ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧಮಕ್ಕಳ ಆಶಾಕಿರಣ ಜ್ಞಾನಸಿಂಧು ಶಾಲೆ

‘ನಾಟ್ಯಯೋಗ’ವನ್ನು ವಿಶ್ವದರ್ಶನ ಮಾಡಿಸಿದ ಮಕ್ಕಳು
Last Updated 7 ಡಿಸೆಂಬರ್ 2018, 17:38 IST
ಅಕ್ಷರ ಗಾತ್ರ

ರೋಣ: ರಾಜ್ಯದಲ್ಲಿ ಅಂಧ ಮಕ್ಕಳಿಗಾಗಿ 30 ವಸತಿ ಶಾಲೆಗಳಿದ್ದರೂ, ಇವುಗಳಲ್ಲಿ ಭಿನ್ನವಾಗಿ ನಿಲ್ಲುವುದು ರೋಣ ತಾಲ್ಲೂಕು ಹೊಳೆ ಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ. ಈ ಶಾಲೆಯು ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.

ಯೋಗಪಟು ಶಿವಾನಂದ ಕೇಲೂರ ಅವರು 2010ರಲ್ಲಿ ಐವರು ಮಕ್ಕಳೊಂದಿಗೆ ಬಾಡಿಗೆ ಕಟ್ಟಡದಲ್ಲಿ ಈ ವಸತಿ ಶಾಲೆ ಪ್ರಾರಂಭಿಸಿದರು. ಸದ್ಯ 1ರಿಂದ 9ನೇ ತರಗತಿವರೆಗೆ 90ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಅಂಧ ಮಕ್ಕಳಿಗೆ ಪಾಠ ಮಾಡಲು ವಿಶೇಷ ತರಬೇತಿ ಪೂರ್ಣಗೊಳಿಸಿರುವ 12 ಮಂದಿ ಶಿಕ್ಷಕರು ಇಲ್ಲಿದ್ದಾರೆ. ಯೋಗ ಮತ್ತು ಮಲ್ಲಗಂಬ ಸಾಧನೆ ಮೂಲಕ ಈ ಶಾಲೆಯ ಮಕ್ಕಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಬ್ರೈಲ್‌ ಲಿಪಿ, ಪರಿಸರ, ಸಮಾಜ ವಿಜ್ಞಾನ, ವಾಣಿಜ್ಯ, ಕಂಪ್ಯೂಟರ್‌ ಹೀಗೆ ಎಲ್ಲ ವಿಷಯಗಳನ್ನು ಇಲ್ಲಿ ಕಲಿಸಲಾಗುತ್ತದೆ. ಮಕ್ಕಳ ನ್ಯೂನತೆ ಹೋಗಲಾಡಿಸಿ ಅವರಿಗೆ ಸ್ವತಂತ್ರ ಜೀವನ ರೂಪಿಸಿಕೊಡುವಲ್ಲಿ ಈ ಶಾಲೆಯು ಮಹತ್ವದ ಪಾತ್ರ ವಹಿಸಿದೆ.

ಶಿವಾನಂದ ಕೇಲೂರ ಅವರ ತಾಯಿ ತುಳಸಮ್ಮ ಕೇಲೂರ ಅವರ ಶ್ರಮವೂ ಈ ಶಾಲೆಯ ಪ್ರಗತಿಯ ಹಿಂದೆ ದೊಡ್ಡ ಮಟ್ಟದಲ್ಲಿದೆ. ಆರ್ಥಿಕ ಸಂಪನ್ಮೂಲದ ಕೊರತೆ ಮತ್ತು ಪ್ರಾಯೋಜಕರು ಇಲ್ಲದಿರುವುದು ಕೂಡ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಅಡ್ಡಿಯಾಗಿದೆ.ಆದರೆ, ಈ ಸವಾಲುಗಳನ್ನು ಮೆಟ್ಟಿನಿಂತು, ತುಳಸಮ್ಮ ಅವರು ಶಾಲೆಯ ಮಕ್ಕಳನ್ನು, ತಮ್ಮ ಮಕ್ಕಳಂತೆ ನೋಡಿಕೊಂಡು, ಅವರ ಸಾಧನೆಯ ವಿಶ್ವದರ್ಶನ ಮಾಡಿಸಿದ್ದಾರೆ.

ಈ ಶಾಲೆಯ ವಿಶೇಷ ಮಕ್ಕಳು ‘ನಾಟ್ಯಯೋಗ’ದ ಹೊಸ ಪ್ರಕಾರವನ್ನೇ ವಿಶ್ವದೆದುರು ತೆರೆದಿಟ್ಟಿದ್ದಾರೆ.ಮಲ್ಲಗಂಬ ಸಂಗೀತ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.ಮಕ್ಕಳ ಸಾಧನೆಯ ಮೂಲಕ ಶಾಲೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ ಲಭಿಸಿದೆ. ಇತ್ತೀಚೆಗೆ ಅಂದರೆ ಡಿ.3ರಂದು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅತ್ಯುತ್ತಮ ಸೇವಾ ಪ್ರಶಸ್ತಿಯೂ ಶಾಲೆಗೆ ಲಭಿಸಿದೆ.

*
ಅಂಧ ಮಕ್ಕಳಿಗಾಗಿ ಬ್ರೈಲ್‌ಲಿಪಿ ಪಠ್ಯ ಪುಸ್ತಕಗಳು ಸಮರ್ಪಕವಾಗಿ ಲಭಿಸುತ್ತಿಲ್ಲ. ಹೀಗಾಗಿ ಅವರಿಗೆ ಅನುಕೂಲವಾಗುವಂತೆ ಶಾಲೆಯಲ್ಲಿ ಆಡಿಯೊ ಲೈಬ್ರರಿ ಪ್ರಾರಂಭಿಸುವ ಯೋಜನೆ ಇದೆ.
–ಶಿವಾನಂದ ಕೇಲೂರ, ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT