ಗಾಂಧಿ ಜಯಂತಿಗೆ ಕೆರೆ ಸ್ವಚ್ಛತೆ, ಶ್ರಮದಾನ

7
ಜಿಲ್ಲಾಡಳಿತ, ನಗರಾಡಳಿತದಿಂದ ಜಾಗೃತಿ ಕಾರ್ಯಕ್ರಮ; ನೂರಾರು ವಿದ್ಯಾರ್ಥಿಗಳು ಭಾಗಿ

ಗಾಂಧಿ ಜಯಂತಿಗೆ ಕೆರೆ ಸ್ವಚ್ಛತೆ, ಶ್ರಮದಾನ

Published:
Updated:
Deccan Herald

ಗದಗ: ಜಿಲ್ಲೆಯಾದ್ಯಂತ ಮಂಗಳವಾರ ಸ್ವಚ್ಛತೆ ಮತ್ತು ಶ್ರಮದಾನದ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಕೇಂದ್ರವಾದ ಗದುಗಿನಲ್ಲಿ ಜಿಲ್ಲಾಡಳಿತ, ನಗರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭೀಷ್ಮಕೆರೆ ಮತ್ತು ಸಿಂಹದ ಕೆರೆ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಎಸ್‌ಎಸ್‌, ಎನ್‌ಸಿಸಿ ತಂಡಗಳು ಶ್ರಮದಾನದಲ್ಲಿ ಕೈಜೋಡಿಸಿದವು.
31ನೇ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಹಸಿರು ಕೇರೆ, ಕೊಂಚಿಕೊರವ ಓಣಿ, ಚನ್ನಮ್ಮ ವೃತ್ತದ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆ ಜಾಗೃತಿ ಮುಡಿಸಲಾಯಿತು.

ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ ಎಸ್.ಎನ್, ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಅಶೋಕ ಕಲಘಟಗಿ, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಭಾಗವಹಿಸಿದ್ದರು.

ಗಮನಸೆಳೆದ ಚಿತ್ರ ಪ್ರದರ್ಶನ
ಗದಗ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಅವರ ಜೀವನದ ಪ್ರಮುಖ ಘಟನಾವಳಿ ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದೆ. ಚಿತ್ರ ಪ್ರದರ್ಶನವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ ಉದ್ಘಾಟಿಸಿದರು. ಪ್ರದರ್ಶನವು ಅ.15ರವರೆಗೆ ನಡೆಯಲಿದೆ.

‘ಗಾಂಧೀಜಿ ಅವರು ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಸತ್ಯ, ಪ್ರೇಮ ಅಹಿಂಸೆ ಈ ಮೂರು ಆಯುಧಗಳ ಮೂಲಕ ಹೋರಾಡಿದ ಅವರು ವ್ಯಕ್ತಿ ಮಾತ್ರವಲ್ಲ, ದೊಡ್ಡ ಶಕ್ತಿ. ಸಮಾಜಿಕ ಸಮನಾನತೆಗಾಗಿ ಹೋರಾಡಿದ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ರವೀಂದ್ರ ಕೊಪ್ಪರ ಉಪನ್ಯಾಸ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿ ಕುರಿತು ಹೊರತಂದ ಜನಪದ, ಮಾರ್ಚ್ ಆಫ್ ಕರ್ನಾಟಕ ಸಂಚಿಕೆ ಹಾಗೂ ಕಿರುಪುಸ್ತಕ ಬಿಡುಗಡೆಗೊಳಿಸಲಾಯಿತು.

ವಿವಿಧೆಡೆ ಗಾಂಧಿ ಸ್ಮರಣೆ
ಶರಣ ಬಸವೇಶ್ವರ ಶಾಲೆ: ಇಲ್ಲಿನ ಶರಣ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಆಚರಿಸಲಾಯಿತು. ಆಡಳಿತಾಧಿಕಾರಿ ವೈ.ಆರ್.ಪಾಟೀಲ ಅಧ್ಯಕ್ಷತೆವಹಿಸಿದ್ದರು. ಎಸ್.ಎಸ್. ಶಿಶುವಿಹಳ್ಳಿ, ಪಿ.ಆರ್. ಹೂಗಾರ ಇದ್ದರು.

ಕನಕದಾಸ ಶಿಕ್ಷಣ ಸಮಿತಿ: ‘ಮಹಾತ್ಮ ಗಾಂಧಿ ಅವರು ಭಾರತ ಕಂಡ ಅಪರೂಪದ ಯುಗ ಪುರುಷ’ ಎಂದು ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ಡಾ.ಬಿ.ಎಫ್. ದಂಡಿನ ಹೇಳಿದರು.

ಕೆಎಸ್ಎಸ್ ಕಾಲೇಜು, ಕೆವಿಎಸ್ಆರ್, ಸಂಕೇತ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ನಡೆದ ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಾಚಾರ್ಯ ಅನಿಲ ವೈದ್ಯ, ಪ್ರೊ.ಕವಿತಾ ಕಾಸಪ್ಪನವರ, ಪ್ರಾಚಾರ್ಯ ಡಾ.ಟಿ.ಎನ್. ಗೋಡಿ, ಪ್ರೊ.ಎಸ್.ಕೆ. ಪಾಸಿ, ಡಾ.ಶರಣಬಸವ ವೆಂಕಟಾಪೂರ ಇದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ‘ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಬದುಕಿನ ಆದರ್ಶಗಳು ವಿಶ್ವಶಾಂತಿಗೆ ಅವಶ್ಯವಾಗಿದೆ. ಶಾಂತಿ, ಭಾತೃತ್ವ, ನೆಮ್ಮದಿಯಿಂದ ಕೂಡಿದ ಅವರ ಮೌಲ್ಯಗಳು ಅನುಕರನೀಯ’ ಎಂದು ಪ್ರಾಚಾರ್ಯ ಎಸ್.ಎಫ್. ಸಿದ್ನೇಕೊಪ್ಪ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಗಾಂಧೀಜಿ, ಶಾಸ್ತ್ರೀಜಿ ತತ್ವಾದರ್ಶಗಳು ಇಂದಿನ ಜಗತ್ತಿಗೆ ಶಾಂತಿಯ ಮಂತ್ರಗಳಾಗಿವೆ’ ಎಂದರು.

ಸಾಂಸ್ಕೃತಿಕ ವಿಭಾಗದ ಸಂಚಾಲಕ ಪ್ರೊ.ಆರ್.ಎಂ. ಕಲ್ಲನಗೌಡರ ಇದ್ದರು.

ನಗರಸಭೆ ಕಾಲೇಜು: ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ನಗರಸಭೆ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಸ್ವಯಂ ಸೇವಕರು ಭೀಷ್ಮ ಕೆರೆ ಆವರಣವನ್ನು ಸ್ವಚ್ಛಗೊಳಿಸಿದರು. ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಉಪಾದ್ಯಕ್ಷ ಪ್ರಕಾಶ ಬಾಕಳೆ, ಸದಸ್ಯ ಬಿ.ಬಿ.ಅಸೂಟಿ, ಜಯಶ್ರೀ ಬೈರವಾಡೆ, ಕಮಲಾ ಹಾದಿಮನಿ, ಎಇಇ ಎಲ್.ಜಿ. ಪತ್ತಾರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಹಿರೇಮಠ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ವಿ.ಬಿ.ಕರಮುಡಿ ಪಾಲ್ಗೊಂಡಿದ್ದರು.

ಯುವ ಕಾಂಗ್ರೆಸ್ ಸಮಿತಿ: ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !