ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ |' ಕ್ಯಾನ್ಸರ್: ಆರಂಭಿಕ ಹಂತದಲ್ಲೇ ಪತ್ತೆ ಮುಖ್ಯ'

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಹೇಳಿಕೆ
Published 5 ಫೆಬ್ರುವರಿ 2024, 14:50 IST
Last Updated 5 ಫೆಬ್ರುವರಿ 2024, 14:50 IST
ಅಕ್ಷರ ಗಾತ್ರ

ಗದಗ: ‘30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕಡ್ಡಾಯವಾಗಿ ವರ್ಷದಲ್ಲಿ ಒಂದು ಬಾರಿ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಣಾ ಘಟಕ, ಜಿಲ್ಲಾ ಎನ್‌ಸಿಡಿ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಮ್ಸ್, ಜಿಲ್ಲಾ ಆಯುಷ್‌ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಮ್ಸ್ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜು, ಸ್ಫೂರ್ತಿ ಪ್ಯಾರಾ ಮೆಡಿಕಲ್ ಕಾಲೇಜು, ಮುನ್ಸಿಪಲ್ ಕಾಲೇಜಿನಿಂದ ಸೋಮವಾರ ನಡೆದ ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆರೈಕೆಯ ಅಂತರವನ್ನು ಕಡಿತಗೊಳಿಸಿ’ ಎಂಬುದು ಈ ವರ್ಷದ ಘೋಷವಾಕ್ಯ. ವಿಶ್ವದಲ್ಲಿ ಪ್ರತಿವರ್ಷ ಸುಮಾರು 1.25 ಕೋಟಿ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು, ಅವರಲ್ಲಿ ಸುಮಾರು 90 ಲಕ್ಷ ಮಂದಿ ಮರಣ ಹೊಂದುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು 16 ಲಕ್ಷ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು, ಅವರಲ್ಲಿ ಸುಮಾರು 9 ಲಕ್ಷ ಮಂದಿ ಮರಣ ಹೊಂದುತ್ತಿದ್ದಾರೆ. ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ರೋಗದ ಪರೀಕ್ಷೆಯ ವಿಧಾನವು ಸರಳವಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆ ಮಾಡಿದ್ದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ತಿಳಿಸಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಗತ್ತಿನಲ್ಲಿ ಪ್ರತಿವರ್ಷ ಅಸಾಂಕ್ರಾಮಿಕ ಕಾಯಿಲೆಗಳಿಂದ ಸಾವು ಸಂಭವಿಸುತ್ತಿರುವುದರಲ್ಲಿ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಅನಿಯಂತ್ರಿತ ಜೀವಕೋಶಗಳ ವಿಭಜನೆಗಳಿಂದ ಕ್ಯಾನ್ಸರ್ ಬರುತ್ತದೆ. ಅವುಗಳಲ್ಲಿ ಈಗಾಗಲೇ ಗರ್ಭಕಂಠದ ಕ್ಯಾನ್ಸರ್ ತಡೆಯಲು ಚುಚ್ಚುಮದ್ದು ಲಭ್ಯವಿದ್ದು, ಮುಂದಿನ ದಿನಗಳಲ್ಲಿ  9ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಚುಚ್ಚುಮದ್ದು ನೀಡಲಾಗುವುದು’ ಎಂದು ತಿಳಿಸಿದರು.

ರಾಷ್ಟ್ರೀಯ ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಾಮಾನ್ಯ ಕ್ಯಾನ್ಸರ್‌ಗಳಾದ ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಜಿಲ್ಲೆಯ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಮಾಡಲಾಗುತ್ತಿದ್ದು, ಮೂವತ್ತು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅರುಂಧತಿ ಕುಲಕರ್ಣಿ, ಪೊಲೀಸ್ ಸಬ್‍ ಇನ್‌ಸ್ಪೆಕ್ಟರ್ ವಿಜಯಕುಮಾರ ತಳವಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೀತ್‌ ಖೋನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ್ ಚವ್ಹಾಣ, ಡಾ. ಮಧುಮತಿ, ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಮುನ್ಸಿಪಲ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಎಸ್.ಪೀರಾ ನಿರೂಪಿಸಿದರು.

Quote - ಬದಲಾದ ಜೀವನಶೈಲಿ ತಂಬಾಕು ಸೇವನೆ ಅಹಿತಕರ ಆಹಾರಾಭ್ಯಾಸ ಅಧಿಕ ತೂಕ ಸೇರಿದಂತೆ ವಿವಿಧ ಕಾರಣಗಳಿಂದ ಕ್ಯಾನ್ಸರ್‌ ಬರುತ್ತಿದ್ದು ದೇಶದಲ್ಲಿ ಸಾವು ನೋವುಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಜಾಗರೂಕರಾಗಿರಬೇಕು ಡಾ.ಎಸ್.ಎಸ್.ನೀಲಗುಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

Quote - ಕ್ಯಾನ್ಸರ್ ಕಾಯಿಲೆಗೆ ಪರಿಪೂರ್ಣ ಚಿಕಿತ್ಸೆಯ ಅವಶ್ಯಕತೆಯಿದ್ದು ಈ ಕುರಿತು ಜಾಗೃತಿ ಮೂಡಿಸಬೇಕು. ಆರಂಭಿಕ ಹಂತದಲ್ಲಿ ಪರೀಕ್ಷೆ ಮಾಡಿದಲ್ಲಿ ಶೇ 40ರಷ್ಟು ಕ್ಯಾನ್ಸರ್‌ ರೋಗಿಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಡಾ. ಬಸವರಾಜ ಬೊಮ್ಮನಹಳ್ಳಿ ಜಿಮ್ಸ್‌ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT