ಮತ್ತಷ್ಟು ಗಟ್ಟಿಗೊಂಡ ಯಡಿಯೂರಪ್ಪ ಕುಟುಂಬದ ಪ್ರಾಬಲ್ಯ

ಸೋಮವಾರ, ಜೂನ್ 17, 2019
28 °C
ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಎದುರು ಬಿಜೆಪಿಯ ಬಿ.ವೈ.ರಾಘವೇಂದ್ರಗೆ ಭರ್ಜರಿ ಗೆಲುವು

ಮತ್ತಷ್ಟು ಗಟ್ಟಿಗೊಂಡ ಯಡಿಯೂರಪ್ಪ ಕುಟುಂಬದ ಪ್ರಾಬಲ್ಯ

Published:
Updated:
Prajavani

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು 2,23,360 ಮತಗಳ ಭಾರಿ ಅಂತರದಿಂದ ಮೈತ್ರಿಕೂಟದ ಅಭ್ಯರ್ಥಿ ಎಸ್.ಮಧುಬಂಗಾರಪ್ಪ ಅವರನ್ನು ಮಣಿಸುವ ಮೂಲಕ ಯಡಿಯೂರಪ್ಪ ಕುಟುಂಬದ ಪ್ರಾಬಲ್ಯ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಐದು ತಿಂಗಳ ಹಿಂದೆ ನಡೆದಿದ್ದ ಉಪ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಪರಸ್ಪರ ಸೆಣಸಿದ್ದರು. ಆಗ 52 ಸಾವಿರ ಮತಗಳ ಅಲ್ಪ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿದ್ದ ರಾಘವೇಂದ್ರ ಆ ಗೆಲುವು ಅನಿರೀಕ್ಷಿತವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಮೂರೂ ಚುನಾವಣೆಗಳಲ್ಲೂ (2009, 2018, 2019) ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. 2009ರಿಂದ ಇಲ್ಲಿಯವರೆಗೂ ನಡೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ (ಒಂದು ಬಾರಿ ಬಿ.ಎಸ್.ಯಡಿಯೂರಪ್ಪ) ಸತತ ಗೆಲುವು ದಾಖಲಿಸುವ ಮೂಲಕ ಲೋಕಸಭಾ ಕ್ಷೇತ್ರ ಪಕ್ಷದ ಭದ್ರಕೋಟೆ ಎಂಬುದನ್ನು ನಿರೂಪಿಸಿದೆ. 2009ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಬಂಗಾರಪ್ಪ ಅವರನ್ನು 52,893 ಮತಗಳ ಅಂತರದಿಂದ, 2018ರ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರನ್ನು 52,148 ಮತಗಳ ಅಂತರದಿಂದ ಮಣಿಸಿದ್ದರು. ಈ ಬಾರಿ ಗೆಲುವಿನ ಅಂತರ ನಾಲ್ಕು ಪಟ್ಟು ಜಾಸ್ತಿಯಾಗಿದೆ.

ವರ್ಷದ ಹಿಂದೆ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ ನಗರ, ಗ್ರಾಮಾಂತರ, ತೀರ್ಥಹಳ್ಳಿ, ಬೈಂದೂರು ಕ್ಷೇತ್ರಗಳಲ್ಲಿ ಬಿಜೆಪಿ, ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿತ್ತು. ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲೂ ನೆಲೆ ಕಳೆದುಕೊಂಡಿತ್ತು. ಉಪ ಚುನಾವಣೆಯಲ್ಲಿ ಸೊರಬ, ಸಾಗರ, ಭದ್ರಾವತಿ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳಿಗೆ ಮುನ್ನಡೆ ಲಭಿಸಿತ್ತು. ಈ ಬಾರಿ ಎಲ್ಲ 8 ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ.

ಗೌಣವಾದ ಸ್ಥಳೀಯ ಸಮಸ್ಯೆಗಳು:

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌, ಕಾಂಗ್ರೆಸ್ ನಾಯಕರು ಕ್ಷೇತ್ರದ ನೀರಾವರಿ ಯೋಜನೆಗಳು, ಅರಣ್ಯವಾಸಿಗಳ ಸಮಸ್ಯೆ, ಬಗರ್‌ಹುಕುಂ, ತುಮರಿ ಸೇತುವೆ, ಮಂಗನಕಾಯಿಲೆ ಮೊದಲಾದ ಸ್ಥಳೀಯ ಸಮಸ್ಯೆಗಳನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಮತಯಾಚನೆ ಮಾಡಿದ್ದರು. ಬಿಜೆಪಿ ದೇಶದ ಭದ್ರತೆ, ಮೋದಿ ವರ್ಚಸ್ಸನ್ನೇ ಬಂಡವಾಳ ಮಾಡಿಕೊಂಡಿತ್ತು. ಮತದಾರರು ಸ್ಥಳೀಯ ಸಮಸ್ಯೆಗಳಿಗೆ ಮಣೆ ಹಾಕದೇ ಬಿಜೆಪಿ ಬೆಂಬಲಿಸಿದ್ದಾರೆ.

ಬಲ ಕಳೆದುಕೊಂಡ ಮೈತ್ರಿ ಪಕ್ಷಗಳು:

1999ರ ಚುನಾವಣೆಯ ನಂತರ ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ ಬಲ ಕಳೆದುಕೊಂಡಿತ್ತು. ಮತ್ತೆ ಚೇತರಿಸಿಕೊಂಡಿಲ್ಲ. ಜೆಡಿಎಸ್‌ ನೆಲೆ ಕಂಡುಕೊಂಡಿದ್ದೇ 2013ರ ವಿಧಾನಸಭಾ ಚುನಾವಣೆಯಲ್ಲಿ. ಅಂದು 8 ಕ್ಷೇತ್ರಗಳಲ್ಲಿ ಮೂರರಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಆದರೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಒಂದೂ ಸ್ಥಾನ ಗೆದ್ದಿರಲಿಲ್ಲ. ಮಧು ಬಂಗಾರಪ್ಪ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ ಕಾರಣಕ್ಕೇ 2018ರ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸಾಕಷ್ಟು ಪೈಪೋಟಿ ನೀಡಲು ಸಾಧ್ಯವಾಗಿತ್ತು. ಈ ಬಾರಿ ಮೋದಿ ಅಲೆಯ ಮುಂದೆ ಮೈತ್ರಿ ನಾಯಕರ ಯಾವ ಕಸರತ್ತೂ ಫಲಕೊಟ್ಟಿಲ್ಲ

ಬಲಗೊಂಡ ಬಿಜೆಪಿ ಶಕ್ತಿ:

1989ರಿಂದ 1998ರವರೆಗೂ ಕ್ಷೇತ್ರದಲ್ಲಿ ಬಿಜೆಪಿ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತೆ ಇತ್ತು. 1991ರ ಚುನಾವಣೆಯಲ್ಲಿ ಅಂದು ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಚುನಾವಣಾ ಕಣಕ್ಕೆ ಇಳಿದರೂ ಭಾರಿ ಮತಗಳ ಅಂತರದ ಸೋಲು ಅನುಭವಿಸಿದ್ದರು. 1998ರಲ್ಲಿ ಆಯನೂರು ಮಂಜುನಾಥ್ ಬಿಜೆಪಿಗೆ ಮೊದಲ ಗೆಲುವು ದೊರಕಿಸಿಕೊಟ್ಟಿದ್ದರು. 2004ರಲ್ಲಿ ಬಂಗಾರಪ್ಪ ಬಿಜೆಪಿ ಸೇರಿದ ಪರಿಣಾಮ ಬಿಜೆಪಿ ಬಲ ಗಣನೀಯವಾಗಿ ವೃದ್ಧಿಸಿತ್ತು. ನಂತರ 2009ರಿಂದ ಇಲ್ಲಿಯವರೆಗೂ ಬಿಜೆಪಿಯದೇ ಅಧಿಪತ್ಯ. ಸತತ ನಾಲ್ಕು ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದ ಮೇಲಿನ ಹಿಡಿತ ಮತ್ತಷ್ಟು ಗಟ್ಟಿ ಮಾಡಿಕೊಂಡಿದೆ. 

ಮೊದಲ ಬಾರಿ ಅಧಿಕ ಮತಗಳಿಕೆ:

ಲೋಕಸಭಾ ಚುನಾವಣೆಯ ಇತಿಹಾಸದಲ್ಲಿ ಬಿಜೆಪಿ ಇದೇ ಮೊದಲ ಬಾರಿ ಅತ್ಯಧಿಕ ಮತಗಳನ್ನು ಪಡೆದಿದೆ. 2014ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು 6,06,216 ಮತಗಳನ್ನು ಪಡೆದಿದ್ದರು. ಅದೇ ಇದುವರೆಗೆ ಬಿಜೆಪಿ ಪಡೆದ ಅತ್ಯಧಿಕ ಮತಗಳು. ಈ ಬಾರಿ 7,29,872 ಮತಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !