ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಸಸ್ಯಪಾಲನಾ ಕೇಂದ್ರದಲ್ಲಿ ಹಸಿರಿಗಿಲ್ಲ ಬರ

ನಾಟಿಗಾಗಿ ಕಾಯುತ್ತಿರುವ 42 ಸಾವಿರ ಸಸಿ ಮತ್ತು ಗಿಡಗಳು
Published 16 ಏಪ್ರಿಲ್ 2024, 4:50 IST
Last Updated 16 ಏಪ್ರಿಲ್ 2024, 4:50 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಸುಡು ಬಿಸಿಲ ಬೇಗೆಯ ಹಿನ್ನೆಲೆಯಲ್ಲಿ ಸದ್ಯ ಇಡೀ ತಾಲ್ಲೂಕಿನ ಕಾಡುಮೇಡುಗಳಲ್ಲಿ ಒಣಗಿದ ಗಿಡ ಮರಗಳು ಕಂಡು ಬರುತ್ತಿವೆ. ನೆತ್ತಿ ಸುಡುವ ಪ್ರಖರ ಬಿಸಿಲು ಸಣ್ಣ ಸಣ್ಣ ಗಿಡಗಳನ್ನೂ ಒಣಗಿಸುತ್ತಿದೆ. ಎಲ್ಲಿ ನೋಡಿದರೂ ಬರೀ ನೆಲ ಕಣ್ಣಿಗೆ ರಾಚುತ್ತದೆ. ಆದರೆ ತಾಲ್ಲೂಕಿನ ಶೆಟ್ಟಿಕೇರಿ ಗ್ರಾಮದ ಹೊರವಲಯದಲ್ಲಿರುವ ಸಾಮಾಜಿಕ ವಲಯ ಅರಣ್ಯದ ನರ್ಸರಿಯಲ್ಲಿ ಮಾತ್ರ ಹಚ್ಚ ಹಸಿರು ವನಸಿರಿ ಮೈ ಮನಸ್ಸಿಗೆ ಮುದ ನೀಡುತ್ತಿದೆ.

ಬಿಸಿಲಲ್ಲಿ ಸುತ್ತಾಡಿ ಇಲ್ಲಿಗೆ ಬಂದಾಗ ಮನಸ್ಸು ತಣ್ಣಗಾಗುತ್ತದೆ. ಅಂದಾಜು 8 ಎಕರೆ ವಿಸ್ತೀರ್ಣದ ನರ್ಸರಿಯಲ್ಲಿ ಕಷ್ಟಪಟ್ಟು ಬೆಳೆಸಿದ ಸಾವಿರಾರು ಸಸಿ ಮತ್ತು ಗಿಡಗಳು ಗಮನ ಸೆಳೆಯುತ್ತಿವೆ. ಇಲ್ಲಿಯ ಹಸಿರು ವಾತಾವರಣ ಪ್ರಾಣಿ–ಪಕ್ಷಿಗಳಿಗೆ ಉಸಿರು ನೀಡಿದೆ.

ನರ್ಸರಿಯಲ್ಲಿ ಇರುವ ಎರಡು ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರಿದೆ. ಅದರಿಂದ ಸಸಿಗಳನ್ನು ಬೆಳೆಸಲು ಅನುಕೂಲವಾಗಿದೆ.
ಮಹಾಂತೇಶ ಲಮಾಣಿ, ಅರಣ್ಯ ಪಾಲಕ ಸಾಮಾಜಿಕ ವಲಯ, ಅರಣ್ಯ ಇಲಾಖೆ

ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಬೆಳೆಸುವುದಕ್ಕಾಗಿ 14X20 ಇಂಚು ಅಳತೆಯ ಬಸವನಪಾದ, ಮಹಾಗನಿ, ಬೇವು, ಇಲಾಚಿ ಹುಣಸೆ, ನೇರಳೆ, ಹೊಳಿಮತ್ತಿ, ಹೊಂಗೆ, ತಪಸಿಯ ಎಂಟು ಸಾವಿರ ಗಿಡಗಳನ್ನು ಬೆಳೆಸಲಾಗುತ್ತಿದೆ. 10X16 ಇಂಚು ಅಳತೆಯ ಮಹಾಗನಿ, ಸ್ಪೆಥೋಡಿಯಾ, ಗುಲ್‍ಮೊಹರ್, ಬೇವು, ತಪಸಿ ಮತ್ತು ಕಾಡು ಬಾದಾಮಿಯ ಎರಡು ಸಾವಿರ ಗಿಡಗಳನ್ನು ಶಾಲೆ, ಕಾಲೇಜು, ಸ್ಮಶಾನ ಸೇರಿದಂತೆ ಖಾಲಿ ಜಾಗಗಳಲ್ಲಿ ಬೆಳೆಸುವುದಕ್ಕಾಗಿ ಜೋಪಾನ ಮಾಡಲಾಗುತ್ತಿದೆ. ಇನ್ನು ರೈತರಿಗಾಗಿ ಕರಿಬೇವು, ಪೇರಲ, ಮಹಾಗನಿ, ಲಿಂಬೂ, ಸಾಗವಾನಿ, ಬೇವು, ಸಿಲ್ವರ್‌ಓಕ್, ಅಶೋಕ ಸೇರಿದಂತೆ 32 ಸಾವಿರ ಸಸಿಗಳು ಸೇರಿ ಅಂದಾಜು 42 ಸಾವಿರ ಸಸಿ ಮತ್ತು ಗಿಡಗಳು ನಾಟಿಗಾಗಿ ಕಾಯುತ್ತಿವೆ.

‘ಈ ಸಲದ ಮಳೆಗಾಲದಲ್ಲಿ ನಾಟಿ ಮಾಡಲು ಈಗಾಗಲೇ ನಮ್ಮ ನರ್ಸರಿಯಲ್ಲಿ 42 ಸಾವಿರ ಸಸಿಗಳನ್ನು ಬೆಳೆಸುತ್ತಿದ್ದೇವೆ. ನರೇಗಾ ಯೋಜನೆಯಡಿ ರೈತರಿಗೆ ಉಚಿತವಾಗಿ ಸಸಿ ನೀಡಲಾಗುವುದು’ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೌಶಿಕ ದಳವಾಯಿ ತಿಳಿಸಿದರಲ್ಲದೇ ‘ಸಾರ್ವಜನಿಕರು ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಲು ಮುಂದಾಗಬೇಕು. ಇಂದು ನಾವು ಹಸಿರು ಬೆಳೆಸದಿದ್ದರೆ ಮುಂದೆ ದುರ್ದಿನ ದಿನಗಳು ಎಂಬ ಸತ್ಯವನ್ನು ಎಲ್ಲರೂ ಅರ್ತ ಮಡಿಕೊಳ್ಳಬೇಕು. ರಸ್ತೆಗಳ ಎರಡೂ ಬದಿಗಳಲ್ಲಿ ಇಲಾಖೆ ಬೆಳೆಸಿರುವ ಗಿಡ ಮರಗಳಿಗೆ ಧಕ್ಕೆ ಮಾಡದೇ ಅವುಗಳನ್ನು ಬೆಳೆಸಬೇಕು. ರಸ್ತೆ ಬದಿಯಲ್ಲಿ ಬೆಳೆಯುತ್ತಿರುವ ಗಿಡಗಳಿಗೆ ನೀರುಣಿಸುವ ಕೆಲಸ ನಿರಂತರವಾಗಿ ನಡೆದಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT