ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ಉಲ್ಲಂಘನೆಗೆ ಶಿಕ್ಷೆ ಇದೆ: ನ್ಯಾಯಾಧೀಶ ಕೆ. ಗುರುಪ್ರಸಾದ

ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿ ನ್ಯಾಯಾಧೀಶ ಕೆ. ಗುರುಪ್ರಸಾದ
Published 12 ಡಿಸೆಂಬರ್ 2023, 12:57 IST
Last Updated 12 ಡಿಸೆಂಬರ್ 2023, 12:57 IST
ಅಕ್ಷರ ಗಾತ್ರ

ಗದಗ: ‘ಸಮಾಜದಲ್ಲಿ ಮಾನವ ಹಕ್ಕು ಉಲ್ಲಂಘನೆಯಂತಹ ಘಟನೆಗಳು ನಡೆದ ಒಂದು ವರ್ಷದೊಳಗೆ ಸಂಬಂಧಿಸಿದ ದಾಖಲೆಗಳೊಂದಿಗೆ ರಾಜ್ಯ ಅಥವಾ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಿಸಿ, ನ್ಯಾಯ ಕಂಡುಕೊಳ್ಳಬಹುದು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಹೇಳಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾನವ ಹಕ್ಕು ಆಯೋಗವು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಮಾನವ ಹಕ್ಕು ಪ್ರಕರಣಗಳು ಹೆಚ್ಚಾಗಿ ಸರ್ಕಾರಿ ಸಂಸ್ಥೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಪೊಲೀಸ್‌ ಇಲಾಖೆ, ಅರಣ್ಯ ಇಲಾಖೆ, ಕಾರಾಗೃಹಗಳಲ್ಲಿ ಕಂಡುಬರುತ್ತವೆ. ಮಾನವನಿಗೆ ಸಮಾಜದಲ್ಲಿ ಘನತೆಯಿಂದ ಜೀವಿಸಲು ಅಗತ್ಯವಿರುವ ಎಲ್ಲ ಕಾನೂನಾತ್ಮಕ ಹಕ್ಕುಗಳು ಮಾನವ ಹಕ್ಕುಗಳಾಗಿವೆ. ಇವುಗಳಿಗೆ ಧಕ್ಕೆ ಬಂದಲ್ಲಿ ಆಯೋಗದಲ್ಲಿ ದೂರು ದಾಖಲಿಸಿ ನ್ಯಾಯ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

‘ಮಾನವ ಹಕ್ಕುಗಳ ಆಯೋಗವು ಉಲ್ಲಂಘನೆ ಪ್ರಕರಣಗಳ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಹಕ್ಕುಗಳ ಉಲ್ಲಂಘನೆ ಖಚಿತವಾದಲ್ಲಿ ಅವುಗಳ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಅಲ್ಲಿಂದ ಶಿಫಾರಸು ವರದಿಯನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ‘ಸಂವಿಧಾನವು ಪ್ರತಿ ಮನುಷ್ಯನಿಗೂ ಘನತೆಯಿಂದ ಜೀವಿಸುವ ಅವಕಾಶ ಕೊಟ್ಟಿದೆ. ‘ಸಮಾನತೆ, ಸ್ವಾತಂತ್ರ್ಯ, ಎಲ್ಲರಿಗೂ ನ್ಯಾಯ ಒದಗಿಸೋಣ’ ಎಂಬುದು ಈ ವರ್ಷದ ಮಾನವ ಹಕ್ಕುಗಳ ದಿನಾಚರಣೆಯ ಘೋಷಣೆಯಾಗಿದೆ. ಸಮಾಜದ ಪ್ರತಿ ನಾಗರಿಕನೂ ಮಾನವ ಹಕ್ಕುಗಳ ಸಂರಕ್ಷಣೆ ನಮ್ಮಆದ್ಯ ಕರ್ತವ್ಯವೆಂದು ತಿಳಿಯಬೇಕು’ ಎಂದು ತಿಳಿಸಿದರು.

ನಿವೃತ್ತ ನ್ಯಾಯಮೂರ್ತಿ ಎಸ್.ಜಿ. ಪಲ್ಲೇದ ಮಾತನಾಡಿ, ‘ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ನಾಗರಿಕರ ಕರ್ತವ್ಯಗಳನ್ನು ಅರಿಯುವ ಜಾಗೃತಿ ಕಾರ್ಯಕ್ರಮ ಇದಾಗಿದೆ. ಮನುಷ್ಯ ಮನುಷ್ಯನನ್ನು ಪ್ರೀತಿ, ಗೌರವ, ಆದರ, ಘನತೆಯಿಂದ ಕಾಣುವುದು ಮಾನವ ಹಕ್ಕುಗಳ ರಕ್ಷಣೆಯಾಗುತ್ತದೆ. ದೌರ್ಜನ್ಯ ಎಸಗುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ತಿಳಿಸಿದರು.

‘ಮಾನವ ಹಕ್ಕುಗಳ ಉಲ್ಲಂಘನೆ ಮೊದಲು ಆರಂಭವಾಗುವುದೇ ಕುಟುಂಬ ಹಾಗೂ ನೆರೆಹೊರೆಯ ಸಮಾಜದಿಂದ. ನಾವೆಲ್ಲರೂ ಸಮಾಜದ ಎಲ್ಲರೊಂದಿಗೂ ಪ್ರೀತಿ, ವಿಶ್ವಾಸ, ಗೌರವದಿಂದ ನಡೆದುಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಅನ್ಯೋನ್ಯವಾಗಿ ಜೀವಿಸಬೇಕು’ ಎಂದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾನವ ಹಕ್ಕುಗಳ ಪ್ರತಿಜ್ಞಾವಿಧಿ ಬೋಧಿಸಿದರು. ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ, ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ. ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಂಜರಿ ಹೊಂಬಾಳಿ ಕಾರ್ಯಕ್ರಮ ನಿರೂಪಿಸಿದರು.

ಮಾನವ ಹಕ್ಕುಗಳ ಉಲ್ಲಂಘನೆ ಆರಂಭವಾಗುವುದೇ ಕುಟುಂಬದಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಜಾಗೃತಿ ವಹಿಸಿ ‘ಸಮಾನತೆ, ಸ್ವಾತಂತ್ರ್ಯ, ಎಲ್ಲರಿಗೂ ನ್ಯಾಯ ಒದಗಿಸೋಣ’- ಘೋಷವಾಕ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT