ್‌ಫೋರ್ಸ್'

Last Updated 22 ಜುಲೈ 2013, 6:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೀರು ಸರಬರಾಜು ಪೈಪ್‌ಲೈನ್‌ಗಳನ್ನು ಒಡೆದು ಅಕ್ರಮವಾಗಿ ನೀರು ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ನೀರು ಸರಬರಾಜು ವ್ಯವಸ್ಥೆ ಕುರಿತು ನಗರದ ಸರ್ಕಿಟ್ ಹೌಸ್‌ನಲ್ಲಿ ಭಾನುವಾರ ನಡೆದ ಶಾಸಕರು ಹಾಗೂ ಅಧಿಕಾರಿಗಳೊಂದಿನ ಸಭೆಯಲ್ಲಿ ಅವರು ಮಾತನಾಡಿದರು. ಪೈಪ್‌ಲೈನ್‌ಗಳಿಂದ ನೀರು ಕದಿಯುವುದರಿಂದ ಅದು ತಲುಪಬೇಕಾದವರಿಗೆ ತಲುಪುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಹಶೀಲ್ದಾರ್ ಅವರನ್ನು ಒಳಗೊಂಡ ತಂಡ ಪರಿಶೀಲನೆ ನಡೆಸಬೇಕು. ಒಂದು ತಿಂಗಳ ಒಳಗೆ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿ, ಅಕ್ರಮ ಬಳಕೆ ಮಾಡುತ್ತಿರುವರಿಗೆ ಎಚ್ಚರಿಕೆ ನೀಡಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಅವರು ಸೂಚಿಸಿದರು.

ಮಲಪ್ರಭಾ ನದಿಯಿಂದ ಧಾರವಾಡದ ಬೇಲೂರು ವರೆಗಿನ ನೀರಿನ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯ ಪರಿಶೀಲನೆ ನಡೆಸಬೇಕು. ನೀರು ಪೂರೈಕೆ ಸಂಬಂಧ ಇರುವ ತೊಡಕುಗಳ ನಿವಾರಣೆಗೆ ಕ್ರಮ ಜರುಗಿಸಬೇಕು  ಎಂದರು.

ಇದಕ್ಕೂ ಮುನ್ನ ಶಾಸಕ ವಿನಯ ಕುಲಕರ್ಣಿ `ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳನ್ನು ಒಡೆದು ಅಕ್ರಮವಾಗಿ ನೀರು ಪಡೆಯಲಾಗುತ್ತಿದೆ. ಇದರಿಂದ ಎಲ್ಲ ಜನರಿಗೆ ನೀರು ತಲುಪುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಂದಲೇ ಅಕ್ರಮ ಹೆಚ್ಚು' ಎಂದು ಸಭೆಯ ಗಮನ ಸೆಳೆದರು.

ಬೆಂಗಳೂರಿನಲ್ಲಿ ಸಭೆ: ಕಿರೇಸೂರು ಬಹುಗ್ರಾಮ ನೀರು ಯೋಜನೆ ಸೇರಿದಂತೆ ಜಿಲ್ಲೆಯ ವಿವಿಧ ನೀರು ಸರಬರಾಜು ಯೋಜನೆಗಳ ಕುರಿತು ಚರ್ಚಿಸಲು ಗ್ರಾಮೀಣಾಭಿವೃದ್ಧಿ, ನೀರಾವರಿ ಇಲಾಖೆಯ ಮುಖ್ಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಅವರನ್ನು ಒಳಗೊಂಡ ಸಭೆಯನ್ನು ಇನ್ನೊಂದು ವಾರದಲ್ಲಿ ಬೆಂಗಳೂರಿನಲ್ಲಿ ನಡೆಸುವುದಾಗಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ಒಟ್ಟು 9 ಯೋಜನೆಗಳ ಕಡತಗಳು ಸರ್ಕಾರದ ಮಟ್ಟದಲ್ಲಿ ಉಳಿದಿದ್ದು, ಇವುಗಳ ವಿಲೇವಾರಿ ಮತ್ತು ಅನುಷ್ಠಾನಕ್ಕೆ ಅಧಿಕಾರಿಗಳಿಗೆ ನಿದೇರ್ಶನ ನೀಡಲಾಗುವುದು ಎಂದರು.

ಹಳೆಯ ಪೈಪ್‌ಲೈನ್ ಬಳಕೆಗೆ ಯೋಜನೆ: ಮಲಪ್ರಭಾ ನದಿಯಿಂದ ಈ ಹಿಂದೆ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಕೆಯಾಗುತ್ತಿದ್ದ ಹಳೆಯ ಪೈಪ್‌ಲೈನ್ ಅನ್ನು ಬಳಸಿಕೊಂಡು ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಸಂಬಂಧ ಅಧ್ಯಯನ ನಡೆಸಲು ತಜ್ಞರ ತಂಡವನ್ನು ಕಳುಹಿಸುವುದಾಗಿ ಸಚಿವರು ಭರವಸೆ ನೀಡಿದರು.

ಹಳೆಯ ಪೈಪ್‌ಲೈನ್ ಬಳಕೆ ಕುರಿತು ಶಾಸಕ ವಿನಯ ಕುಲಕರ್ಣಿ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಈ ಸಂಬಂಧ ರೂ 45 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದ್ದು, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ 50-60 ಗ್ರಾಮಗಳಿಗೆ ಶುದ್ಧ ನೀರು ಒದಗಿಸಬಹುದಾಗಿದೆ ಎಂದು ತಿಳಿಸಿದರು.

ನಾಗರಹಳ್ಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜಿಗಾಗಿ ರೂ 9 ಲಕ್ಷ ಬಿಡುಗಡೆ ಮಾಡಲಾಗಿದ್ದು, ಈ ಸಂಬಂಧ ನಡೆದಿರುವ ಕಾಮಗಾರಿಯನ್ನು ಮೂರು ದಿನಗಳ ಒಳಗೆ ಪರಿಶೀಲಿಸಿ ವರದಿ ನೀಡುವಂತೆ ಸಚಿವ ಪಾಟೀಲ ಜಿಲ್ಲಾಧಿಕಾರಿಗೆ ತಿಳಿಸಿದರು. ಅಡ್ನೂರು-ಕಿತ್ತೂರು ನಡುವೆ ಬರುವ 85 ಎಕರೆ ವಿಸ್ತೀರ್ಣದ ಕ್ವಾರಿಯನ್ನು ಬಳಸಿಕೊಂಡು ಸುತ್ತಲಿನ ಹಳ್ಳಿಗಳಿಗೆ ನೀರು ಪೂರೈಸುವಂತೆ  ಶಾಸಕ ಎನ್.ಎಚ್. ಕೋನರಡ್ಡಿ ಮನವಿ ಮಾಡಿದರು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ  ಅಧಿಕಾರಿಗಳಿಗೆ ತಿಳಿಸಿದರು. ಗಳಗನಾಥ ಸಮೀಪದಿಂದ 26 ಗ್ರಾಮಗಳಿಗೆ ತುಂಗಭದ್ರಾ ನೀರು ಪೂರೈಕೆಗೆ  ರೂ 85 ಕೋಟಿ ವೆಚ್ಚದ ಯೋಜನೆ ರೂಪಿಸಿರುವುದಾಗಿ ಅಧಿಕಾರಿಗಳು  ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ. ಶಾಸಕರಾದ ಸಿ.ಎಚ್. ಶಿವಳ್ಳಿ, ಪ್ರಸಾದ್ ಅಬ್ಬಯ್ಯ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ಕಳ್ಳಿಮನಿ ಇತರರು ಸಭೆಯಲ್ಲಿದ್ದರು.
 

ಅಧಿಕಾರಿಗಳ ವಿರುದ್ಧ ಅಸಮಾಧಾನ
ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಕುಂದಗೋಳ ತಾಲ್ಲೂಕಿನ 15 ಗ್ರಾಮಗಳು ಹಾಗೂ ಹುಬ್ಬಳ್ಳಿ ತಾಲ್ಲೂಕಿನ ನಾಗರಹಳ್ಳಿಗೆ ಟ್ಯಾಂಕರ್ ನೀರು ಪೂರೈಕೆಗಾಗಿ ಜಿಲ್ಲಾಡಳಿತವು ತಿಂಗಳಿಗೆ ರೂ 24 ಲಕ್ಷ ವ್ಯಯಿಸುತ್ತಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಟ್ಯಾಂಕರ್ ನೀರಿನಿಂದ ಜನರ ದಾಹ ತೀರಿಸಲು ಸಾಧ್ಯವಿಲ್ಲ. ಅದಕ್ಕೊಂದು ಶಾಶ್ವತ ಪರಿಹಾರ ಬೇಕು. ಈ ಎಲ್ಲ ಗ್ರಾಮಗಳಲ್ಲಿ ಕನಿಷ್ಠ ಶುದ್ಧನೀರಿನ ಘಟಕಗಳನ್ನು ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎ. ಮೇಘಣ್ಣವರ ಮಾತನಾಡಿ `ಕಿರೇಸೂರಿನಲ್ಲಿ ರೂ16 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿದ್ದು, ಸೆಪ್ಟೆಂಬರ್15ರ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT