ರೋಣ: ರಂಗೇರುತ್ತಿರುವ ಸ್ಥಳೀಯ ರಾಜಕಾರಣ

7

ರೋಣ: ರಂಗೇರುತ್ತಿರುವ ಸ್ಥಳೀಯ ರಾಜಕಾರಣ

Published:
Updated:
Deccan Herald

ರೋಣ: ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ಪಟ್ಟಣದಲ್ಲಿ ನಿಧಾನವಾಗಿ ಏರುತ್ತಿದ್ದು, ಸ್ಥಳೀಯ ರಾಜಕಾರಣ ಗರಿಗೆದರಿದೆ. ಶತಾಯ ಗತಾಯ ಸ್ಥಳೀಯ ಸಂಸ್ಥೆಯ ಅಧಿಕಾರವನ್ನು ತಮ್ಮ ತೆಕ್ಕೆಯಲ್ಲಿ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಕಸರತ್ತು ನಡೆಸಿವೆ.

ಮೂರು ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಿದೆ. ದಿನೇ ದಿನೇ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿರುವುದು ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ.

ವಾರ್ಡ್‌ ಮೀಸಲಾತಿಯಲ್ಲಿ ವ್ಯತ್ಯಾಸ ಆಗಿರುವುದರಿಂದ ಅನೇಕ ಅಭ್ಯರ್ಥಿಗಳಿಗೆ ಅವಕಾಶ ಕೈತಪ್ಪಿದ್ದು, ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಚುನಾವಣೆ ಮತ್ತು ಮೀಸಲಾತಿ ಪ್ರಕಟಗೊಳ್ಳುವ ಪೂರ್ವದಲ್ಲಿ ಟಿಕೆಟ್‌ ಆಕಾಂಕ್ಷಿಗಳು ಹಾಕಿಕೊಂಡಿದ್ದ ಲೆಕ್ಕಾಚಾರ ಈಗ ತಲೆಕೆಳಗಾಗಿದೆ.

ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್‌ ನೀಡಲಾಗುತ್ತದೆ ಎನ್ನಲಾಗುತ್ತಿದ್ದರೂ, ಶಾಸಕರ ನಿರ್ಧಾರವೇ ಅಂತಿಮ ಎನ್ನುವ ಅಭಿಪ್ರಾಯಗಳೂ ಕೇಳಿಬರುತ್ತಿವೆ. ಜಾತಿ ರಾಜಕಾರಣವೂ ಮುನ್ನೆಲೆಗೆ ಬಂದಿದ್ದು, ತಮ್ಮ ಸಮುದಾಯದ ಮತದಾರರು ಹೆಚ್ಚಿರುವ ವಾರ್ಡ್‌ಗಳಲ್ಲಿ ಕಣಕ್ಕಿಳಿಯಲು ಅಭ್ಯರ್ಥಿಗಳಲ್ಲಿ ಪೈಪೋಟಿ ಪ್ರಾರಂಭವಾಗಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಿರುವ ವಾರ್ಡಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಏರುತ್ತಿದೆ. ರಾಷ್ಟ್ರೀಯ ಪಕ್ಷಗಳ ಟಿಕೆಟ್‌ ವಂಚಿತ ಆಕಾಂಕ್ಷಿಗಳು ಪಕ್ಷೇತರರಾಗಿ ಕಣಕ್ಕಿಳಿಯುವ ಬಂಡಾಯ ಸೂಚನೆಯನ್ನು ಈಗಾಗಲೇ ನೀಡಿದ್ದಾರೆ.

ಮಾಜಿ ಶಾಸಕರ ಪುತ್ರ ಕಣಕ್ಕೆ?
ಪುರಸಭೆ ವ್ಯಾಪ್ತಿಯ 23 ವಾರ್ಡಗಳಲ್ಲಿ 7ನೇ ವಾರ್ಡ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಇಲ್ಲಿ ‘ಸಾಮಾನ್ಯ’ ಮಿಸಲಾತಿ ಇದ್ದು, ಈ ವಾರ್ಡ್‌ನಿಂದ ಮಾಜಿ ಶಾಸಕ ಜಿ.ಎಸ್.ಪಾಟೀಲ ಅವರ ಪುತ್ರ ಮಿಥುನ್.ಜಿ.ಪಾಟೀಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿಬರುತ್ತಿವೆ. ಆದರೆ, ನಾಮಪತ್ರ ಸಲ್ಲಿಕೆಯಾದ ನಂತರವೇ ಇದು ಖಾತ್ರಿಯಾಗಲಿದೆ.

ರೋಣ ಪುರಸಭೆ 23 ಸ್ಥಾನಗಳು 

ಕಾಂಗ್ರೆಸ್‌ – 16
ಬಿಜೆಪಿ –05
ಪಕ್ಷೇತರ–01
ಬಿಎಸ್‌ಆರ್‌–01

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !