ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಸಂಸ್ಕರಣಾ ಘಟಕ ಆರಂಭ ವಿಳಂಬ

ಟೆಂಡರ್ ಪ್ರಕ್ರಿಯೆಯಲ್ಲಿ 9 ಮಂದಿ ಭಾಗಿ; ಇನ್ನೂ ಅಂತಿಮಗೊಳ್ಳದ ಸ್ಥಳ
Last Updated 16 ಜನವರಿ 2019, 13:08 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಮಾವು ಬೆಳೆಗಾರರ ಬಹುದಿನಗಳ ಬೇಡಿಕೆಯಾದ ಸಂಸ್ಕರಣಾ ಘಟಕವು ಈ ವರ್ಷ ಕಾರ್ಯಾರಂಭ ಮಾಡುವ ಸಾಧ್ಯತೆ ಕಡಿಮೆ.

ತೋಟಗಾರಿಕೆ ಇಲಾಖೆ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ತೆರೆಯಲು ಉದ್ದೇಶಿಸಲಾಗಿದೆ. ಸದ್ಯ ಆಸಕ್ತರಿಂದ ಟೆಂಡರ್ ಆಹ್ವಾನಿಸಿದ್ದು, 9 ಹೂಡಿಕೆದಾರರನ್ನು ಮಾತುಕತೆಗೆ ಕರೆಯಲಾಗಿದೆ. ಅದನ್ನು ಹೊರತುಪಡಿಸಿ ಹೆಚ್ಚಿನ ಪ್ರಗತಿ ಆಗಿಲ್ಲ.

ಸಂಸ್ಕರಣಾ ಘಟಕಕ್ಕಾಗಿ ರಾಮನಗರ ತಾಲ್ಲೂಕಿನ ಹರಿಸಂದ್ರ, ಚನ್ನಪಟ್ಟಣದ ಕಣ್ವ ಜಲಾಶಯದ ಬಳಿ ಸೇರಿದಂತೆ ಹಲವು ಕಡೆ ಸ್ಥಳ ಗುರುತು ಮಾಡಲಾಗಿತ್ತು. ಆದರೆ ಯಾವುದೂ ಅಂತಿಮಗೊಂಡಿಲ್ಲ. ಹೂಡಿಕೆದಾರರ ಅಗತ್ಯಕ್ಕೆ ತಕ್ಕಂತೆ ಸ್ಥಳ ಗುರುತಿಸಲು ತೀರ್ಮಾನಿಸಿರುವ ಕಾರಣ ಜಾಗ ಗುರುತಿಸುವುದಕ್ಕೆ ಹಿನ್ನಡೆ ಆಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಕೋಲಾರ ಹಾಗೂ ರಾಮನಗರ ಜಿಲ್ಲೆಗಳು ಮೊದಲ ಎರಡು ಸ್ಥಾನದಲ್ಲಿ ಇವೆ. ಇವುಗಳ ಸಮೀಪ ಅಲ್ಲಲ್ಲಿ ಅಲ್ಪ ಪ್ರಮಾಣದ ಸಂಸ್ಕರಣಾ ಘಟಕಗಳು ಇವೆ. ಕೆಲವು ಕಾರ್ಖಾನೆಗಳು ಮಾವು ಋತುವಿನಲ್ಲಿ ಹಣ್ಣನ್ನು ಪಲ್ಪ್‌ ಆಗಿ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಅದನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಎಲ್ಲಿಯೂ ಬೃಹತ್‌ ಆದ ಸಂಸ್ಕರಣಾ ಘಟಕಗಳು ಇಲ್ಲ.

ಆಂಧ್ರಪ್ರದೇಶ ಚಿತ್ತೂರಿನಲ್ಲಿ ಬೃಹತ್ ಸಂಸ್ಕರಣಾ ಘಟಕವಿದ್ದು, ಈ ಭಾಗದ ಹಣ್ಣು ಬಹುತೇಕ ಅಲ್ಲಿಗೆ ಸರಬರಾಜಾಗುತ್ತದೆ. ಕೆಲವು ಉದ್ಯಮಿಗಳು ಮುಂಬೈಗೂ ಸರಬರಾಜು ಮಾಡುತ್ತಾರೆ. ಕಳೆದ ವರ್ಷ ಮಾವು ಋತುವಿನಲ್ಲಿ ಆಂಧ್ರಪ್ರದೇಶ ಸರ್ಕಾರವು ಕರ್ನಾಟಕದ ಹಣ್ಣಿನ ವಾಹನಗಳಿಗೆ ತಡೆ ಒಡ್ಡಿದ್ದರಿಂದ ಇಲ್ಲಿ ಉತ್ಪನ್ನದ ಬೆಲೆ ಕುಸಿದು ರೈತರು ತೀವ್ರ ಸಂಕಷ್ಟ ಎದುರಿಸಿದ್ದರು. ಪ್ರತಿ ಕೆ.ಜಿ.ಗೆ ₨2–3ರ ದರದಲ್ಲಿ ಮಾವಿನ ಮಾರಾಟ ನಡೆದಿದ್ದು, ರೈತರು ಬೀದಿಗೆ ಹಣ್ಣು ಸುರಿದು ಪ್ರತಿಭಟನೆ ವ್ಯಕ್ತಪಡಿಸಿದ್ದರು. ಹೀಗಾಗಿ ಇಲ್ಲಿಯೇ ಸಂಸ್ಕರಣಾ ಘಟಕ ಆರಂಭಿಸಬೇಕು ಎನ್ನುವುದು ಈ ಭಾಗದ ರೈತರ ಒಕ್ಕೊರಲ ಒತ್ತಾಯವಾಗಿತ್ತು.

ಮಾವು ಮೌಲ್ಯವರ್ಧನೆ ಆದಲ್ಲಿ ರೈತರಿಗೆ ಆಗುವ ನಷ್ಟದ ಪ್ರಮಾಣವನ್ನು ತಗ್ಗಿಸಬಹುದು ಎನ್ನುವುದು ಬೆಳೆಗಾರರ ಅಭಿಪ್ರಾಯ. ‘ಜಿಲ್ಲೆಯಲ್ಲಿ ಬಹಳ ಹಿಂದೆಯೇ ಮಾವು ಸಂಸ್ಕರಣಾ ಘಟಕವು ಆರಂಭವಾಗಬೇಕಿತ್ತು. ಸದ್ಯ ಸಂಸ್ಕರಣಾ ಘಟಕಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಸಂಬಂಧಿಸಿದ ಕಂಪನಿಯ ಜೊತೆ ಒಡಂಬಡಿಕೆ, ಕಟ್ಟಡ ಕಾಮಗಾರಿ ಮೊದಲಾದ ಕೆಲಸಗಳಿಗೆ ಒಂದು ವರ್ಷ ಬೇಕೆ ಬೇಕು. ಹೀಗಾಗಿ ಈ ವರ್ಷ ಘಟಕ ಕಾರ್ಯಾರಂಭ ಮಾಡಲು ಆಗದು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಮುಖಂಡ ಸಿ. ಪುಟ್ಟಸ್ವಾಮಿ.

ಮಾವು ಬೆಳೆಗಾರರ ಹಿತಾಸಕ್ತಿ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ಬೆಳೆ ಹೆಚ್ಚಿರುವ ಕಡೆಗಳಲ್ಲಿ ಸಂಸ್ಕರಣಾ ಘಟಕಗಳನ್ನು ಆರಂಭಿಸಬೇಕು ಎನ್ನುವುದು ಬೆಳೆಗಾರರ ಒತ್ತಾಯವಾಗಿದೆ.

ಹಿಂದೇಟು ಏಕೆ?
ಬೃಹತ್ ಸಂಸ್ಕರಣಾ ಘಟಕಗಳ ಆರಂಭಕ್ಕೆ ದೊಡ್ಡ ಕಂಪನಿಗಳು ಹಿಂದೇಟು ಹಾಕುತ್ತಿವೆ. ಬೇಸಿಗೆಯಲ್ಲಿ ಕೇವಲ ಮೂರ್ನಾಲ್ಕು ತಿಂಗಳ ಕಾಲ ಮಾತ್ರ ಉತ್ಪನ್ನ ದೊರೆಯಲಿದ್ದು, ಉಳಿದ ಅವಧಿಯಲ್ಲಿ ಘಟಕಗಳನ್ನು ಖಾಲಿ ಬಿಟ್ಟರೆ ನಷ್ಟ ಎನ್ನುವುದು ಇದಕ್ಕೆ ಕಾರಣ. ಹೀಗಾಗಿ ಮಾವಿನೊಟ್ಟಿಗೆ ಇತರ ಹಣ್ಣುಗಳ ಸಂಸ್ಕರಣಾ ವ್ಯವಸ್ಥೆಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ಘಟಕಗಳನ್ನು ಆರಂಭಿಸಬೇಕು ಎಂಬುದು ರೈತರ ಅಭಿಪ್ರಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT