ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಸವಣ್ಣನವರ ತತ್ವಸಿದ್ದಾಂತಗಳು ಸರ್ವಕಾಲಿಕ’

Published 10 ಮೇ 2024, 15:35 IST
Last Updated 10 ಮೇ 2024, 15:35 IST
ಅಕ್ಷರ ಗಾತ್ರ

ನರಗುಂದ: ಕಾಯಕನಿಷ್ಠೆ ಧರ್ಮದ ಬುನಾದಿಯಾಗಬೇಕು. ಇದನ್ನು ಬಲವಾಗಿ ನಂಬಿದ್ದ ಸಾಂಸ್ಕೃತಿಕ ರಾಯಬಾರಿ ಮಹಾಮಾನವತಾವಾದಿ ಬಸವಣ್ಣನವರ ತತ್ವಸಿದ್ದಾಂತಗಳು ಸರ್ವಕಾಲಿಕ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ದೊರೆಸ್ವಾಮಿ ವಿವಿದೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ಶುಕ್ರವಾರ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಸರ್ವರಿಗೂ ಸಮಾನತೆಯನ್ನು ಬಯಸಿದ್ದ ಬಸವಣ್ಣ ಈ ನಾಡಿನ ಶ್ರೇಷ್ಠ ಸಮಾಜ ಸುಧಾರಕ. 12ನೇ ಶತಮಾನದಲ್ಲಿ ಬಲವಾಗಿ ಬೇರೂರಿದ್ದ ಮೂಢನಂಬಿಕೆ, ಅನ್ಯಾಯ-ಅನಾಚಾರದ ವಿರುದ್ದ ಸಿಡಿದೆದ್ದು ಬಸವಣ್ಣ ವಿಶ್ವ ಗುರುವಾಗಿದ್ದಾರೆ. ವಚನಗಳ ಮೂಲಕ ಹೊಸಕ್ರಾಂತಿಯನ್ನು ಮಾಡಿ ಸಮಸಮಾಜ ಕನಸನ್ನು ಕಂಡಿದ್ದ ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಹೇಳಿದರು.

ಅನುಭವ ಮಂಟಪವನ್ನು ಸ್ಥಾಪಿಸಿ ಸರ್ವರಿಗೂ ಸಮಾನವಕಾಶವನ್ನು ಕಲ್ಪಿಸಿ ಕಾಯಕ-ದಾಸೋಹದ ಪರಿಕಲ್ಪನೆಯನ್ನು ನೀಡಿದ ಅವರು ಜಗತ್ತಿನ ಮೊದಲ ಸಂಸತ್ತಿನ ಸಂಸ್ಥಾಪಕರಾಗಿದ್ದಾರೆ. ಅವರ ಆದರ್ಶಗಳ ಪಾಲನೆಗೆ ಮುಂದಾಗಬೇಕು ಎಂದು ತಿಳಿಸಿದರು.

ಶಿವಯೋಗಿ ದೇವರು ಮಾತನಾಡಿ, ಮಹಾಮಾನವತಾವಾದಿ ಬಸವಣ್ಣನವರು ಪ್ರತಿಪಾದಿಸಿದ ತತ್ವಸಿದ್ದಾಂತಗಳು ಇಂದಿಗೂ ವಿಶ್ವದಲ್ಲಿ ಆದರ್ಶಪ್ರಾಯವಾಗಿವೆ. ಹೋರಾಟಕ್ಕೆ ಇನ್ನೊಂದು ಹೆಸರೆ ಬಸವಣ್ಣ. ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೀರ್ತಿ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ. ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸಿ ಬಸವಜಯಂತಿ ಆಚರಣೆ ಸಾರ್ಥಕಗೊಳಿಸಬೇಕು ಎಂದರು.

ತಾಲ್ಲೂಕು ಆಸ್ಪತ್ರೆಯ ವೈದ್ಯ ಡಾ.ಸಂತೋಷ ಹನಜಿ, ಮಹಾಂತೇಶ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಮೌಲಾಸಾಬ ಠಾನೇದ, ರಾಜೇಶ್ವರ ಪಿಳ್ಳೆ, ಸಾಹಿತಿ ವೀರನಗೌಡ ಮರಿಗೌಡ್ರ, ಶಿವಯ್ಯ ಬಳಗಾನೂರಮಠ, ಮಹಾಂತೇಶ ಹಿರೇಮಠ, ವೀರಯ್ಯ ಸಾಲಿಮಠ, ಬಸವರಾಜ ಹಡಪದ, ಮರಗಪ್ಪ ಬಂಡೆನ್ನವರ, ಬಿ ಸಿ ಐನಾಪೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT