ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಅಭ್ಯರ್ಥಿಗಳ ಗೆಲುವಿಗೆ ಗ್ಯಾರಂಟಿಗಳ ಬಲ: ಆನಂದ ಗಡ್ಡದೇವರಮಠ

Published 6 ಏಪ್ರಿಲ್ 2024, 16:01 IST
Last Updated 6 ಏಪ್ರಿಲ್ 2024, 16:01 IST
ಅಕ್ಷರ ಗಾತ್ರ

ಮುಂಡರಗಿ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದಿಂದ ದೇಶದ ಜನತೆ ಭ್ರಮನಿರಸನಗೊಂಡಿದ್ದು, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿಗಳ ಬಲದಿಂದ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಹಾವೇರಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಶಿರಹಟ್ಟಿ ಮತಕ್ಷೇತ್ರದ ಎಲ್ಲ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಈ ಕಾರಣದಿಂದ ನನ್ನ ಗೆಲುವು ತುಂಬಾ ಸುಲಭವಾಗಿದೆ. ಹಾವೇರಿ ಕ್ಷೇತ್ರ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ’ ಎಂದು ವಿಶ್ವಾಸ  ವ್ಯಕ್ತ ಪಡಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ‘ಸಂವಿಧಾನವು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಭದ್ರ ಬುನಾದಿಯಾಗಿದೆ. ಅದು ದೇಶದ ಎಲ್ಲ ಜನತೆಗೆ ಸಮಾನತೆ ನೀಡಿದೆ. ಆದರೆ ಬಿಜೆಪಿಯು ಸಂವಿಧಾನದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದು, ಸಂವಿಧಾನವನ್ನು ಬದಲಿಸಲು ಮುಂದಾಗಿದೆ. ಏಕವ್ಯಕ್ತಿ ಕೇಂದ್ರಿತ ಬಿಜೆಪಿಯನ್ನು ನಾವೆಲ್ಲ ಸೋಲಿಸಬೇಕು’ ಎಂದು ತಿಳಿಸಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ‘ಬಿಜೆಪಿಯ ದುರಾಡಳಿತದಿಂದ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರಿದ್ದಾರೆ. ಗೃಹಲಕ್ಷ್ಮಿ, ಸ್ತ್ರೀಶಕ್ತಿ, ಅನ್ನಭಾಗ್ಯ ಮೊದಲಾದವುಗಳನ್ನು ನೀಡಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದ ಅವರ ಗೆಲುವಿಗೆ ನಾವೆಲ್ಲ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಟಿ. ಈಶ್ವರ ಮಾತನಾಡಿ, ‘ಜಾತಿ ಹಾಗೂ ಧರ್ಮಗಳ ಆಧಾರದ ಮೇಲೆ ಬಿಜೆಪಿಯು ಜನರನ್ನು ಒಡೆದು ಆಳುತ್ತಲಿದೆ. ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಲ್ಲದ ಬಿಜೆಪಿ ನಾಯಕರು ಆಡಳಿತದಲ್ಲಿ ಸಮಾನತೆಯನ್ನು ತರಲು ಸಾಧ್ಯವಿಲ್ಲ. ಈ ಕಾರಣದಿಂದ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಅವರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಮುಂಖಡರಾದ ಸುಜಾತಾ ದೊಡ್ಡಮನಿ, ಸಾಕೀರ್ ಸನದಿ ಮಾತನಾಡಿದರು. ನಂತರ ತಾಲ್ಲೂಕಿನ ಹಮ್ಮಿಗಿ, ಬಾಗೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡರು.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ .ಮೋರನಾಳ, ವಿ.ಎಲ್. ನಾಡಗೌಡರ, ಕೆಪಿಸಿಸಿ ಕಾರ್ಯದರ್ಶಿ ಎಸ್.ಡಿ. ಮಕಾಂದಾರ, ರುದ್ರಗೌಡ ಪಾಟೀಲ, ಸುರೇಶ ಮಾಗಡಿ, ಯಲ್ಲಪ್ಪ ಹೊಂಬಳಗಟ್ಟಿ, ಶೋಭಾ ಮೇಟಿ, ಡಿ.ಎಂ.ಕಾತರಕಿ, ಪೂಜಾ ಕಮ್ಮಾರ, ಸೌಭ್ಯಾಗ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT