ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಫಲವತ್ತತೆಯತ್ತ ಮಂಜುನಾಥ ಚಿತ್ತ

ಸಾವಯವ ಕೃಷಿ ಪದ್ಧತಿ ಮೂಲಕ ಸಮೃದ್ಧ ಬೆಳೆ
Last Updated 9 ಏಪ್ರಿಲ್ 2021, 1:46 IST
ಅಕ್ಷರ ಗಾತ್ರ

ಮುಂಡರಗಿ: ಪಟ್ಟಣದ ಯುವ ರೈತ ಹಾಗೂ ಸಮಾಜ ಸೇವಕ ಮಂಜುನಾಥ ಇಟಗಿ ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.

ಮಂಜುನಾಥ ಒಟ್ಟು 8.14 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಸಾವಯವ ಕೃಷಿ ಪದ್ಧತಿ ಮೂಲಕ ಕಲ್ಲಂಗಡಿ, ಬ್ಯಾಡಗಿ ಮೆಣಸಿನಕಾಯಿ, ಶೇಂಗಾ ಹಾಗೂ ಮತ್ತಿತರ ಬೆಳೆಗಳನ್ನು ಬೆಳೆದಿದ್ದಾರೆ.

ಜಮೀನಿನಲ್ಲಿ ನಿರ್ಮಿಸಿರುವ ಸಿಮೆಂಟ್ ತೊಟ್ಟಿಯಲ್ಲಿ ಗೋ ಕೃಪಾಮೃತವನ್ನು ತಯಾರಿಸುತ್ತಾರೆ. 1 ಲೀಟರ್ ಶುದ್ಧ ನೀರಿಗೆ 2 ಕೆ.ಜಿ. ಬೆಲ್ಲ, 2 ಲೀಟರ್ ದೇಸಿ ಆಕಳ ಹಾಲು, 2 ಲೀಟರ್ ತಾಜಾ ಮಜ್ಜಿಗೆಯನ್ನು 200 ಲೀಟರ್ ಸಾಮರ್ಥ್ಯ ಬ್ಯಾರಲ್‌ಗೆ ಹಾಕಲಾಗುತ್ತದೆ. ಹೀಗೆ ತಯಾರಿಸಿದ ದ್ರಾವಣವನ್ನು ಎಂಟು ದಿನಗಳ ಕಾಲ ಮುಚ್ಚಿಡಲಾಗುತ್ತದೆ. ಎಂಟು ದಿನಗಳ ಅವಧಿಯಲ್ಲಿ ದ್ರಾವಣದಲ್ಲಿ ಹಲವಾರು ನೈಸರ್ಗಿಕ ರಾಸಾಯನಿಕ ಪ್ರಕ್ರಿಯೆಗಳು ಜರುಗುತ್ತವೆ. ದ್ರಾವಣವು ಸತ್ವಭರಿತವಾಗುತ್ತದೆ. ಸಿದ್ಧಗೊಂಡ ದ್ರಾವಣವನ್ನು ಗಿಡಗಳಿಗೆ ಸಿಂಪಡಿಸಲಾಗುತ್ತದೆ.

ಇದರಿಂದಾಗಿ ಗಿಡಗಳ ಎಲೆ ಹಾಗೂ ಮತ್ತಿತರ ಭಾಗಗಳಲ್ಲಿರುವ ಸೂಕ್ಷ್ಮ ಕೀಟಗಳು ಕ್ರಮೇಣ ನಾಶವಾಗುತ್ತದೆ. ಮತ್ತು ರೋಗವು ಸಂಪೂರ್ಣವಾಗಿ ಹತೋಟಿಗೆ ಬರುತ್ತದೆ. ಬಾಹ್ಯದಿಂದ ಅಗತ್ಯ ಪೋಷಕಾಂಶಗಳು ಗಿಡಗಳಿಗೆ ದೊರೆಯುತ್ತದೆ.

ಕಳೆದ ವರ್ಷ ಕೊಲ್ಲಾಪೂರ ಕನೇರಿ ಮಠದ ಅಶ್ರಯದಲ್ಲಿ ಕುಂದಗೋಳದಲ್ಲಿ ನಡೆದ ಸಾವಯವ ಕೃಷಿ ಪದ್ಧತಿಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮಂಜುನಾಥ ಅವರು ಜೀವಾಮೃತ ತಯಾರಿಕೆಯ ತರಬೇತಿಯನ್ನು ಪಡೆದುಕೊಂಡಿದ್ದಾರೆ. ದೇಸಿ ಆಕಳ ಸಗಣಿ, ಗೋಮೂತ್ರ, ಯಾವುದಾದರೂ ದ್ವಿದಳ ಧಾನ್ಯದ ಹಿಟ್ಟು, ಸಾವಯವ ಬೆಲ್ಲಗಳನ್ನು ಬಳಸಿ ತಮ್ಮ ಜಮೀನಿನಲ್ಲಿಯೇ ಜೀವಾಮೃತವನ್ನು ತಯಾರಿಸುತ್ತಿದ್ದಾರೆ.

ಜೀವಾಮೃತ ಹಾಗೂ ಗೋ ಕೃಪಾಮೃತ ತಯಾರಿಸುವ ಸಲುವಾಗಿ ಮಂಜುನಾಥ ಅವರು ತಮ್ಮ ತೋಟದ ಮನೆಯಲ್ಲಿ ಮೂರು ದೇಸಿ ಆಕಳುಗಳನ್ನು ಸಾಕಿದ್ದಾರೆ. ಅವುಗಳಿಂದ ದೊರೆಯುವ ಸಗಣಿ ಹಾಗೂ ಗೋಮೂತ್ರಗಳನ್ನು ಬಳಸಿ ಜೀವಾಮೃತ ಹಾಗೂ ಗೋ ಕೃಪಾಮೃತ ತಯಾರಿಸುತ್ತಿದ್ದಾರೆ.

ಸಿದ್ಧಗೊಂಡ ಜೀವಾಮೃತ್ವನ್ನು ಕೊಳವೆಬಾವಿಯ ನೀರಿನೊಂದಿಗೆ ಗಿಡಗಳಿಗೆ ಪೂರೈಸಲಾಗುತ್ತಿದೆ. ಇದರಿಂದಾಗಿ ಗಿಡಗಳಿಗೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಸಹಜವಾಗಿ ಇಳುವರಿ ಪ್ರಮಾಣವೂ ಹೆಚ್ಚಾಗುತ್ತದೆ.

ಈಗ ಅವರ ಜಮೀನಿನಲ್ಲಿ ನಿಯಮಿತವಾಗಿ ಬೆಳೆಗಳಿಗೆ ಜೀವಾಮೃತ ಹಾಗೂ ಗೋ ಕೃಪಾಮೃತಗಳನ್ನು ಬಳಸಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳಿಗೆ ವಿದಾಯ ಹೇಳಿರುವ ಮಂಜುನಾಥ, ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಸಾಕಷ್ಟು ಇಳುವರಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

ಹೆಚ್ಚು ಬೆಳೆ ಬೆಳೆಯುವ ಭರಾಟೆಯಲ್ಲಿ ರಾಸಾಯನಿಕಗಳನ್ನು ಬಳಸಿ ಭೂಮಿಯ ಫಲವತ್ತತೆಯನ್ನು ನಾಶ ಮಾಡುವುದಕ್ಕಿಂತ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಉತ್ತಮ

- ಮಂಜುನಾಥ ಇಟಗಿ ಯುವ ರೈತ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT