ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದ್ಯತೆ ಮೇರೆಗೆ ತಪಾಸಣೆ ನಡೆಸಿ, ಅರಿವು ಮೂಡಿಸಿ

ಡಿಸೆಂಬರ್ 1ರಿಂದ 30ರ ವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ
Last Updated 23 ನವೆಂಬರ್ 2020, 17:20 IST
ಅಕ್ಷರ ಗಾತ್ರ

ಗದಗ: ‘ಡಿ.1ರಿಂದ 30ರ ವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಆಂದೋಲನ ನಡೆಯಲಿದ್ದು, ಅದರ ಯಶಸ್ಸಿಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕ್ಷಯ (ಟಿಬಿ) ಪ್ರಕರಣಗಳನ್ನು ಕಂಡು ಹಿಡಿದು, ಚಿಕಿತ್ಸೆ ನೀಡುವುದು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವುದು ಆಂದೋಲನದ ಮುಖ್ಯ ಉದ್ದೇಶ. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಕಟ್ಟಕಡೆಯ ಹಳ್ಳಿ ತಾಂಡಾ, ಕೆಳ ಸಮುದಾಯದ ಜನರನ್ನು ಗುರಿಯಾಗಿಸಿ ಅವರಿಗೂ ಕ್ಷಯ ರೋಗದ ಕುರಿತು ಅರಿವು ಮೂಡಿಸಬೇಕು. ನಗರ ಪ್ರದೇಶಗಳಲ್ಲಿ ಸ್ಲಂಗಳು, ಖೈದಿಗಳು, ವೃದ್ಧಾಪ್ಯ ಕೇಂದ್ರಗಳು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರಾಶ್ರಿತರ ಶಿಬಿರಗಳು, ವಸತಿರಹಿತರು, ಬೀದಿ ಬದಿ ಮಕ್ಕಳನ್ನು ಗುರಿಯಾಗಿಸಿಕೊಂಡು ಆದ್ಯತೆ ಮೇರೆಗೆ ತಪಾಸಣೆ ನಡೆಸಿ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ‘ಗದಗ ಜಿಲ್ಲೆಯಲ್ಲಿ 2,38,124 ಜನರನ್ನು ತಪಾಸಣೆಗೆ ಒಳಪಡಿಸಲು 323 ತಂಡಗಳನ್ನು ರಚಿಸಲಾಗಿದೆ. ಆರಂಭಿಕ ಟಿಬಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಾಥಮಿಕ ಉದ್ದೇಶದೊಂದಿಗೆ ಉದ್ದೇಶಿತ ಗುಂಪುಗಳಲ್ಲಿ ಸಕ್ರಿಯ ಪ್ರಕರಣ ಕಂಡು ಹಿಡಿಯುವುದು ಮತ್ತು ಚಿಕಿತ್ಸೆ ನೀಡುವುದು ಆಂದೋಲನದ ಗುರಿ’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಬಿ.ಎಂ.ಗೊಜನೂರ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಡಾ.ಎಚ್.ಎಸ್.ಕುಕನೂರ, ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಾದ ಡಾ. ಸ್ವಾತಿ, ಡಾ. ಅರುಂಧತಿ, ಸಮಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT