ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಹಿನ್ನಡೆ ಆಗಿಲ್ಲ: ಭಾಲ್ಕಿ ಶ್ರೀ

Last Updated 17 ಅಕ್ಟೋಬರ್ 2021, 4:54 IST
ಅಕ್ಷರ ಗಾತ್ರ

ಗದಗ: ‘ಲಿಂಗಾಯತ ಧರ್ಮ ಎಂದೆಂದಿಗೂ ಸ್ವತಂತ್ರ ಧರ್ಮ. ಹಿಂದೆಯೂ ಇತ್ತು. ಇಂದೂ ಇದೆ. ಹಾಗೆಯೇ, ಮುಂದೆಯೂ ಇರುತ್ತದೆ. ಆದರೆ, ಅದಕ್ಕೆ ಸರ್ಕಾರದ ಮಾನ್ಯತೆ ಬೇಕಿತ್ತು. ಅದಕ್ಕೆ ಪೂರಕವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರು ಐತಿಹಾಸಿಕ ದಾಖಲೆಗಳನ್ನು ಸರ್ಕಾರಕ್ಕೆ ಒದಗಿಸಿಕೊಟ್ಟಿದ್ದಾರೆ’ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಹೇಳಿದರು.

ಶನಿವಾರ ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ತೃತೀಯ ಪುಣ್ಯಸ್ಮರಣೆ ‘ಮರಣವೇ ಮಹಾನವಮಿ’ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಲಿಂಗಾಯತ ಧರ್ಮ ಎಲ್ಲೂ ವಿಂಗಡಣೆ ಆಗಿಲ್ಲ. ಅದೇರೀತಿ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಹಿನ್ನಡೆಯೂ ಆಗಿಲ್ಲ. ಲಿಂಗಾಯತ ಧರ್ಮ ಮತ್ತೊಮ್ಮೆ ಬೆಳಗಲಿದೆ. ತೋಂಟದ ಸಿದ್ಧರಾಮ ಶ್ರೀಗಳ ನೇತೃತ್ವದಲ್ಲಿ ಸಂಘಟಿತ ಹೋರಾಟ ನಡೆಸಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಪ್ರಯತ್ನಿಸಬೇಕು’ ಎಂದು ಹೇಳಿದರು.

‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಿದರು. ಅದರಂತೆ ಈ ವಿಷಯದಲ್ಲಿ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡುವಂತಹ ವರದಿಯನ್ನು ನಾಗಮೋಹನ್‌ದಾಸ್‌ ಅವರು ನೀಡಿದ್ದಾರೆ’ ಎಂದುಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ತಿಳಿಸಿದರು.

ಮುಂಡರಗಿ– ಬೈಲೂರು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಂದರ್ಭದಲ್ಲಿ ಕೆಲವರು ಬಸವ ತತ್ವದ ಅನುಯಾಯಿಗಳಿಂದ, ತುಕಡೆ ತುಕಡೆ ಗ್ಯಾಂಗ್‌ಗಳಿಂದ ರಾಷ್ಟ್ರ ತುಂಡಾಗುತ್ತಿದೆ ಎಂದು ಆರೋಪ ಮಾಡಿದರು. ಆದರೆ, ಅಖಂಡ ಭಾರತವನ್ನು ಒಡೆದಿಡ್ಡು ವಿದೇಶಿಗರಲ್ಲ. ಚಾತುವರ್ಣ ವ್ಯವಸ್ಥೆಯ ಮನಸ್ಸಿನ ವ್ಯಕ್ತಿಗಳು ಭಾರತವನ್ನು ತುಕಡೆ ತುಕಡೆ ಮಾಡಿದರು. ಸಾಮಾಜಿಕ ನ್ಯಾಯ ಬೋಧಿಸಿದ ಬಸವಣ್ಣನವರು ಎಂದೆಂದಿಗೂ ವಿಶ್ವಗುರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT